Advertisement

ಆ ಮೂರು ಗಂಟೆ ರೆಡಿ, ಸ್ಟಡಿ, ಪರೀಕ್ಷೇ…

09:19 PM Mar 09, 2020 | Sriram |

ಪರೀಕ್ಷೆ ಬರೆದು ಹೊರಬಂದ ಅನೇಕ ವಿದ್ಯಾರ್ಥಿಗಳನ್ನು, “ನೀವು ಪರೀಕ್ಷೆ ಹೇಗೆ ಬರೆದಿದ್ದೀರಾ’ ಎಂದು ಪ್ರಶ್ನಿಸಿ ನೋಡಿ. ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, “ಟೈಮ್‌ ಸಾಕಾಗಲಿಲ್ಲ ಸಾರ್‌’ ಅನ್ನುತ್ತಾರೆ. ಹಾಗಾದರೆ ನಿಜಕ್ಕೂ ಟೈಮ್‌ ಕಡಿಮೆಯಾಗುವಂತೆ ಪ್ರಶ್ನೆಪತ್ರಿಕೆಯನ್ನು ಸಿದ್ಧಗೊಳಿಸಿರುತ್ತಾರೆಯೇ? 

Advertisement

ವಿದ್ಯಾರ್ಥಿಗಳ ವರ್ಷ ಪೂರ್ತಿ ಓದಿದ್ದು ಫ‌ಲಪ್ರದವಾಗಬೇಕೆಂದಲ್ಲಿ ಪರೀಕ್ಷೆಯನ್ನು ಚೆನ್ನಾಗಿ ಬರೆಯಬೇಕು. ವರ್ಷ ವಿಡೀ ನಡೆವ ವ್ಯಾಸಂಗದ ಕೃಷಿಯಲ್ಲಿ ಅಂಕಗಳ ಇಳುವರಿ ಚೆನ್ನಾಗಿ ಬರಬೇಕೆಂದಲ್ಲಿ ಪರೀಕ್ಷೆ ಬರೆಯುವ ಆ ಮೂರು ಗಂಟೆಗಳ ಅವಧಿಯಲ್ಲಿ ವಿದ್ಯಾರ್ಥಿಗಳ ಸಮಯಸಾರಿಣಿ ಉತ್ತಮವಾಗಿರಬೇಕು. ಕೆಲವೊಮ್ಮೆ, ಅತ್ಯುತ್ತಮ ತಯಾರಿ ನಡೆಸಿದ್ದರೂ ಪರೀಕ್ಷೆ ಬರೆಯುವ ಆ ಎರಡು ಅಥವಾ ಮೂರು ಗಂಟೆಗಳನ್ನು ಸರಿಯಾಗಿ ಮ್ಯಾನೇಜ್‌ ಮಾಡದಿದ್ದಲ್ಲಿ, ಗರಿಷ್ಠ ಅಂಕಗಳನ್ನು ಪಡೆಯಲಾಗದು. ಪರೀûಾ ಅವಧಿಯ ಒಂದೊಂದು ನಿಮಿಷವೂ ಅಮೂಲ್ಯ. ಪರೀಕ್ಷೆ ಬರೆದು ಹೊರಬಂದ ಅನೇಕ ವಿದ್ಯಾರ್ಥಿಗಳನ್ನು ನೀವು ಪರೀಕ್ಷೆ ಹೇಗೆ ಬರೆದಿದ್ದೀಯಾ ಎಂದು ಪ್ರಶ್ನಿಸಿ ನೋಡಿ. ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಟೈಮ್‌ ಸಾಕಾಗಲಿಲ್ಲ ಸಾರ್‌ ಅನ್ನುತ್ತಾರೆ. ಹಾಗಾದರೆ ನಿಜಕ್ಕೂ ಟೈಮ್‌ ಕಡಿಮೆಯಾಗುವಂತೆ ಪ್ರಶ್ನೆಪತ್ರಿಕೆಯನ್ನು ಸಿದ್ಧಗೊಳಿಸಿರುತ್ತಾರೆಯೇ? ಇಲ್ಲ. ಈ ಪ್ರಶ್ನೆಪತ್ರಿಕೆಯನ್ನು ನಿಗಧಿತ ಅವಧಿಯೊಳಗೆ ಪೂರೈಸಲು ಸಾಧ್ಯವಾಗುವಂತೆಯೇ ಸಿದ್ಧಪಡಿಸಲಾಗಿರುತ್ತದೆ. ಸಮಯವನ್ನು ಸರಿಯಾಗಿ ಹೊಂದಾಣಿಕೆ ಮಾಡಿಕೊಂಡು ಬರೆಯುವ ಜವಾಬ್ದಾರಿ ವಿದ್ಯಾರ್ಥಿಗಳದ್ದು.

