Advertisement
ತೇಜಸ್ವಿ ಫೋಟೋಗ್ರಫಿಯನ್ನು ಧ್ಯಾನವಾಗಿ ಮಾಡಿ ಕೊಂಡಿದ್ದರು. ಬಹುಶಃ ಪರಿಸರ, ಪ್ರಾಣಿ ಪಕ್ಷಿಗಳನ್ನು ಅವಲೋಕಿಸಲು ಈ ಧ್ಯಾನ ನೆರವಾಯಿತು. ಅವರು ಎಷ್ಟೋ ಹಕ್ಕಿಗಳ ಬದುಕನ್ನು ಹತ್ತಿರದಿಂದ ನೋಡಿದ್ದು ಇದೇ ಕಾರಣಕ್ಕೆ. ತೇಜಸ್ವಿ ಅವರ ಕಾಲದಲ್ಲಿ ಟೆಕ್ನಾಲಜಿ ಇಷ್ಟೊಂದು ಅಗಾಧವಾಗಿ ಇರಲಿಲ್ಲ. ಆಗಂತೂ, ತಾಂತ್ರಿಕ ಸಮಸ್ಯೆಯನ್ನು ಮೀರಿ ಫೋಟೋಗಳನ್ನು ತೆಗೆಯಬೇಕಿತ್ತು. ಇದು ದೊಡ್ಡ ಚಾಲೆಂಜ್ ಹಾಗೂ ಅನಿವಾರ್ಯತೆ ಆಗಿತ್ತು.
ಗಳು ತಾವು ಫೋಟೋ ತೆಗೆಯುವ ಸಬ್ಜೆಕ್ಟ್ನಿಂದ ದೂರ ಇರ್ತಾರೆ. ಅದರೊಂದಿಗಿನ ಒಡನಾಟ ಹೆಚ್ಚಾಗಿದ್ದರೆ ಅವನೊಳ ಗೊಬ್ಬ ತೇಜಸ್ವಿ ಥರದ ವ್ಯಕ್ತಿ ತೆರೆದುಕೊಳ್ಳುತ್ತಾನೆ. ಸಂಶೋಧಕ ಹುಟ್ಟಿಕೊಳ್ಳುತ್ತಾನೆ. ಈಗ ಅಷ್ಟೆಲ್ಲಾ ಸಮಯ ಹೂಡುವಷ್ಟು ತಾಳ್ಮೆ ಯಾರಿಗೂ ಇಲ್ಲ.
Related Articles
Advertisement
ಇಂಥ ತಲ್ಲೀನತೆ ನಿಜವಾದ ಪರಿಸರದ ಪ್ರೀತಿ, ಗೌರವ ಹುಟ್ಟಾಕುತ್ತೆ. ಈ ಗುಣ ತೇಜಸ್ವಿಗೆ ಇತ್ತು. ತೇಜಸ್ವಿ ಮೈಸೂರಿಂದ ಶಿವಮೊಗ್ಗಕ್ಕೆ ಓದೋಕೆ ಅಂತ ಹೋಗಿ, ಅಲ್ಲಿ ಮತ್ತೆ ಅದನ್ನು ಬಿಟ್ಟು ಫೋಟೋಗ್ರಫಿ ಅಂತ, ಮನೇಲಿ ಡಾರ್ಕ್ ರೂಂ ಮಾಡ್ಕೊಂಡು ಕುಳಿತಕೊಂಡು ಬಿಟ್ಟಿದ್ದರು. ಫುಲ್‌ಟೈಂ ಡಾರ್ಕ್ ರೂಂ. ಆ ಹಾಳಾದ ಪೇಪರನ್ನೆಲ್ಲಾ ಒಲೆಗೆ ಹಾಕಿ ಮನೆಯವರು ಹಂಡೆ ನೀರು ಕಾಯಿಸಿಬಿಡುತ್ತಿದ್ದರು ಅನ್ನೋ ಮಾತನ್ನು ಕೇಳಿದ್ದೀನಿ. ಹಾಗೆ ಕಳೆದು ಹೋಗ್ತಾ ಇದ್ದರು ತೇಜಸ್ವಿ.
