Advertisement

ಪ್ರಬಂಧ: ಆ ಮೂರು ದಿನಗಳು

07:24 PM Apr 20, 2019 | mahesh |

ಯಾವತ್ತಿನಂತೆ ಅವತ್ತೂ ಬೆಳಿಗ್ಗೆ ಪೇಪರ್‌ ಓದುತ್ತಿದ್ದಾಗ ಪ್ಯಾಡ್‌ ಮನ್‌ ಅನ್ನುವ ಹಿಂದಿ ಸಿನಿಮಾ ಸದ್ಯದಲ್ಲೇ ತೆರೆ ಕಾಣಲಿದೆ ಎನ್ನುವ ವಿಷಯ ಕಣ್ಣಿಗೆ ಬಿತ್ತು. ಅದೊಂದು ಸತ್ಯಕತೆಯಿಂದ ಪ್ರೇರಣೆ ಪಡೆದ ಸಿನಿಮಾ, ಅರುಣಾಚಲಂ ಮುರುಗನಾಥಂ ಎಂಬ ಒಬ್ಬ ಅವಿದ್ಯಾವಂತ ವ್ಯಕ್ತಿ ಮುಟ್ಟಿನ ಸಮಯದಲ್ಲಿ ತನ್ನ ಹೆಂಡತಿ ಪಡುವ ಕಷ್ಟ ನೋಡಲಾಗದೆ ಕಡಿಮೆ ವೆಚ್ಚದಲ್ಲಿ ಸ್ಯಾನಿಟರಿ ಪ್ಯಾಡ್‌ ತಯಾರಿಸುವ ಯಂತ್ರದ ಅನ್ವೇಷಣೆ ಮಾಡುವುದು, ತನ್ಮೂಲಕ ಸಾಮಾಜಿಕ ಬದಲಾವಣೆ ಮಾಡುವುದು ಚಲನಚಿತ್ರಕ್ಕೆ ಆಧಾರ ಎನ್ನುತ್ತಿತ್ತು ವರದಿ. ಇದನ್ನು ಓದುತ್ತಿದ್ದಂತೆ ಮಡಿವಂತ ಸಮಾಜದಲ್ಲಿ ಹುಟ್ಟಿದ ಹೆಮ್ಮಕ್ಕಳೆಲ್ಲರೂ ಒಂದಾನೊಂದು ಕಾಲದಲ್ಲಿ ಕಟ್ಟುನಿಟ್ಟಾಗಿ ಆಚರಣೆಯಲ್ಲಿದ್ದ ಈ ರೂಢಿಗತ ಸಂಪ್ರದಾಯವನ್ನು ದಾಟಿ ಬಂದಿದ್ದರ ಕುರಿತು ನೆನಪು ಹಿಮ್ಮುಖವಾಗಿ ಚಲಿಸಿತು.