ಅಂಕ ತೀರ್ಮಾನ
ಕೆಲವೊಮ್ಮೆ 1, 2 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಕಠಿಣವಿರುವ ಲೆಕ್ಕ, ಎಷ್ಟು ಯೋಚಿಸಿದರೂ ನೆನಪಾಗದ ಇಸವಿ, ಸೂತ್ರ ಇವುಗಳಿಗೆ ಹೆಚ್ಚು ಸಮಯ ವಿನಿಯೋಗಿಸುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಆಗಾಗ್ಗೆ ಸಮಯ ನೋಡಿಕೊಂಡು, ಉತ್ತರಿಸಿದ ಪ್ರಶ್ನೆಗಳು, ಇನ್ನೂ ಉತ್ತರಿಸಬೇಕಾದ ಪ್ರಶ್ನೆಗಳು, ಉಳಿದ ಸಮಯದ ಕುರಿತು ಚಿಕ್ಕದಾಗಿ ಲೆಕ್ಕಹಾಕಬೇಕು. ಹಾಗಂತ ಪದೇ ಪದೆ ಗಡಿಯಾರವನ್ನು ನೋಡುತ್ತಾ ಪ್ಯಾನಿಕ್‌ ಆಗಬಾರದು. ಮನಸ್ಸನ್ನು ಆರಾಮದಾಯಕ ಸ್ಥಿತಿಯಲ್ಲಿಟ್ಟುಕೊಂಡು, ಸಮಯದ ಕಡೆ ಒಂದಷ್ಟು ಜಾಗ್ರತೆ ವಹಿಸಿದರೆ ಸಾಕು. ಕೆಲವರು ಹೆಚ್ಚು ಪುಟ ಉತ್ತರ ಬರೆದರೆ ಹೆಚ್ಚು ಅಂಕ ಗಳಿಸಲು ಸಾಧ್ಯ ಎಂದು ಊಹಿಸಿರುತ್ತಾರೆ. ಈ ಪುಟ ತುಂಬಿಸುವ ಹಠದಲ್ಲಿ ಪದ ಪದಗಳ ಮಧ್ಯೆ, ವಾಕ್ಯಗಳ ಮಧ್ಯೆ ಹೆಚ್ಚು ಅಂತರ ಬಿಡುವುದು ಹಾಗೂ ಚಿತ್ರ, ನಕ್ಷೆಗಳನ್ನು ಅತಿ ದೊಡ್ಡದಾಗಿ ಬರೆಯುವುದೂ ಮಾಡುತ್ತಾರೆ. ಆದರೆ, ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ನೀವು ಅವಲೋಕಿಸಿದಲ್ಲಿ, ಉತ್ತರಗಳನ್ನು ಸಮಂಜಸ, ಚಿಕ್ಕ ಚೊಕ್ಕವಾಗಿ ಇರುತ್ತವೆ. ಪ್ರಸ್ತುತ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ 40 ಪುಟಗಳ ಉತ್ತರ ಪತ್ರಿಕೆ ನೀಡುತ್ತಿದ್ದಾರೆ. ಅದರಲ್ಲಿ ಸಮರ್ಪಕವಾಗಿ ಉತ್ತರಗಳನ್ನು ಬರೆಯಲು ಸಾಕಾಗುತ್ತದೆ. ಈ ಕಾರಣದಿಂದ ಪೈಪೋಟಿಯ ಮೇಲೆ ಹೆಚ್ಚುವರಿ ಹಾಳೆ ಪಡೆಯುವ ಅಗತ್ಯವಿಲ್ಲ.

