Advertisement
ಇದು ವಿಧಾನಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟ ಮಾತು. “ಮೈತ್ರಿಕೂಟದಲ್ಲಿ ಗೊಂದಲ ಮುಂದುವರಿಯುವ ಬದಲು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದು ಲೇಸು’ ಎಂಬ ರಾಜಕೀಯ ಸಂಚಲನ ಮೂಡಿಸಿದ ತಮ್ಮ ಹೇಳಿಕೆಯ ಹಿಂದಿನ ಉದ್ದೇಶ ಹಾಗೂ ಆಶಯ ಕುರಿತು ಭಾನುವಾರ “ಉದಯವಾಣಿ’ ಜತೆ ಮಾತನಾಡಿದ ಅವರು, ತಮ್ಮ ಹೇಳಿಕೆ ಉದ್ದೇಶಪೂರ್ವಕದ್ದಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
Related Articles
Advertisement
ಅಭಿವೃದ್ಧಿ ಮಾಯವಾಗಿ, ಸರಕಾರ ಯಾವ ಅಭಿವೃದ್ಧಿ ಕಾರ್ಯಗಳನ್ನೇ ಮಾಡಿಲ್ಲವೇನೋ ಎಂಬಂತೆ ಜನರ ಮುಂದೆ ಬಿಂಬಿತವಾಗತೊಡಗಿದೆ. ಪಾಲುದಾರ ಪಕ್ಷಗಳ ಹೇಳಿಕೆಗಳನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿಯವರು ಮಿತ್ರಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ, ಶೀಘ್ರದಲ್ಲೇ ಸಮ್ಮಿಶ್ರ ಸರಕಾರ ಪತನಗೊಳ್ಳಲಿದೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಇದು ರಾಜ್ಯದ ಜನ ಹಾಗೂ ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಸಿ, ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ.
ಇಂತಹ ಗೊಂದಲ ಇರಬಾರದು ಎಂಬುದೇ ನನ್ನ ಉದ್ದೇಶ ಎಂದು ತಿಳಿಸಿದರು. ರಾಹುಲ್‌ಗಾಂಧಿ, ಎಚ್.ಡಿ.ದೇವೇಗೌಡರ ತೀರ್ಮಾನದಿಂದ ಸಮ್ಮಿಶ್ರ ಸರಕಾರ ರಚನೆಗೊಂಡಿದೆ. ಸರಕಾರಕ್ಕೆ ಇನ್ನೂ ನಾಲ್ಕು ವರ್ಷ ಆಡಳಿತಾವಧಿ ಇದೆ. ಎರಡು ಪಾಲುದಾರ ಪಕ್ಷಗಳ ಪರಸ್ಪರ ಹೇಳಿಕೆಗಳಿಂದ ಗೊಂದಲ, ಅಪನಂಬಿಕೆ ಹೆಚ್ಚಬಾರದು ಎಂಬುದು ನನ್ನ ಕಳಕಳಿಯೂ ಕೂಡ ಎಂದರು.
ಉತ್ತಮ ಆಡಳಿತಕ್ಕೆ ಅವಕಾಶ ನಿರ್ಮಾಣವಾಗಲಿ: ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ವಿಧಾನಸಭೆ ವಿಸರ್ಜನೆ ಮಾಡಿದರೆ ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗಷ್ಟೇ ಅಲ್ಲ. ಎಲ್ಲ ಶಾಸಕರಿಗೂ ತೊಂದರೆ ಆಗುತ್ತದೆ. ಅನಗತ್ಯ ವೆಚ್ಚಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬ ಸಂಪೂರ್ಣ ಅರಿವು ನನಗಿದೆ. ಈ ಹಿಂದೆ ಬಿಜೆಪಿಯವರು “ಆಪರೇಷನ್ ಕಮಲ’ ಮೂಲಕ ಅನೇಕ ಶಾಸಕರನ್ನು ಸೆಳೆದು ಉಪ ಚುನಾವಣೆ ಸೃಷ್ಟಿಸಿದ ಸಂದರ್ಭ ತೀವ್ರವಾಗಿ ಟೀಕಿಸಿದ್ದೆ.
ನನ್ನ ಮೂಲ ಆಶಯ ಇಷ್ಟೇ. ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಲ್ಲಿ ಪರಸ್ಪರ ಅಪನಂಬಿಕೆ, ಟೀಕೆ ಮಾದರಿ ಹೇಳಿಕೆಗಳು ನಿಲ್ಲಬೇಕು. ಮುಖ್ಯಮಂತ್ರಿಗೆ ಉತ್ತಮ ರೀತಿಯಲ್ಲಿ ಆಡಳಿತ ನಡೆಸಲು ಮುಕ್ತ ಅವಕಾಶದ ವಾತಾವರಣ ನಿರ್ಮಾಣ ಆಗಬೇಕು. ಅನುಮಾನ, ಶಂಕೆ, ಗೊಂದಲದಿಂದ ಸಮ್ಮಿಶ್ರ ಸರಕಾರವನ್ನು ಜನರು ನೋಡುವಂತಾಗಿರುವ ವಾತಾವರಣ ಬದಲಾಗಬೇಕು ಎಂಬುದಾಗಿದೆ.
ನನ್ನ ಹೇಳಿಕೆ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ, ಸಚಿವರಾದ ಆರ್.ವಿ.ದೇಶಪಾಂಡೆ, ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ ಇನ್ನಿತರರು ಟೀಕಿಸಿದ್ದಾರೆ. ಯಾರು ಟೀಕಿಸಿದರೂ ನನಗೇನೂ ಬೇಜಾರು ಇಲ್ಲ. ನಾನು ಉಡಾಫೆಯಾಗಿಯೂ ಹೇಳಿಕೆ ನೀಡಿಲ್ಲ. ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿಯೇ ಬಿಡೋಣ ಎಂಬುದು ನನ್ನ ಅನಿಸಿಕೆ ಆಗಿರಲಿಲ್ಲ . ನನ್ನ ಹೇಳಿಕೆಯಿಂದ ಯಾವುದೇ ಪಕ್ಷದ ಶಾಸಕರಿಗೂ ಚುನಾವಣೆಗೆ ಹೋಗುವುದು ಬೇಡವಾಗಿದೆ ಎಂಬುದು ಸಹ ಸ್ಪಷ್ಟಗೊಂಡಿತು.
* ಅಮರೇಗೌಡ ಗೋನವಾರ