Advertisement

ಮೂರ್‍ನಾಲ್ಕು ದಶಕಗಳ ಹಿಂದೆ ಆ ಮೂರು ದಿನಗಳು ಅನ್ನುವುದು ಸಂಪ್ರದಾಯಸ್ಥರ ಮನೆಯ ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಅನುಭವಿಸಬೇಕಾದ ಶಿಕ್ಷೆಯಾಗಿತ್ತು. ಯಾರನ್ನೂ ಮುಟ್ಟಿಸಿಕೊಳ್ಳುವಂತಿಲ್ಲ, ಕೊನೆಗೆ ಬಟ್ಟೆ ಹಾಕಿಕೊಂಡ ಸಣ್ಣ ಮಕ್ಕಳನ್ನೂ. ಅವಳದೇ ಮಗುವಾಗಿದ್ದರೂ ಬೇರೊಬ್ಬರ ಹತ್ತಿರ ಅದರ ಬಟ್ಟೆ ತೆಗೆಸಿ ಅದನ್ನು ಮುಟ್ಟಿಸಿಕೊಳ್ಳಬೇಕು ಅಥವಾ ಅರಿಯದ ಮಗು ಅಭ್ಯಾಸ ಬಲದಿಂದ ಓಡಿಬಂದು ಅಮ್ಮನಿಗೆ ತೆಕ್ಕೆ ಬಿದ್ದರೆ ಅದರ ಬಟ್ಟೆ ಬಿಚ್ಚಿದ ನಂತರ ಅದಕ್ಕೆ ಮನೆಯೊಳಗೆ ಪ್ರವೇಶ. ಮುಟ್ಟಾದ ಹೆಣ್ಣುಮಕ್ಕಳು ವಾಸ್ತುಬಾಗಿಲು ದಾಟಿ ಮನೆಯೊಳಗೆ ಪ್ರವೇಶಿಸುವಂತಿಲ್ಲ. ಕಡಿಮಾಡಿನ ಕೋಣೆಯಲ್ಲಿ ಒಬ್ಬಂಟಿಯಾಗಿ ಮಲಗಬೇಕಾದ ಹದಿವಯಸ್ಸಿನ ಹುಡುಗಿಯರಿಗೆ ರಾತ್ರಿಹೊತ್ತಿನ ಕಗ್ಗತ್ತಲು ಭೀತಿ ಹುಟ್ಟಿಸುತ್ತಿತ್ತು. ಯಾವತ್ತೋ ಕೇಳಿದ ದೆವ್ವ-ಭೂತಗಳ ಕತೆಗಳು ನೆನಪಿಗೆ ಬಂದು ಬಿಗಿದ ಮುಸುಕಿನೊಳಗಿನ ದೇಹ ಬೆವರಿ ಒದ್ದೆಮುದ್ದೆಯಾಗುತ್ತಿತ್ತು. ಕಡಿಮಾಡಿನಲ್ಲಿ ಓಡಾಡುವ ಇಲಿ, ಹೆಗ್ಗಣಗಳ ಸದ್ದು ಅವುಗಳನ್ನು ಹುಡುಕಿಕೊಂಡು ಆಗಾಗ ಮನೆಗೆ ಭೇಟಿ ಕೊಡುವ ಹಾವುಗಳನ್ನು ನೆನಪಿಸಿ ಎದೆ ಬಡಿತ ತಾಳ ತಪ್ಪುತ್ತಿತ್ತು. ಒಂದೊಂದು ದಿನ ಕಳೆದ ಹಾಗೂ ಒಂದೊಂದು ತಡೆ ದಾಟಿ ಬಂದ ಅನುಭವ. ಹಾಸಿ ಹೊದೆಯಲು ಹರಕು ಕಂಬಳಿ, ಹಳೆಯ ಬೆಡ್‌ಶೀಟುಗಳು. ತಲೆದಿಂಬಿಗೆ ಒಂದೆರಡು ಗೋಣೀಚೀಲಗಳು. ಮೂರು ದಿನ ಮೈಗೆ ನೀರು ಸೋಕಿಸದೆ ಮೈಯಿಡೀ ಅಂಟಂಟು. ತನ್ನ ದೇಹದ ಕುರಿತು ತನಗೇ ಜಿಗುಪ್ಸೆ. ಹುಡುಗಿ ಮೈ ನೆರೆಯುತ್ತಿದ್ದಂತೆ ಅವಳನ್ನು ಸ್ಕೂಲು ಬಿಡಿಸಿ ಮನೆಯಲ್ಲಿ ಕೂರಿಸುವ ಸಂಪ್ರದಾಯಸ್ಥರಿರುತ್ತಿದ್ದರು. ಎಷ್ಟು ಓದಿದರೇನು, ಒಲೆ ಬೂದಿ ತೆಗೆಯೋದು ತಪ್ಪುತ್ತಾ? ಅನ್ನುವುದು ತೀರಾ ಪ್ರಚಲಿತದಲ್ಲಿದ್ದ ಗಾದೆಮಾತು. “ಆಯ್ತು. ಹೋಗಿ ಬಾ ಸ್ಕೂಲಿಗೆ’ ಎನ್ನುವ ಧಾರಾಳತನ ತೋರಿಸಿದರೂ ಮುಟ್ಟಿನ ಆಚರಣೆಯಲ್ಲಿದ್ದ ಬಿಗಿ ಸಡಿಲವಾಗುತ್ತಿರಲಿಲ್ಲ.