ಅಂಡರ್‌ಲೈನ್‌ ಮಾಡಿ
ಪ್ರಶ್ನೆಗಳು ಧ್ವನಿಸುವ ಅರ್ಥವನ್ನು, ಉತ್ತರಿಸುವವರು ಸರಿಯಾಗಿ ಗ್ರಹಿಸಬೇಕು. ಇಲ್ಲದಿದ್ದಲ್ಲಿ ಅಂಕಗಳು ಖೋತಾ ಆಗುತ್ತವೆ. ಉದಾಹರಣೆಗೆ, ಹೃದಯದ ಚಿತ್ರ ಬರೆಯಿರಿ ಎಂಬ ಪ್ರಶ್ನೆಗೆ ಚಿತ್ರ ಬರೆದು, ಅದರ ಭಾಗಗಳನ್ನು ಗುರುತಿಸಬೇಕು. ಆದರೆ, ಕೆಲವು ವಿದ್ಯಾರ್ಥಿಗಳು ಭಾಗಗಳನ್ನು ಗುರುತಿಸಲು ತಿಳಿಸಿಲ್ಲ ಎಂದು ಕೇವಲ ಚಿತ್ರ ಮಾತ್ರ ಬರೆದಿರುತ್ತಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯನ್ನು ಪೂರ್ಣ ತಿರುಗಿಸಿ ನೋಡದೇ ಕೊನೆಯ ಪುಟದ ಪ್ರಶ್ನೆಗಳನ್ನು ಉತ್ತರಿಸದೇ ಬಿಟ್ಟು ಬಂದಿರುತ್ತಾರೆ. ಈ ಕಾರಣದಿಂದ ಪೂರ್ಣ ಪ್ರಶ್ನೆಪತ್ರಿಕೆಯನ್ನು ಅವಲೋಕಿಸಿ, ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳನ್ನು ಬರೆದಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಮುಖ್ಯ. ಯಾವುದೇ ಪ್ರಶ್ನೆಗೆ ಉತ್ತರಿಸಬೇಕಾದಾಗ, ಮೊದಲು ಪ್ರಮುಖವಾದ ಅಂಶಗಳನ್ನು ಬರೆಯಬೇಕು. ಇಲ್ಲದೇ ಹೋದರೆ ಅಂಕ ಗಳಿಕೆಯಲ್ಲಿ ಹಿಂದೆ ಬೀಳಬೇಕಾಗುತ್ತದೆ. ಪ್ರಶ್ನೆಗೆ ಉತ್ತರ ಬರೆಯುವಾಗ ಪ್ರಮುಖವಾದ ಪದ ಅಥವಾ ವಾಕ್ಯಕ್ಕೆ ಅಡಿಗೆರೆ (ಅಂಡರ್‌ಲೈನ್‌) ಹಾಕುವುದು ಪರಿಣಾಮಕಾರಿ. ಪ್ರತಿ ಪ್ರಶ್ನೆಯ ಉತ್ತರ ಪೂರ್ಣಗೊಂಡ ನಂತರ ಒಂದು ಗೆರೆ ಎಳೆದು ಅಥವಾ ಸ್ವಲ್ಪ ಜಾಗ ಬಿಟ್ಟು ಇನ್ನೊಂದು ಪ್ರಶ್ನೆಗೆ ಉತ್ತರ ಬರೆದಲ್ಲಿ ಮೌಲ್ಯಮಾಪಕರ ಗಮನ ಸೆಳೆಯಲು ಅನುಕೂಲವಾಗುತ್ತದೆ. ಕೆಲವು ವಿದ್ಯಾರ್ಥಿಗಳು ಅಂಡರ್‌ ಲೈನ್‌ ಹಾಕುವುದು ಮತ್ತು ಉತ್ತರಗಳ ಮಧ್ಯೆ ಗೆರೆ ಹಾಕಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆ ರೀತಿ ಆಗದಂತೆ ಎಚ್ಚರವಹಿಸುವುದು ಒಳಿತು. ಗುಂಡಾದ ಅಕ್ಷರಗಳ ಉತ್ತರಪತ್ರಿಕೆಗಳು ಮೌಲ್ಯಮಾಪಕರ ಗಮನವನ್ನು ಸಹಜವಾಗಿ ಸೆಳೆಯುತ್ತವೆ ಎಂಬುದು ನೆನಪಿರಲಿ. ಒಟ್ಟಿನಲ್ಲಿ, ಪರೀಕ್ಷೆ ಬರೆಯುವ ಆ ಎರಡು ಅಥವಾ ಮೂರು ಗಂಟೆಗಳಲ್ಲಿ ಮನಸ್ಸನ್ನು ಶಾಂತ ಹಾಗೂ ಜಾಗೃತವಾಗಿಟ್ಟುಕೊಂಡು, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದಲ್ಲಿ ಯಶಸ್ಸು ಖಾತ್ರಿ.

ಹೀಗೆ ಮಾಡಬೇಡಿ
ಕೆಲವೊಮ್ಮೆ ಕೊಠಡಿ ಮೇಲ್ವಿಚಾರಕರು ಯಾವುದೋ ವಿದ್ಯಾರ್ಥಿಯನ್ನು ಏನೋ ಮಾತನಾಡಿಸಿದರೆ ವಿದ್ಯಾರ್ಥಿಗಳು ಆ ಸನ್ನಿವೇಶವನ್ನೇ ನೋಡುತ್ತಾ, ಸಮಯ ವ್ಯರ್ಥ ಮಾಡುತ್ತಾರೆ. ಉತ್ತರ ಚೆನ್ನಾಗಿ ತಿಳಿದಿರುವ, ಕಡಿಮೆ ಅಂಕದ ಪ್ರಶ್ನೆಗಳಿಗೆ ದೀರ್ಘ‌ ಉತ್ತರ ಬರೆಯುವ ಮೂಲಕ ಹೆಚ್ಚು ಸಮಯ ವಿನಿಯೋಗಿಸುತ್ತಾರೆ. ಹೀಗಾಗಿ, ಹೆಚ್ಚು ಅಂಕ ಬೇಡುವ ಪ್ರಶ್ನೆಗಳಿಗೆ ಸಮಯದ ಕೊರತೆಯಾಗಿ ಕಡಿಮೆ ಉತ್ತರ ಬರೆಯುತ್ತಾರೆ. ಇದರಿಂದ ಹೆಚ್ಚಿನ ಅಂಕಗಳಿಕೆ ಅಸಾಧ್ಯ. ಪರೀಕ್ಷಾ ಕೊಠಡಿಯೊಳಗಿನ ಒಂದೊಂದು ನಿಮಿಷವನ್ನೂ ಸದುಪಯೋಗ ಮಾಡಿಕೊಳ್ಳಬೇಕು.

Advertisement

-ಡಾ.ಎಚ್‌.ಬಿ.ಚಂದ್ರಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next