ಬೆಂಗಳೂರು: ಕೋವಿಡ್-19ಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರ ನಡುವೆ ನಡೆದಿದ್ದ ಮುಸುಕಿನ ಗುದ್ದಾಟಕ್ಕೆ ಇದೀಗ ಸಚಿವ ಆರ್.ಅಶೋಕ್ ಹೊಸ ಸೇರ್ಪಡೆಯಾದಂತಿದೆ. ಡಾ.ಕೆ.ಸುಧಾಕರ್ ಅವರ ತಂದೆ, ಪತ್ನಿ, ಪುತ್ರಿಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆ ಯಲ್ಲಿ ಅವರು ಗೃಹ ಬಂಧನದಲ್ಲಿದ್ದಾರೆ.
ಹಾಗಿದ್ದರೂ ಮನೆಯಲ್ಲಿದ್ದುಕೊಂಡೇ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರೊಂದಿಗೆ ಸಂಪರ್ಕದಲ್ಲಿದ್ದು, ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ಉಸ್ತುವಾರಿ ನೋಡಿಕೊಳ್ಳುವಂತೆ ಆರ್.ಅಶೋಕ್ ಅವರಿಗೆ ಸೂಚಿಸಿದ್ದಾರೆ. ಆದರೆ ಈ ಬಗ್ಗೆ ಆದೇಶ ಹೊರಡಿಸಿಲ್ಲ.
ಬೆಂಗಳೂರು ಕೋವಿಡ್- 19 ಉಸ್ತುವಾರಿಯನ್ನು ಮುಖ್ಯಮಂತ್ರಿಗಳು ತಮಗೆ ವಹಿಸಿರುವುದಾಗಿ ಸ್ವತಃ ಆರ್.ಅಶೋಕ್ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದರು. ನಂತರ ಬೆಂಗಳೂರಿನ ಎಲ್ಲ ಪಕ್ಷಗಳ ಸಂಸದರು, ಶಾಸಕರೊಂದಿಗೆ ಮುಖ್ಯಮಂತ್ರಿಗಳ ಸಭೆ ಬಗ್ಗೆಯೂ ಅಶೋಕ್ ಅವರೇ ಮಾಹಿತಿ ನೀಡಿದ್ದರು. ನಂತರ ಇತರೆ ಸಚಿವರು, ಅಧಿಕಾರಿಗಳೊಂದಿಗೆ ಸಭೆ, ಚರ್ಚೆ ನಡೆಸಿ, ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ಕಾರ್ಯ ಆರಂಭಿಸಿದ್ದಾರೆ.
ಇದು ಸಚಿವರಾದ ಬಿ.ಶ್ರೀರಾಮುಲು, ಡಾ.ಕೆ. ಸುಧಾಕರ್ ಅವರಲ್ಲಿ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿಲ್ಲ. ಭಾನುವಾರ ಸುಧಾಕರ್ ಅವರು ಮಾಡಿರುವ ಟ್ವೀಟ್ ಸಚಿವರುಗಳಲ್ಲೇ ಅಸಮಾಧಾನವನ್ನು ಪರೋಕ್ಷವಾಗಿ ತೋರಿಸಿದ್ದಾರೆ ಎನ್ನಲಾಗಿದೆ.
“ಭಾನುವಾರದ ಚಿಂತನೆ: ನಾನು ಶಾಲಾ ದಿನಗಳಲ್ಲಿ ಓದಿದ “ದಟ್ಸ್ ನಾಟ್ ಮೈ ಜಾಬ್!’ ಶೀರ್ಷಿಕೆಯ ಕತೆಯನ್ನು ಹಂಚಿಕೊಂಡಿದ್ದು, “ಎವ್ರಿಬಡಿ, ಸಮ್‌ಬಡಿ, ಎನಿಬಡಿ, ನೋಬಡಿ …’ (ಎಲ್ಲರೂ, ಕೆಲವರು, ಯಾರಾದರೂ, ಯಾರೂ ಇಲ್ಲ) ಎಂಬ ಸಾಲುಗಳನ್ನು ಉಲ್ಲೇಖೀಸಿದ್ದಾರೆ. ಅವರೇ ಕತೆಯ ನೀತಿಯನ್ನೂ ವಿವರಿಸಿ, “ನಾವು ನಮ್ಮ ಕೆಲಸವನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಉದಾತ್ತ ಉದ್ದೇಶವನ್ನು ಈಡೇರಿಸುವತ್ತ ನಿರ್ವಹಿಸಬೇಕು. ನಾಯಕತ್ವ ಎಂಬುದು ಸ್ಥಾನದಲ್ಲಿಲ್ಲ, ಬದಲಿಗೆ ಅದು ಕ್ರಿಯೆಯಲ್ಲಿರುತ್ತದೆ ಎಂದು ನಾನು ನಂಬಿದ್ದೇನೆ’ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
ಒಗ್ಗಟ್ಟಾಗಿ ಹೋಗಬೇಕಿದೆ: ಬೆಂಗಳೂರು ಕೋವಿಡ್-19 ಉಸ್ತುವಾರಿ ವಹಿಸಿರುವುದಕ್ಕೆ ಕೆಲ ಸಚಿವರು ಅಸಮಾಧಾನಗೊಂಡಿ ದ್ದಾರೆ ಎಂಬ ಮಾತುಗಳ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಆರ್.ಅಶೋಕ್, ಇದು ಯುದ್ಧದ ಸಂದರ್ಭ. ಯಾರು, ಏನು ಎಂಬುದು ಮುಖ್ಯವಲ್ಲ. ಯುದ್ಧದ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಹೋಗಬೇಕಿದೆ. ನಾನು ಏನೂ ಮಾಡುತ್ತಿಲ್ಲ. ನನ್ನದು ಏನೂ ಇಲ್ಲ ಎಂದೇ ಅಂದುಕೊಳ್ಳೋಣ. ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.