ಸ್ನಾನ ಮಾಡದೆಯೇ ಅವಳು ಸ್ಕೂಲಿಗೆ ಹೋಗಿ ಬರಬೇಕು. ಹೈಸ್ಕೂಲು ವಿದ್ಯಾರ್ಥಿನಿಯರು ಅಂದರೆ ಹದಿವಯಸ್ಸಿನ ಹುಡುಗಿಯರು. ಮೈನೆರೆಯುವ ಕಾಲ. ಅದೇನು ಹೊತ್ತು ಗೊತ್ತು, ಸಮಯ ಸಂದರ್ಭ ನೋಡಿ ಆರಂಭವಾಗುವ ಪ್ರಕ್ರಿಯೆ ಅಲ್ಲ. ಎಷ್ಟೋ ಸಲ ಸ್ಕೂಲಿಗೆ ಬಂದ ಸಂದರ್ಭದಲ್ಲಿಯೇ ಈ ನಿಸರ್ಗ ಸಹಜ ಕ್ರಿಯೆ ನಡೆದುಬಿಡುತ್ತಿತ್ತು. ಈ ಬಗ್ಗೆ ಯಾವ ಅರಿವೂ ಇಲ್ಲದ ಹುಡುಗಿ ಹೆದರಿ ಕಂಗಾಲಾಗುತ್ತಿದ್ದಳು. ಕೂತಲ್ಲಿಂದ ಏಳುವಂತಿಲ್ಲ. ಹಿಂಭಾಗದಲ್ಲಾಗಿರಬಹುದಾದ ಒದ್ದೆ ಎಲ್ಲರಿಗೂ ಗೋಚರಿಸಿಬಿಡಬಹುದೆಂಬ ಭಯ. ತನಗೇನೋ ಆಗಿದೆಯೆಂಬ ಭೀತಿ. ಲೈಂಗಿಕ ಶಿಕ್ಷಣ ಮಕ್ಕಳಿಗೆ ಬೇಕೇ, ಬೇಡವೇ? ಎನ್ನುವುದು ಬಹುಚರ್ಚಿತವಾಗುತ್ತಿರುವ ಕಾಲ ಇದು. ಹುಡುಗಿಯೊಬ್ಬಳು ಅನಿವಾರ್ಯವಾಗಿ ಎದುರಿಸಬೇಕಾದ ಇಂಥ ಸಂದರ್ಭಗಳ ಕುರಿತು ಆ ಕಾಲದಲ್ಲಿ ಮನೆಯ ಹಿರಿ ಹೆಂಗಸರು ಬಾಯಿ ಬಿಟ್ಟು ಏನನ್ನೂ ಹೇಳಿಕೊಟ್ಟಿರುತ್ತಿರಲಿಲ್ಲ.

ಎಲ್ಲಾ ತನ್ನಿಂತಾನೇ ಗೊತ್ತಾಗುತ್ತೆ ಎನ್ನುವ ಧೋರಣೆ ಅನೇಕ ಮನೆಗಳಲ್ಲಿ ಇದ್ದಿದ್ದು ನಿಜ. ಅಕ್ಕಂದಿರ, ಗೆಳತಿಯರ ಜೊತೆ ನಡೆಯುತ್ತಿದ್ದ ಗುಸುಗುಸು, ಪಿಸುಪಿಸುಗಳಿಂದ ಈ ಕುರಿತಾದ ಮಾಹಿತಿ ಕಲೆ ಹಾಕಿಕೊಂಡವರಿರುತ್ತಿದ್ದರು. ನನ್ನ ಒಬ್ಬ ಸಹಪಾಠಿಯ ಹೆಸರು ಇವತ್ತಿಗೂ ನನಗೆ ನೆನಪಿದೆ. ತಾರಾ. ಸ್ಕೂಲಿನಲ್ಲಿ ಮೈನೆರೆಯುವ ಅಮಾಯಕ, ಮುಗ್ಧ ಹುಡುಗಿಯರನ್ನು ಸಂತೈಸುವ ಯಜಮಾನಿಕೆ ವಹಿಸಿಕೊಂಡು ನರ್ಸಮ್ಮನಂತೆ ಕೆಲಸ ಮಾಡುತ್ತಿದ್ದಳು. ಅಂತವರನ್ನು ಲೇಡೀಸ್‌ ರೂಮಿಗೆ ಕರೆದುಕೊಂಡು ಹೋಗಿ, ಕಲೆಯಾದ ಜಾಗ ಫ‌ಕ್ಕನೆ ಗೋಚರಿಸದಂತೆ ನೆರಿಗೆ ಮಾಡಿ ಸೇಫ್ಟಿಪಿನ್ನಿನಿಂದ ಚುಚ್ಚಿ, ಮನೆಗೆ ಕಳಿಸಿಕೊಡುತ್ತಿದ್ದಳು. ತೀರಾ ಹೆದರಿದವರಿಗೆ ತಾನೇ ಜೊತೆಯಾಗುತ್ತಿದ್ದಳು. ಸ್ಕೂಲಿಗೆ ಹೋಗಿ ಬರುವ ಆ ಮೂರು ದಿನ ಅನ್ನುವುದೇನು ಸುಲಭದ ಮಾತೇ? ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆ. ರಕ್ಷಣಾ ವ್ಯವಸ್ಥೆಯನ್ನೂ ಮೀರಿ ಬಟ್ಟೆ ಕಲೆಯಾಗಿರಬಹುದೇ ಎನ್ನುವ ದಿಗಿಲು. ಅನಿವಾರ್ಯವಾದಾಗ ಉಪಯೋಗಿಸಲು ಟಾಯ್ಲೆಟ್ಟಿನ ಕೊರತೆ. ಟಾಯ್ಲೆಟ್‌ ಇದ್ದರೂ ನೀರಿನ ಸೌಲಭ್ಯವಿಲ್ಲದ ದುರ್ಗತಿ. ಹಾಗೆಂದು ತಿಂಗಳಿಗೆ ಮೂರು ದಿನ ರಜಾ ಹಾಕಿ ಮನೆಯಲ್ಲಿ ಕೂರಲು ಸಾಧ್ಯವೆ? ದೊಡ್ಡ ಮನಸ್ಸು ಮಾಡಿ ಸ್ಕೂಲಿಗೆ ಕಳಿಸುವುದೇ ವಿಶೇಷದ ಸಂಗತಿ. ಒಂದೊಮ್ಮೆ ಪರೀಕ್ಷೆಯಲ್ಲಿ ಫೇಲಾದರೆ ಹಿರಿಯರು ತಲೆಕೆಡಿಸಿಕೊಳ್ಳದೆ “ಒಂದು ಕುತ್ತ ಕಳೆಯಿತು’ ಎಂದು ಸಮಾಧಾನ ಪಡುತ್ತಿದ್ದರೆಂದು ನನ್ನ ಅನಿಸಿಕೆ. ಹುಡುಗರಿರಲಿ, ಹುಡುಗಿಯರಿರಲಿ, ಓದು, ಬರಿ… ಎಂದು ಹಿರಿಯರು ಬೆನ್ನು ಬೀಳದೆ ದಾರ ಸಡಿಲ ಬಿಡುತ್ತಿದ್ದ ಕಾಲ. ಆಗ ಓದಿ ಮುಂದೆ ಬಂದವರು ಇದ್ದಾರೆಂದರೆ ಅವರ ಸ್ವಂತ ಜವಾಬ್ದಾರಿಯಿಂದ, ಸಾಧಿಸಬೇಕೆಂಬ ಹಟದಿಂದ, ಭವಿಷ್ಯದ ಕುರಿತಾದ ಮುನ್ನೆಚ್ಚರಿಕೆಯಿಂದ. ಅರವತ್ತು, ಎಪ್ಪತ್ತು ದಾಟಿದ ಹಿರಿಯ ತಲೆಗಳನ್ನು ಕೇಳಿ ನೋಡಿ. ಬಡತನ ಎನ್ನುವ ಕುಲುಮೆಯಲ್ಲಿ ಬೆಂದು ಪುಟವಿಟ್ಟ ಚಿನ್ನದಂತೆ ಮೇಲೆ ಬಂದವರೇ ಹೆಚ್ಚು. ಬಡತನ ಅನ್ನುವುದು ಆಗ ಅತ್ಯಂತ ಸಾಮಾನ್ಯವಾಗಿತ್ತು. ಈಗ ಎಲ್ಲರ ಕೈಯಲ್ಲೂ ದುಡ್ಡು ಓಡಾಡುತ್ತಿರುತ್ತದೆ. ಬಿಡಿ ಆ ವಿಷಯ.