ನಾವು ಹೇಮಾವತಿ ದಂಡೆಯ ಮೇಲೆ ಕೂತ್ಕೊಂಡು ಒಟ್ಟಿಗೆ ಮೀನು ಹಿಡಿಯೋಕೆ ಹೋಗ್ತಾ ಇದ್ದಾಗೆಲ್ಲಾ ಮತ್ತೆೆ, ಮತ್ತೆ ಇವೆಲ್ಲದ ಮಾತನಾಡುತ್ತಿದ್ದೆವು. ತೇಜಸ್ವಿ ಅವರಲ್ಲಿ ಎಂಥ ಸೂಕ್ಷ್ಮಗ್ರಾಹಿತ್ವ ಇತ್ತೆಂದರೆ 1990ರಲ್ಲೇ “ಅಯ್ಯೋ, ಗುರುವೇ ಈ ನದೀ, ಮರಳನ್ನು ಎತ್ತುತ್ತಾ ಇದ್ದಾರೆ ಕಣೋ. ಹೀಗಾದರೆ ನದಿ ನೀರು ಎಲ್ಲಿ ಉಳಿಯುತ್ತೋ, ಈ ಮರಳಿನ ಮಹತ್ವಾನ ಯಾರೂ ತಿಳ್ಕೊಂಡೇ ಇಲ್ಲ. ಈಗಲ್ಲ, ಮುಂದಕ್ಕೆ ಎಂಥ ಹೊಡೆತ ಬೀಳುತ್ತೆ ನೋಡ್ತಾ ಇರು’ ಅಂದಿದ್ದರು. ಇವರು ಹೀಗೆ ಹೇಳಿದ ದಶಕದ ನಂತರ ತಾನೇ ಮರಳು ಮಾಫಿಯಾ ಹುಟ್ಟುಕೊಂಡಿದ್ದು, ನದಿಗಳು ಒಣಗುವುದಕ್ಕೆ ಶುರುವಾಗಿದ್ದು? ನೋಡಿ ತೇಜಸ್ವಿ ಆಗಲೇ ಮರಳು ದಂಧೆಯ ಬಗ್ಗೆ ಯೋಚನೆ ಮಾಡಿದ್ದರು. ಒಂದು ನದಿಯ ಜೀವವೈವಿಧ್ಯತೆಯ ಬಗ್ಗೆ ಸಿಕ್ಕಾಪಟ್ಟೆ ಯೋಚನೆ ಮಾಡೋ ಗುಣ ತೇಜಸ್ವಿಯವರಲ್ಲಿ ಇದದ್ದೂ ಕಾಡಿನೊಂದಿಗೆ ಒಡನಾಟ ಇಟ್ಟುಕೊಂಡಿದಕ್ಕೆ.
ಅವರ ಫೋಟೋಗ್ರಫಿ ಭಿನ್ನ ಏಕೆ ಅಂದರೆ, ತೇಜಸ್ವಿ ಬರವಣಿಗೆಯಲ್ಲಿ ಬರೋ ಪಾತ್ರಗಳಿವೆಯಲ್ಲ, ಆ ಪಾತ್ರಗಳನ್ನು ಅವರು ಫೋಟೋಗ್ರಫಿಯಲ್ಲಿ ಹುಡ್ಕೊರು. ಪಕ್ಷಿಗಳ ಬಗ್ಗೆ ಆಳವಾದ ಅಭ್ಯಾಸ ಮಾಡಿದ್ದರಿಂದ ಅವುಗಳ ಹಾವಭಾವ ಗೊತ್ತಾಗೋದು. ಆದ್ದರಿಂದ ಪಕ್ಷಿಯ ಅದ್ಭುತ ಕ್ಲಿಕ್ ಮಾಡೋರು. ಅದು ಅವರಿಗೆ ಗೊತ್ತಿತ್ತು. ಇದೊಂಥರ ತಾಯಿ ಮಗುವಿನ ಸಂಬಂಧ ಇದ್ದಹಾಗೆ ಅಂತ.
