Advertisement

ಮಹಿಳೆಯರಲ್ಲಿ ಫಿಟ್‌ನೆಸ್‌ ಜಾಗೃತಿಗಾಗಿ ಆ. 12ರಂದು ಸೀರೆ ಓಟ, ನಡಿಗೆ

11:33 AM Jul 27, 2018 | Team Udayavani |

ಮಹಾನಗರ: ಇದೀಗ ದೇಶದೆಲ್ಲೆಡೆ ಫಿಟ್‌ನೆಸ್‌ನದ್ದೇ ಹವಾ. ಪ್ರಧಾನಿಯಿಂದ ಹಿಡಿದು, ಸಚಿವರು, ಕ್ರೀಡಾಪಟುಗಳು ಎಲ್ಲರೂ ಒಬ್ಬರಿಗೊಬ್ಬರು ಫಿಟ್‌ನೆಸ್‌ ಚಾಲೆಂಜ್‌ ಹಾಕುತ್ತಾ ತಮ್ಮ ಫಿಟ್‌ ನೆಸ್‌ ರಹಸ್ಯವನ್ನು ಸಾಮಾಜಿಕ ತಾಣಗಳ ಮುಖಾಂತರ ಪ್ರದರ್ಶಿಸುತ್ತಿದ್ದಾರೆ. ವಿಶೇಷವೆಂದರೆ ಇಂತಹದೇ ಒಂದು ಫಿಟ್‌ನೆಸ್‌ಗಾಗಿ ಜಾಗೃತಿ ಕಾರ್ಯಕ್ರಮ ನಗರದಲ್ಲಿ ನಡೆಯುತ್ತಿದೆ. ಅದೆಂದರೆ ಮಹಿಳೆಯರಿಗಾಗಿ ಸ್ಯಾರಿ ನಡೆ ಮತ್ತು ರನ್‌.

Advertisement

ಸೀರೆಯಲ್ಲಿಯೂ ಫಿಟ್‌ನೆಸ್‌ ಕಾಯ್ದುಕೊಳ್ಳಬಹುದು ಎಂದು ತೋರಿಸುವ ಉದ್ದೇಶದಿಂದ ಮಂಗಳೂರು ಮಹಿಳಾ ರನ್‌ ತಂಡವು ಆ. 12ರಂದು ಈ ಕಾರ್ಯಕ್ರಮ ಆಯೋಜಿಸಿದೆ. ಸುಮಾರು 500ಕ್ಕೂ ಅಧಿಕ ಮಂದಿ ಮಹಿಳೆಯರು ಸೀರೆ ಉಟ್ಟು ಎರಡು ಕಿ.ಮೀ. ತನಕ ಓಡಲಿದ್ದಾರೆ. ಓಡಲು ಸಾಧ್ಯ ಇಲ್ಲದವರು ನಡಿಗೆ ಮೂಲಕ ದೂರವನ್ನು ಕ್ರಮಿಸಬಹುದು.

ಗಮನಾರ್ಹವೆಂದರೆ 15ರಿಂದ 80 ವರ್ಷದೊಳಗಿನ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು ಇದರಲ್ಲಿ ಭಾಗವಹಿಸಲಿದ್ದಾರೆ. ಮಹಾತ್ಮಾ ಗಾಂಧಿ ಉದ್ಯಾನ-ಮಣ್ಣಗುಡ್ಡ ರಸ್ತೆಯಲ್ಲಿ ಬೆಳಗ್ಗೆ 6.30ರಿಂದ ಓಟ ಮತ್ತು ನಡಿಗೆ ಜರಗಲಿದೆ. ಮೆಡಿಮೇಡ್‌ ಸೊಲ್ಯೂಶನ್ಸ್‌ ಸಂಸ್ಥೆ, ಲಯನ್ಸ್‌ ಕ್ಲಬ್‌, ಇನ್ನರ್‌ವ್ಹೀಲ್‌ ಮತ್ತು ವಿವಿಧ ಮಹಿಳಾ ಕ್ಲಬ್‌ಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ವರ್ಷವೂ ಈ ತಂಡವು ಮಹಿಳಾ ಓಟವನ್ನು ಆಯೋಜಿಸುತ್ತಿದ್ದು, ಈ ಬಾರಿ ಫಿಟ್‌ನೆಸ್‌ಗಾಗಿ ಓಟ ಮತ್ತು ನಡಿಗೆ ಏರ್ಪಡಿಸಿರುವುದು ವಿಶೇಷ.