ಮುಟ್ಟಾದ ಹೆಂಗಸರು ಯಾರನ್ನೂ ಸೋಕಿಸಿಕೊಳ್ಳದೆ ಮಾರುದೂರದಲ್ಲಿರುತ್ತಿದ್ದರೆೆ ಹೀಗೇಕೆ ಎಂದು ಮಕ್ಕಳಿಗೆ ಕುತೂಹಲ. ಆ ಹೆಂಗಸರು ಆಗ ಕೊಡುತ್ತಿದ್ದ ಸಿದ್ಧ ಉತ್ತರವನ್ನು ಈಗ ನೆನೆದರೆ ನಗು. “ಕಾಗೆ ಮುಟು¤’ ಎನ್ನುವುದು ಎಲ್ಲರ ಸಾಮಾನ್ಯ ಉತ್ತರ. “ಕಾಗೆ ಮುಟ್ಟಿದರೆ ಹಾಗೆ ಮೂರುಮೂರು ದಿನ ದೂರ ಕುಳಿತುಕೊಳ್ಳಬೇಕೆ?’ ಎಂದು ಕೇಳಬೇಕೆನ್ನುವ ಜಾಣತನ ಯಾವ ಮಕ್ಕಳಿಗೂ ಇರದೆ ಹಸೀಸುಳ್ಳನ್ನು ಸತ್ಯವೆಂದು ನಂಬಿಕೊಂಡುಬಿಡುತ್ತಿದ್ದರು. ಮುಟ್ಟಾದ ಹೆಂಗಸರು ಅಂದರೆ ಅವರಿಗಾಗಿ ಮೀಸಲಿಟ್ಟ ಕೋಣೆಯ ಮೂಲೆಯಲ್ಲೊಂದಿಷ್ಟು ಜಾಗ. ನೀರು ತುಂಬಿಸಿಕೊಳ್ಳಲು ಒಂದು ಹಿತ್ತಾಳೆಯ ತಂಬಿಗೆ. ಕಾಫಿ ಹಾಕಿಸಿಕೊಂಡು ಕುಡಿಯಲು ಅದರ ಮೇಲೆ ಕವುಚಿಟ್ಟ ಒಂದು ಲೋಟ. ಮುಟ್ಟಾದವರ ಗಾಳಿ ಸೋಕದಷ್ಟು ದೂರದಲ್ಲಿ ನಿಂತು ಅವರಿಗೊಂದು ಬಾಳೆಲೆ ಹಾಕಿ ದೂರದಿಂದಲೇ ತಿಂಡಿ, ಊಟ ಬಡಿಸುವ ಕ್ರಮ. ಉಂಡ ಎಲೆ ತೆಗೆದು, ಗೋಮಯದಿಂದ ಸಾರಿಸಿ ಶುದ್ಧ ಮಾಡಿ, ಮನೆಯನ್ನು ಬಳಸಿಕೊಂಡು ಹೊರಹೊರಗಿನಿಂದ ಓಡಾಡಬೇಕಾದ ಅನಿವಾರ್ಯ. ಗಳಿಗೆಗೊಂದು ಸಲ ಅನ್ನುವಂತೆ ಈಗ ದೂರದರ್ಶನದಲ್ಲಿ ಪ್ರಸಾರವಾಗುವ ಸ್ಯಾನಿಟರಿ ಪ್ಯಾಡ್‌ಗಳ ಕಲ್ಪನೆಯೂ ಇರದಿದ್ದ ಆ ಕಾಲದಲ್ಲಿ ಹತ್ತಿಬಟ್ಟೆಗಳಿಗೆ ಬಹಳ ಪ್ರಾಮುಖ್ಯ. ಹಳೆಯ ಹತ್ತಿಸೀರೆಗಳನ್ನು ಮನೆಮಗಳ ಬಾಣಂತನಕ್ಕೆಂದು, ಮುಟ್ಟಿನ ದಿನಗಳ ಆವಶ್ಯಕತೆಗಳಿಗೆಂದು ಕಾಯ್ದಿಟ್ಟುಕೊಳ್ಳುತ್ತಿದ್ದುದು ತೀರಾ ಸಾಮಾನ್ಯ ಸಂಗತಿಯಾಗಿತ್ತು. ಅಳತೆ ಬಿಗಿಯಾಗುವ ಎಳೆಮಕ್ಕಳ ಬಟ್ಟೆಗಳು, ಹಳೆಯ ಹತ್ತಿಸೀರೆಗಳು, ವರಸರಿವೆಗೆ ಉಪಯೋಗಕ್ಕೆ ಬರುವ ಹಳೆ ಲಂಗಗಳು, ಅಡಿಕೆಕೊಯ್ಲಿಗೆಂದು ಕಾದಿಟ್ಟ ಬಣ್ಣ ಮಾಸಿದ ಸ್ವೆಟರುಗಳು ಮುಂತಾದವನ್ನು ಕಟ್ಟಿಟ್ಟಿರುತ್ತಿದ್ದ ದೊಡ್ಡಗಾತ್ರದ ಬಟ್ಟೆಗಂಟಿಗೆ “ಚಪ್ಪರಿವೆ ಗಂಟು’ ಎನ್ನುವುದು ಮಲೆನಾಡಿನಲ್ಲಿ ವಾಡಿಕೆಯಲ್ಲಿದ್ದ ಹೆಸರು. ಈ ಚಪ್ಪರಿವೆಗಂಟನ್ನು ಬಿಚ್ಚಿದರೆ ಕಳೆದುಹೋದ ಕಾಲವೊಂದು ಕಣ್ಮುಂದೆ ಮರುಕಳಿಸಿ ಮನಸ್ಸನ್ನು ಭಾವುಕಗೊಳಿಸಿಬಿಡುತ್ತಿತ್ತು.