ನೋಡಿ, ನಾನೊಬ್ಬ ಅಂತಾರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕ ಅಂತ ನಿಮ್ಮ ಮಗುವಿನ ಬೆಸ್ಟ್ ಫೋಟೋನ ತೆಗೆಯೋಕೆ ಹೋದರೆ, ಅದು ಸಿಗೋಲ್ಲ. ಏಕೆಂದರೆ ನಿಮ್ಮ ಮಗು ಜೊತೆ ನನಗೆ ಒಡನಾಟವೇ ಇಲ್ಲ. ಅದರ ಮೂಡ್, ವರ್ತನೆ ಗೊತ್ತಿಲ್ಲ. ಆದರೆ ಬೆಸ್ಟ್ ಮೂಡ್ ಅಪ್ಪ, ಅಮ್ಮನಿಗೆ ಗೊತ್ತಿರುತ್ತದೆ. ಅವರು ತೆಗೆದರೆ ಚೆನ್ನಾಗಿ ಬರುತ್ತದೆ. ಅಪ್ಪನಿಗಿಂತ ಅಮ್ಮ ಫೋಟೋ ತೆಗೆದರೆ ಇನ್ನೂ ಚೆನ್ನಾಗಿ ಬರುತ್ತದೆ. ಅಮ್ಮ ನಿಗೆ ಮಕ್ಕಳೊಂದಿಗೆ ಆ ರೀತಿಯ ಒಡನಾಟ ಇರುತ್ತೆ. ತೇಜಸ್ವಿಗೂ, ಕಾಡು, ಪಕ್ಷಿಗಳೊಂದಿಗೆ ಇಂಥದೇ ಒಡನಾಟ ಇತ್ತು. ಅವರು ಕೇವಲ ಪಕ್ಷಿಗಳಿಗೆ ಮಾತ್ರ ಕ್ಯಾಮರ ಇಡುತ್ತಿರಲಿಲ್ಲ. ಅವುಗಳ ಗುಣ, ಹಾವಾಭಾವಗಳ, ಎಮೋಷನಳ ಮೇಲೆ ಗುರಿ ಇಡುತ್ತಿದ್ದರು. ಅದಕ್ಕೇ ತೇಜಸ್ವಿ ಫೋಟೋಗಳು ಬಹಳ ಭಿನ್ನ.
ಒಂದು ಸಲ ವಾರ್ತಾ ಇಲಾಖೆಯ ಸಲುವಾಗಿ ತೇಜಸ್ವಿ ಸಾಕ್ಷ್ಯಚಿತ್ರ ಮಾಡಬೇಕಿತ್ತು. ಅದಕ್ಕಾಗಿ ಅವರ ಊರಿಗೆ ಹೋಗಿದ್ದೆ. ದಾರೀಲಿ ಕಾರು ನಿಲ್ಲಿಸಿ ನಾವು ಮಾತನಾಡುತ್ತಾ ನಿಂತಿದ್ದೆವು. ಎದುರುಗಡೆಯಿಂದ ಒಬ್ಬ ತೂರಾಡುತ್ತಾ ಬಂದ. “ನೀವು ತೇಜಸ್ವಿ ಬಗ್ಗೆ ಸಿನಿಮಾ ಮಾಡ್ತಿದ್ದೀರಂತೆ’ ಅಂದ. ಅವನಿಗೆ ಯಾರೂ ಹೇಳಿದರೋ ಗೊತ್ತಿಲ್ಲ. “ಹೌದು, ಆ ಥರದ್ದೊಂದು ಯೋಚನೆ ಇದೆ’ ಅಂದೆವು. ಸ್ವಲ್ಪ ಹೊತ್ತಾದ ನಂತರ. “ನಿಮಗೊಂದು ವಿಷ್ಯ ಗೊತ್ತಾ?’ ಅಂದ. “ಏನಪ್ಪಾ ಅದು? ಅಂದೆವು. “ನಮ್ಮ ಕಾಡಲ್ಲಿ ಒಂದು ದೊಡ್ಡ ಹುಲಿ ಇತ್ತು. ಭಾರಿ ಹುಲಿ ಅದು. ಎಲ್ಲಾ ಚೆನ್ನಾಗಿತ್ತು ಅದು ಇರೋತನಕ. ಆ ಹುಲಿ ಹೋಯ್ತು ನೋಡಿ. ಕಾಡು, ನದಿ ಎಲ್ಲಾ ಹೋಯ್ತಾ ಇದ್ದಾªವೆ ‘ ಅಂದ. ನಾವು ಕಾಡಿನ ಅಲೆಮಾರಿಗಳಾಗಿರೋದ್ರಿಂದ ಈ ಹುಲಿ ಕಥೆ ಹೇಳುತ್ತಿದ್ದಾನೆ ಅಂತ ಬಹಳ ಇಂಟರೆಸ್ಟಿಂಗ್ ಅನಿಸ್ತು. ನಿಜವಾಗಿ ಅವನು ಹೇಳುತ್ತಿದ್ದದ್ದು ತೇಜಸ್ವಿ ಬಗ್ಗೆ. ಅಂದರೆ ಸ್ಥಳೀಯರಿಗೂ ಅವರ ಬಗ್ಗೆ ಭಯ ಇತ್ತು. ತೇಜಸ್ವಿ ಹೇಗೆಲ್ಲಾ ಆವರಿಸಿಕೊಂಡು ಬಿಟ್ಟಿದ್ದರು ಅನ್ನೋಕೆ ಇದು ಉದಾಹರಣೆ.
ಈ ಆತ್ಮೀಯತೆ ನೋಡಿ ಹೇಗೆ ಬಂದುಬಿಡ್ತದೆ. ಆತ್ಮೀಯತೆ ಬಂದರೆ ಕಳಕಳಿ, ಕಾಳಜಿ ಹುಟ್ಟೋಕೆ ಶುರುವಾಗಿಬಿಡುತ್ತೆ. ಇಲ್ಲ ಅಂದರೆ ಕಮ್ ಟೌಟ್ ವಿತ್ ಇಮೇಜಸ್. ಫೇಸ್‌ಬುಕ್, ವಾಟ್ಸ್‌ಪ್‌ಗೆ ಅಪ್ಪಲೋಡ್ ಮಾಡೋಕೆ ಆಗುತ್ತೆ ವಿನಃ ನಿಜವಾದ ಸಂಬಂಧ, ಪ್ರೀತಿ ಇರೋಲ್ಲ. ನನಗೆ ತೇಜಸ್ವಿ ಕಂಡಿದ್ದು ಹೀಗೆ.
ಕುದುರೆಮುಖದಲ್ಲಿ ಮೈನಿಂಗ್ ಬೇಕೋ ಬೇಡವೋ ಅನ್ನೋ ವಿಚಾರದಲ್ಲಿ ವಿಧಾನಸಭೆಯಲ್ಲಿ ಚರ್ಚೆ ನಡೀತಿತ್ತು. ಡಿ.ಬಿ. ಚಂದ್ರೇಗೌಡರು ಮಿನಿಸ್ಟರ್ ಇರಬಹುದು. ಅವರು “ನಾವು ಇದರ ಬಗ್ಗೆ ಚರ್ಚೆ ಮಾಡೋಲ್ಲ. ತೇಜಸ್ವಿ ಅವರು ಏನು ಹೇಳ್ತಾರೋ ಅದರ ಮೇಲೆ ನಾವೊಂದು ನಿರ್ಧಾರ ತೆಗೆದುಕೊಳ್ಳುತ್ತೀವಿ ‘ ಅಂದರು. ಅಂದರೆ ತೇಜಸ್ವಿ ಮಾತೇ ಫೈನಲ್ ಅಂತ! ತೇಜಸ್ವಿ ಹತ್ತಿರ ಈ ವಿಚಾರ ಬಂದಾಗ ಅವರು “ಮೈನಿಂಗ್ ನಡೀಬಾರದು. ನದಿ ಕಾಡಿಗೆ ತಾಪತ್ರಯ ಆಗುತ್ತೆ, ಪ್ರಾಣಿ, ಪಕ್ಷಿಗಳದಲ್ಲ, ನಮ್ಮ ಬದುಕು ದುರ್ಭರ ಆಗುತ್ತದೆ’ ಅಂದರು. ತೇಜಸ್ವಿಯ ಮಾತನ್ನೇ ಜಾರಿ ಮಾಡಿದರು. ವ್ಯಕ್ತಿತ್ವದ ತೂಕ ಅಲ್ಲಿ ಕೆಲಸ ಮಾಡಿತು.