ಆಕರ್ಷಕ ಬಹುಮಾನ
ಸೀರೆ ನಡೆ ಮತ್ತು ಓಟದಲ್ಲಿ ಪಾಲ್ಗೊಂಡು ಉತ್ತಮ ಪ್ರತಿಭೆ ತೋರಿಸಿದವರಿಗೆ ಆಕರ್ಷಕ ಬಹುಮಾನಗಳನ್ನೂ ನೀಡಲಾಗುವುದು. ಅತ್ಯುತ್ತಮ ಪೋಷಾಕಿನಲ್ಲಿ ಕಂಗೊಳಿಸುವ ವ್ಯಕ್ತಿ ಮತ್ತು ತಂಡಕ್ಕೆ ಓಟ-ನಡಿಗೆಯ ಉದ್ದೇಶವನ್ನು ಬಿಂಬಿಸುವ ರೂಪಕ, ಉತ್ತಮ ಘೋಷವಾಕ್ಯ ಸಿದ್ಧಪಡಿಸುವವರಿಗೆ ಮತ್ತು ದೊಡ್ಡ ಸಂಖ್ಯೆಯಲ್ಲಿ ಬಂದ ತಂಡಕ್ಕೆ ಬಹುಮಾನ ಸಿಗಲಿದೆ. ಪಾಲ್ಗೊಂಡ ಎಲ್ಲರಿಗೂ ಪದಕ ಮತ್ತು ಪ್ರಮಾಣಪತ್ರ ಮತ್ತು ಲಘು ಉಪಾಹಾರದ ವ್ಯವಸ್ಥೆ ಮಾಡಲಾಗುವುದು. ದಾರಿಯುದ್ದಕ್ಕೂ ನೀರು ಮತ್ತು ವೈದ್ಯಕೀಯ ಸೌಲಭ್ಯ ಇರುತ್ತದೆ. ಪಾಲ್ಗೊಂಡವರ ಸುರಕ್ಷತೆಗೂ ಒತ್ತು ನೀಡಲಾಗುತ್ತದೆ.

ಫಿಟ್‌ನೆಸ್‌ ಅರಿವು
ಸಾಮಾನ್ಯವಾಗಿ ಜಾಗಿಂಗ್‌ ಮಾಡುವ ಮಹಿಳೆಯರು ಓಡಲು ಅನನುಕೂಲವಾಗಲೆಂದು ಟ್ರ್ಯಾಕ್ ಶೂಟ್‌ ಮತ್ತು ಶಾರ್ಟ್ಸ್, ಟೀಶರ್ಟ್ಗಳನ್ನು ಧರಿಸಿರುತ್ತಾರೆ. ಈ ಡ್ರೆಸ್‌ಗಳನ್ನು ತೊಡಬೇಕಲ್ಲ ಎಂಬ ಕಾರಣಕ್ಕೆ ಮಹಿಳೆಯರು ನಡೆ ಮತ್ತು ಓಟದತ್ತ ಮುಖ ಮಾಡುತ್ತಿಲ್ಲ. ಇನ್ನೂ ಕೆಲವರಿಗೆ ಆಸಕ್ತಿ ಇದೆಯಾದರೂ ಸಾಂಪ್ರದಾಯಿಕ ಭಾವನೆಗಳು ಅವರನ್ನು ತಡೆಯುತ್ತಿವೆ. ಆದರೆ ಇವು ಅವರನ್ನು ಫಿಟ್‌ನೆಸ್‌ನಿಂದಲೇ ದೂರವಿಡುತ್ತವೆ. ಅವರಲ್ಲಿ ಫಿಟ್‌ನೆಸ್‌ ಕುರಿತು ಅರಿವು ಮೂಡಿಸಲು ಸೀರೆ ನಡೆ, ಓಟ ಆಯೋಜಿಸಿದ್ದೇವೆ.
– ರಾಜೇಶ್‌,ಮಂಗಳೂರು ಮಹಿಳಾ ರನ್‌ ತಂಡದ ಸದಸ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next