Advertisement

ಎರಡು ಕತೆಗಳು ನೆನಪಾಗುತ್ತಿವೆ. ಬರೆದವರ ಹೆಸರು ಮರೆತಿದೆ. ನಿರ್ಮಾಣಹಂತದ ಮನೆಯೊಂದರಲ್ಲಿ ದುಡಿಯುತ್ತಿದ್ದ ಕೂಲಿ ಹೆಂಗಸೊಬ್ಬಳು ನೆರೆಮನೆಯ ಗೃಹಿಣಿಯ ಬಳಿ ಹಳೆಯ ಹತ್ತಿಸೀರೆಗಳನ್ನು ಯಾಚಿಸಿದ ಳಂತೆ. ಅದು ಮೈನೆರೆದ ಮಗಳ ಆವಶ್ಯಕತೆಗೆ ಎಂದು ಗೊತ್ತಾಗುತ್ತಿದ್ದಂತೆ ಗೃಹಿಣಿಯ ಮನಸ್ಸು ಆದ್ರìವಾಗುವ ಹಾಗೆ ಓದುಗರ ಮನಸ್ಸೂ ಮಿಡಿಯುತ್ತದೆ. ಇನ್ನೊಂದು ಕತೆ ಹಳೆಗಾಲದ್ದಲ್ಲ, ಈ ಜಮಾನಾದ್ದು. ಆಫೀಸಿಗೆ ದುಡಿಯಲು ಹೋಗುವ ತಾಯಿ. ಅವಳಿಗೊಬ್ಬ ಮಗಳು. ತಾನು ದೊಡ್ಡವಳಾದಾಗ ಅಮ್ಮನ ಸಲಹೆ, ಸೂಚನೆ ಎದುರು ನೋಡದೆ ಮೆಡಿಕಲ್‌ ಸ್ಟೋರಿಗೆ ಹೋಗಿ ಪ್ಯಾಡನ್ನು ಕೊಂಡು ತಂದು ಸಂದರ್ಭವನ್ನು ನಿಭಾಯಿಸುತ್ತಾಳೆ ಮಗಳು. ಬೆಳೆಯುತ್ತಿರುವ ಮಗಳಿಗೆ ತಾನು ಅನಿವಾರ್ಯಳೇನಲ್ಲ ಎನ್ನುವ ಭಾವನೆ ತಾಯಿಗೆ ನುಂಗಲಾರದ ತುತ್ತಾಗುತ್ತದೆ ಅನ್ನುವುದು ಕತೆಯ ತಿರುಳು.

ಮುಟ್ಟಿನ ಮೂರು ದಿನಗಳನ್ನು ಸದುಪಯೋಗಪಡಿಸಿಕೊಳ್ಳುವ ಹೆಣ್ಣುಮಕ್ಕಳೂ ಕೆಲವರಿರುತ್ತಿದ್ದರು. ಎಲ್ಲೆಲ್ಲಿಂದಲೋ ಒಟ್ಟು ಹಾಕಿಟ್ಟುಕೊಂಡಿರುತ್ತಿದ್ದ ಕತೆ, ಕಾದಂಬರಿಗಳನ್ನು ಓದಿ ಬಿಸಾಕುತ್ತಿದ್ದರು. ಅಕ್ಕಿ ಚೊಕ್ಕ ಮಾಡಿಕೊಳ್ಳುವುದು, ಅಡಿಕೆಕೊಯ್ಲು ಆಗಿದ್ದರೆ ದಿನವಿಡೀ ಕೂತು ಅಡಿಕೆ ಸುಲಿಯುವುದು ಮುಂತಾದ ಮೈಲಿಗೆಯಾಗದ ಕೆಲಸಗಳಲ್ಲಿ ಮೈಕೈ ಹುಡಿ ಮಾಡಿಕೊಳ್ಳುವವರೂ ಇರುತ್ತಿದ್ದರು. ಮೂರುದಿನಗಳ ಏಕಾಂತವಾಸದ ನಂತರ ಮನೆಮಂದಿ ಏಳುವ ಬಹಳ ಮೊದಲೇ ಮುಟ್ಟಾಗಿದ್ದವಳನ್ನು ಎಬ್ಬಿಸುತ್ತಿದ್ದಳು ಯಜಮಾನಿ¤. ಮಲಗಿದ್ದ ನೆಲವನ್ನು ಸಗಣಿಯಿಂದ ಸಾರಿಸಿ ಶುದ್ಧ ಮಾಡಿ, ಉಪಯೋಗಿಸಿದ್ದ ಬಟ್ಟೆಬರೆಗಳನ್ನು ನೀರಲ್ಲಿ ನೆನೆಸಿ, ಗೋಮಯ ಕಲಕಿದ ನೀರಿನಿಂದ ತಲೆಯ ಮೇಲೆ ನಾಲ್ಕಾರು ತಂಬಿಗೆ ನೀರು ಹೊಯ್ಯಿಸಿಕೊಂಡು ಶುದ್ಧಿಯಾಗಿ, ಆ ನಂತರವಷ್ಟೇ ನೀರಿನ ಹಂಡೆ ಮುಟ್ಟುವ ಅವಕಾಶ. ಮುಟ್ಟಿನ ಬಟ್ಟೆಗಳನ್ನು ಒಗೆದು ಒಣಗಿಸಿಕೊಳ್ಳುವುದೊಂದು ದೊಡ್ಡ ಗೋಳು. ನೀರು ಹರಿವ ಜಾಗದಲ್ಲೋ ಅಥವಾ ಅದಕ್ಕೆಂದು ಪ್ರತ್ಯೇಕವಾಗಿ ನೀರು ಹಾಕಿಸಿಕೊಂಡೋ, ಕದ್ದುಮುಚ್ಚಿ ನಡೆಸಬೇಕಾದ ಕರ್ಮ. ಒಣಗಿಸಿದ ಬಟ್ಟೆ ಯಾರ ಕಣ್ಣಿಗೂ ಬೀಳಬಾರದೆನ್ನುವ ಮುನ್ನೆಚ್ಚರಿಕೆ.

