ಮೈಸೂರು: ಅಭಿವೃದ್ಧಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಎಂ.ವೆಂಕಟಕೃಷ್ಣಯ್ಯ (ತಾತಯ್ಯ )ಅವರ ಹೆಸರಿನಲ್ಲಿ ಪುಸ್ತಕ ಹೊರತಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಕಾಲೇಜುಗಳಲ್ಲಿ ಅಧ್ಯಯನಕ್ಕೆ ಅಳವಡಿಸಲಿ ಎಂದು ಹಿರಿಯ ಪತ್ರಕರ್ತ ಈಶ್ವರ ದೈತೋಟ ಸಲಹೆ ನೀಡಿದರು.
ಅನಾಥಾಲಯ ಹಾಗೂ ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ವತಿಯಿಂದ ಎಂ.ವೆಂಕಟಕೃಷ್ಣಯ್ಯ ಅವರ 174ನೇ ಜಯಂತಿ ಪ್ರಯುಕ್ತ ಶನಿವಾರ ಶಾರದಾ ವಿಲಾಸ ಕಾನೂನು ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಎಂ.ವೆಂಕಟಕೃಷ್ಣಯ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ತಾತಯ್ಯ ಅಪಾರ ಕೊಡುಗೆ ನೀಡಿದ್ದಾರೆ. ಅವರ ಹೆಸರಿನಲ್ಲೇ ಒಂದು ಪುಸ್ತಕ ಹೊರತರಬೇಕಿದೆ. ಅದರಲ್ಲಿ ತಾತಯ್ಯ ಅವರ ಪತ್ರಿಕೋದ್ಯಮ ಸಾಧನೆ, ಅಭ್ಯುದಯ ಪತ್ರಿಕೋದ್ಯಮ ಕಲ್ಪನೆ ಮತ್ತು ಅದರ ಪರಿಣಾಮ ಕುರಿತು ಅಧ್ಯಯನ ಮಾಡುವಂತಹ ವಿಷಯಗಳಿರಬೇಕು. ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಕಾಲೇಜುಗಳಲ್ಲಿ ಪುಸ್ತಕವನ್ನು ವಿದ್ಯಾರ್ಥಿಗಳ ಅಧ್ಯಯನಕ್ಕೆ ಇಡಬೇಕು.
ಮಹಾತ್ಮ ಗಾಂಧೀಜಿಗೂ ಮೊದಲು ತಾತಯ್ಯ ಪತ್ರಿಕೋದ್ಯಮ ಶುರುಮಾಡಿದ್ದರು. ಅವರ ಪತ್ರಿಕೋದ್ಯಮ ಪ್ರಯೋಗ ರಾಷ್ಟ್ರಮಟ್ಟದಲ್ಲಿ ದಾಖಲಿಸಬಹುದಾದದ್ದು. ಜನತೆಗೆ ಮಾಹಿತಿ, ತಿಳಿವಳಿಕೆ ನೀಡುವುದರ ಜತೆಗೆ ಪ್ರೋತ್ಸಾಹಕ ಬರಹಗಳನ್ನೂ ಬರೆದರು. ವಿಧವಾ ವಿವಾಹ, ದಲಿತೋದ್ಧಾರ, ಗ್ರಾಮೀಣ ಜನರ ಶಿಕ್ಷಣದ ಅಗತ್ಯತೆ ಕುರಿತು ವಿಚಾರ ಮಾಡುತ್ತಿದ್ದರು ಎಂದರು.
ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸಿ ಮಾತನಾಡಿ, ಬೆಂಗಳೂರಿನಲ್ಲಿ ಗೋಖಲೆ ಅವರ ಜೀವನ, ಸಾಧನೆ ಪ್ರಚಾರಕ್ಕೆ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಡಿ.ವಿ.ಗುಂಡಪ್ಪ ಸ್ಥಾಪಿಸಿದರು. ಅದೇ ರೀತಿ ಮೈಸೂರಿನಲ್ಲಿ ವೆಂಕಟಕೃಷ್ಣಯ್ಯ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ ಸ್ಥಾಪಿಸಿ ಅವರ ಚಿಂತನೆ ಪ್ರಚಾರ ಮಾಡುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ, ಅನಾಥಾಲಯ ಉಪಾಧ್ಯಕ್ಷ ಸಿ.ವಿ.ಗೋಪಿನಾಥ್, ಪ್ರೊ. ಶ್ರೀಧರಮೂರ್ತಿ, ಅನಾಥಾಲಯ ಕಾರ್ಯಕಾರಿ ಮಂಡಳಿ ಸದಸ್ಯ ಪ್ರೊ.ಸತ್ಯನಾರಾಯಣ ಇತರರು ಉಪಸ್ಥಿತರಿದ್ದರು.