Advertisement

ಆ. 1ರಿಂದ ಕಟ್ಟುನಿಟ್ಟಿನ ಜಾರಿ: ಕೆ.ಎಲ್‌. ಪುಂಡರೀಕಾಕ್ಷ

06:10 AM Jul 30, 2017 | |

ಕುಂಬಳೆ: ಕುಂಬಳೆ ಪೇಟೆ ಮತ್ತು ಬಸ್‌ ನಿಲ್ದಾಣ ಪ್ರದೇಶ ಕೇಂದ್ರೀಕರಿಸಿ ಆ. 1ರಿಂದ ಟ್ರಾಫಿಕ್‌ ಪರಿಷ್ಕರಣೆ ಜಾರಿಗೆ ತರಲಾಗುವುದು. ನಿರಂತರವಾಗಿ ವ್ಯಾಪಾರಿಗಳು ಹಾಗೂ ಮೀನು ಮಾರಾಟಗಾರರು ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಡೆಸುತ್ತಿರುವ ಮಾರಾಟ ಕ್ರಮಗಳಿಗೆ ನಿಯಂತ್ರಣ ಹೇರಲಾಗುವುದು ಹಾಗೂ ಅವರಿಗೆ ಒದಗಿಸಿದ ನಿಗದಿತ ಸ್ಥಳದಲ್ಲೇ ವ್ಯಾಪಾರ ವ್ಯವಹಾರ ನಡೆಸಬೇಕಿದ್ದು, ತಪ್ಪಿದರೆ ದಂಡ ವಿಧಿಸಲಾಗುವುದು ಎಂದು ಕುಂಬಳೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎಲ್‌. ಪುಂಡರೀಕಾಕ್ಷ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ಕುಂಬಳೆ ಸರ್ಕಲ್‌ ಸುತ್ತಮುತ್ತ ಯಾವುದೇ ವಾಹನಗಳನ್ನು ಪಾರ್ಕ್‌ ಮಾಡುವಂತಿಲ್ಲ. ರಸ್ತೆಯಂಚಿನ ಬಿಳಿ ಗುರುತುಗಳನ್ನು ಮೀರಿ ಪಾರ್ಕ್‌ ಮಾಡಲಾಗುವ ವಾಹನಗಳಿಗೆ ದಂಡ ವಿಧಿಸಲಾಗುವುದು. ನಾಲ್ಕುಚಕ್ರ ವಾಹನಗಳು ಕಣಿಪುರ ಕ್ಷೇತ್ರ ಸಮೀಪದ ನಿಗದಿತ ಸ್ಥಳದಲ್ಲೇ ಪಾರ್ಕ್‌ ಮಾಡತಕ್ಕದ್ದು. ರೈಲ್ವೇ  ನಿಲ್ದಾಣಕ್ಕೆ ತೆರಳುವ ವಿದ್ಯಾರ್ಥಿಗಳು ಮತ್ತು ಉದ್ಯೋಗಾರ್ಥಿಗಳಿಗೆ  ಹೆದ್ದಾರಿ ಸಮೀಪ ನಿಗದಿತ ಸ್ಥಳ ಗುರುತಿಸಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗುವುದು. ಬಸ್‌ಗಳು ನಿಲ್ದಾಣದೊಳಗಡೆ ತೆರಳಲು ಐದು ನಿಮಿಷಗಳ ಮೊದಲು ಮಾತ್ರವೇ ಆಗಮಿಸಬಹುದಾಗಿದ್ದು, ಗಂಟೆಗಳಷ್ಟು ಹೊತ್ತು ನಿಲ್ದಾಣದೊಳಗಡೆ ಯಾವುದೇ ಬಸ್‌ಗಳು ಆಗಮಿಸು ವಂತಿಲ್ಲ. ಸೂಚನಾ ಫಲಕಗಳನ್ನು ಎಲ್ಲ ಸ್ಥಳಗಳಲ್ಲಿ ವ್ಯವಸ್ಥೆಗೊಳಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ನೂತನ ವ್ಯವಸ್ಥೆ ಜಾರಿಗೆ ಕುಂಬಳೆ ಪೊಲೀಸ್‌ ಠಾಣಾಧಿಕಾರಿಗಳು ಸಂಪೂರ್ಣ ಬೆಂಬಲ ನೀಡಲಿದ್ದು, ವ್ಯಾಪಾರಿಗಳು, ವಾಹನ ಚಾಲಕರು, ಸಾರ್ವಜನಿಕರು ಸಹಕರಿಸಬೇಕೆಂದು ಗ್ರಾ.ಪಂ. ಅಧ್ಯಕ್ಷರು ವಿನಂತಿಸಿದ್ದಾರೆ. ಈ ಬಗ್ಗೆ ಸ್ಥಳ ನಿಗದಿಪಡಿಸುವುದರ ಜೊತೆಗೆ ಪೊಲೀಸರೊಂದಿಗೆ ಚರ್ಚಿಸಿ ಯೋಜನೆ ಜಾರಿಗೊಳಿಸಲು ಶುಕ್ರವಾರ ಕುಂಬಳೆ ಪೇಟೆಯಲ್ಲಿ ಪೊಲೀಸ್‌ ಅಧಿಕಾರಿಗಳೊಂದಿಗೆ ಪುಂಡರೀಕಾಕ್ಷ ಕೆ.ಎಲ್‌. ಅವರು ಸ್ಥಳ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next