ಮುಟ್ಟಾದವರು ಹೊರಗೆ ಕೂರದೆ ಮನೆಯೊಳಗಿದ್ದರೆ ಏನೇನು ಅನಾಹುತಗಳಾಗಬಹುದು ಎನ್ನುವುದಕ್ಕೆ ನಾನಾ ಕತೆಗಳು ಪ್ರಚಲಿತ ದಲ್ಲಿದ್ದುವು. “ಮುಟ್ಟುಚಟ್ಟು’ ಆದರೆ ಮನೆಯೊಳಗೆ ನಾಗರಹಾವು ಕಾಣಿಸಿ ಕೊಳ್ಳುತ್ತದೆ, ಕೆಂಜಿರುವೆ ಏಳುತ್ತದೆ, ಮನೆಗೆ ಕೇಡಾಗುತ್ತದೆ ಎನ್ನುವಂಥ ನಾನಾ ಭಯಗಳು. ಮುಟ್ಟಾದ ಹೆಂಗಸರಿಗೆ ದೇವರು ಮೈಲಿ ದೂರ.

ಮನೆಯಲ್ಲಿ ಮದುವೆಮುಂಜಿ, ಮನೆಒಕ್ಕಲಿನಂಥ ವಿಶೇಷಕಟ್ಲೆಗಳು ನಡೆಯುವಾಗ ಮುಟ್ಟಿನ ತಲೆಬೇನೆ ಸಣ್ಣದೇನಲ್ಲ. ಮದುವೆಗೆ ಮುಹೂರ್ತ ಇಡುವಾಗ ಮದುಮಗಳು ಮಾತ್ರವಲ್ಲ, ಹುಡುಗ, ಹುಡುಗಿಯ ತಾಯಂದಿರಿಗೂ ಮುಟ್ಟಿನ ದಿನ ಆಗಿರಬಾರದೆನ್ನುವ ಕಟ್ಟುಕಟ್ಟಲೆ. ಮುಟ್ಟು ಮಾಮೂಲಿಗಿಂತ ಬೇಗ ಅಥವಾ ತಡ ಆಗುವುದಕ್ಕೆ ಮಾತ್ರೆ ತೆಗೆದುಕೊಳ್ಳುವ ಪದ್ಧತಿ ಜಾರಿಯಲ್ಲಿತ್ತು ಮತ್ತು ಈಗಲೂ ಇದೆ. ಅತೀವ ಆತಂಕಕ್ಕೊಳಗಾಗುವುದೇ ಕಾರಣವಾಗಿ ವಿಶೇಷ ಕಟ್ಲೆಯ ಸಂದರ್ಭದಲ್ಲೇ ಮುಟ್ಟಾಗುವುದು, ಮನೆಯಲ್ಲಿ ನಡೆಸಿದ ಸಿದ್ಧತೆಗಳೆಲ್ಲ ನೀರಮೇಲಿನ ಹೋಮವಾಗುವುದು ಆಗೀಗ ನಡೆಯುತ್ತಿದ್ದುವು. ಹಬ್ಬಹರಿದಿನಗಳಲ್ಲೂ ಮಾತ್ರೆ ನುಂಗಿ ಮುಟ್ಟು ಮುಂದೂಡುವ ಹೆಂಗಸರಿರುತ್ತಿದ್ದರು ಎನ್ನುವಾಗ ಒಂದು ವಿಷಯ ನೆನಪಾಗುತ್ತಿದೆ. ಒಂದೂರಲ್ಲಿ ಮುಡು ಮಾಡುವವ ಒಬ್ಬ ಇದ್ದ. ಶುಭಕಾರ್ಯಕ್ಕೆ ಮುನ್ನವೇ ಮುಟ್ಟಿನ ಆತಂಕ ಕಳೆದುಕೊಂಡು ವಿಘ್ನ ನಿವಾರಿಸಿಕೊಳ್ಳಲೆಳಸುವವರು ಅವನನ್ನು ಹುಡುಕಿಕೊಂಡು ಹೋಗುತ್ತಿದ್ದರು. ಮರಳಿ ಮನೆಗೆ ಬರುವಷ್ಟರಲ್ಲಿ ಆಕೆಗೆ ಮುಟ್ಟಿನ ಚಿಹ್ನೆ ಕಾಣಿಸಿಕೊಂಡು ಮುಖ ಮೊರದಗಲವಾಗಿರುತ್ತಿತ್ತು. ಬರೀ ಚಿಹ್ನೆ ಅಷ್ಟೇ. ಮೂರು ದಿನ ಹೊರಗೆ ಕೂತು ನಂತರ ಶುಚಿಭೂìತಳಾಗಿ ಒಳಗೆ ಬರುವ ಅವಳು ಮಾಮೂಲಿ ದಿನ ಬಂದಾಗ ಮತ್ತೆ ಮುಟ್ಟಾಗುತ್ತಿದ್ದಳೆಂದು ಕೇಳಿ ಬಲ್ಲ ಸಂಗತಿ.