ಆ ತೂಕವನ್ನು ತೇಜಸ್ವಿ ಗಳಿಸಿಕೊಂಡಿದ್ದರು. ತೇಜಸ್ವಿಗೆ ಏಕಾ ಏಕಿ ಇವೆಲ್ಲ ಬಂದಿದ್ದಲ್ಲ. ನೀವು ಎಷ್ಟೇ ದೊಡ್ಡವರಾಗಿರಬಹುದು, ಒಳ್ಳೆಯವರಾಗಿರ ಬಹುದು. ಹೀಗಂತ ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ತಕ್ಷಣ ತೂಕ ಬರೋಲ್ಲ. ನಿಮ್ಮ ಮಾತಿಗೆ ಬೆಲೆ ಸಿಗೋಲ್ಲ. ಇರುವಷ್ಟೂ ಕಾಲ ಸಮಾಜಕ್ಕೆ ನಿಮ್ಮ ವ್ಯಕ್ತಿತ್ವವನ್ನು ಖಚಿತಪಡಿಸಬೇಕು, ನಿಮ್ಮ ಆಲೋ ಚನೆಗಳನ್ನು ಕನ್ವಿನ್ಸ್ ಮಾಡ್ತಾ ಬದುಕಿದಾಗ ಶಕ್ತಿ ಬರುತ್ತದೆ. ಮಾತಾಡೋ ಧ್ವನಿಗಾಗಲೀ, ಹೇಳುವ ವಿಚಾರಕ್ಕಾ ಗಲಿ ಅರ್ಥ ಬರುತ್ತದೆ. ಜನ ಇವನು ಹೇಳ್ಳೋದರಲ್ಲಿ ಏನೋ ಸತ್ಯ ಇದೆ ಅಂತ ಕಿವಿಕೊಡೋದು, ಗೌರವ ಕೊಡೋದಕ್ಕೆ ಶುರುಮಾಡ್ತಾರೆ. ತೇಜಸ್ವಿ ಇದನ್ನು ಗಳಿಸಿದರು. ಅಧಿಕಾರ, ಪದವಿಗಾಗಲಿ, ಪ್ರಶಸ್ತಿಗಾಗಲಿ ಆಸೆ ಪಡದೆ, ದೂರ ಉಳಿದುಕೊಂಡು, ಯಾವುದೇ ಮುಲಾಜಿಗೂ ಸಿಗದೆ ಅದನ್ನು ಉಳಿಸಿಕೊಂಡರು ಅನಿಸುತ್ತದೆ. ಇವತ್ತಿಗೂ ತೇಜಸ್ವಿ ನಮ್ಮ ಜೊತೆಯಲ್ಲಿ ಇರೋದು ಹೀಗೆ.
ಕೃಪಾಕರ ಸೇನಾನಿ: ವನ್ಯಜೀವಿ ತಜ್ಞರು, ತೇಜಸ್ವಿ ಒಡನಾಡಿಗಳುಚಿತ್ರಕೃಪೆ: ರಾಜೇಶ್ವರಿ ತೇಜಸ್ವಿ