ಆದರೆ ವಾರದ ಮುಂಚೆಯೇ ಆ ತಡೆಯನ್ನು ದಾಟಿ ಬಂದಿರುವುದರಿಂದ ಮತ್ತೆ ಹೊರಗೆ ಕೂರಬೇಕಾದ ಪ್ರಮೇಯ ಇರುತ್ತಿರಲಿಲ್ಲ. ಮೈಲಿಗೆಯ ದಿನಗಳು ಕಳೆದುಹೋಗಿವೆ ಎನ್ನುವ ಲೆಕ್ಕಾಚಾರದಲ್ಲಿ ಶುಭಕಾರ್ಯದಲ್ಲಿ ನಿಶ್ಚಿಂತಳಾಗಿ ಭಾಗಿಯಾಗುತ್ತಿದ್ದಳು ಗೃಹಿಣಿ. ಎಲ್ಲಾ ಅವರವರ ನಂಬಿಕೆಗೆ ಬಿಟ್ಟ ವಿಷಯ. ಆ ಕಾಲಕ್ಕೆ ಹೋಲಿಸಿದರೆ ಈಗ ಮನೆಯಲ್ಲಿ ಶುಭಕಾರ್ಯ ನಡೆಯುವಾಗ ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ಹೆಮ್ಮಕ್ಕಳು ತೀರಾ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಈ ಪದ್ಧತಿ ಕಣ್ಮರೆಯಾಗಿದೆ ಎಂದು ಧೈರ್ಯವಾಗಿ ಹೇಳುವಂತಿಲ್ಲ. ಮಡಿವಂತರ ಮನೆಗಳಲ್ಲಿ ಹೊರಗೆ ಕೂರುವ ಪದ್ಧತಿ ಈಗಲೂ ಉಳಿದುಕೊಂಡಿದೆ. ಆದರೆ ಕಟ್ಟುನಿಟ್ಟು ಕಮ್ಮಿಯಾಗಿದೆ. ದೇವರಮನೆ, ಅಡುಗೆಮನೆ ಹೊರತುಪಡಿಸಿ ಉಳಿದಂತೆ ಓಡಾಡುವ, ಸ್ನಾನ ಮಾಡುವ ವಿನಾಯಿತಿ ದೊರಕಿದೆ. ಹಳೆಯ ಹತ್ತಿಸೀರೆಯ ತುಣುಕಿನ ಮುಜುಗರದಿಂದ ಪಾರಾಗಿ ನಿರ್ಭೀತವಾಗಿ ನಡೆದಾಡಬಹುದಾದ ಪ್ಯಾಡ್‌ನ‌ ಸೌಭಾಗ್ಯ ಕೆಲ ರಾಜ್ಯಗಳಲ್ಲಿ ಸರ್ಕಾರದ ಸವಲತ್ತಾಗಿರುವುದು ಬಡ ಹೆಣ್ಣುಮಕ್ಕಳಿಗೆ ವರದಾನವಾಗಿದೆ. ಆರೋಗ್ಯ ದೃಷ್ಟಿಯಿಂದ ಕೂಡಾ ಇದೊಂದು ಅತ್ಯುತ್ತಮ ಬೆಳವಣಿಗೆ. ಹೆಣ್ಣೊಬ್ಬಳ ಮಾಸಿಕ ಕಿರಿಕಿರಿಗೆ ಗಂಡಸೊಬ್ಬ ಸಹಾನುಭೂತಿಯಿಂದ ಸ್ಪಂದಿಸಿ, ಪರಿಹಾರಕ್ಕೆಳಸಿ ಯಶಸ್ವಿಯಾಗಿರುವುದು ನಿಜಕ್ಕೂ ಒಂದು ಮಹತ್ವದ ವಿದ್ಯಮಾನ, ಅಲ್ಲವೇ?

ವಸುಮತಿ ಉಡುಪ

Advertisement

Udayavani is now on Telegram. Click here to join our channel and stay updated with the latest news.

Next