ಮಂಗಳೂರು: ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಮತ್ತು ಮೂಡುಬಿದಿರೆಯ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ವತಿಯಿಂದ ರಾಜ್ಯ ಮಟ್ಟದ 46ನೇ ವಿದ್ಯಾರ್ಥಿ ಯೋಜನೆ ಕಾರ್ಯಕ್ರಮದ ಪ್ರಾಜೆಕ್ಟ್ಗಳ ಸೆಮಿನಾರ್ ಮತ್ತು ಪ್ರದರ್ಶನ ಆ. 11 ಮತ್ತು 12ರಂದು ಮೂಡುಬಿದಿರೆಯ ಮಿಜಾರು ಶೋಭಾವನ ಕ್ಯಾಂಪಸ್‌ನ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ನಡೆಯಲಿದೆ ಎಂದು ಕೆಎಸ್‌ಸಿಎಸ್‌ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ| ಯು.ಟಿ. ವಿಜಯ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒಟ್ಟು 443 ವಿದ್ಯಾರ್ಥಿ ಪ್ರಾಜೆಕ್ಟ್ ಗಳು ಪ್ರದರ್ಶನಗೊಳ್ಳಲಿದ್ದು, 800ಕ್ಕೂ ಅಧಿಕ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ 150ಕ್ಕೂ ಹೆಚ್ಚು ಉಪನ್ಯಾಸಕರು ಪಾಲ್ಗೊಳ್ಳುವರು.
ಪ್ರಾಜೆಕ್ಟ್ಗಳನ್ನು ಮೌಲ್ಯಮಾಪನ ಮಾಡಲು ಭಾರತೀಯ ವಿಜ್ಞಾನ ಸಂಸ್ಥೆ, ನ್ಯಾಶನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್, ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ ಮತ್ತು ಇತರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಿಂದ 30ಕ್ಕೂ ಹೆಚ್ಚು ಪರಿಣಿತರು ಭಾಗವಹಿಸಲಿದ್ದಾರೆ. ಸೆಮಿನಾರ್ ಹಾಗೂ ಪ್ರದರ್ಶನದಲ್ಲಿ ಆಯ್ಕೆ ಮಾಡಲ್ಪಟ್ಟ ಪ್ರಾಜೆಕ್ಟ್ ಗಳಿಗೆ ಸಂಬಂಧಿಸಿ ವಿದ್ಯಾರ್ಥಿಗಳು ಸೆಮಿನಾರ್, ಪ್ರಾತ್ಯಕ್ಷಿಕೆ ನೀಡಲಿದ್ದಾರೆ. 75 ಅತ್ಯುತ್ತಮ ಪ್ರಾಜೆಕ್ಟ್ಗಳನ್ನು ಆಯ್ಕೆ ಮಾಡಿ ಪುರಸ್ಕರಿಸಲಾಗುವುದು. ಅತ್ಯು ತ್ತಮ ಯೋಜನೆಗಳನ್ನು ಪ್ರಸ್ತುತ ಪಡಿಸುವ ಕಾಲೇಜಿಗೆ ಬಹುಮಾನ ನೀಡಲಾಗುವುದು ಎಂದರು.
ಆ. 11ರಂದು ಬೆಳಗ್ಗೆ 10.30ಕ್ಕೆ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಉಮಾನಾಥ ಕೋಟ್ಯಾನ್, ಕೆಎಸ್‌ಸಿಎಸ್‌ಟಿ ಕಾರ್ಯದರ್ಶಿ ಪ್ರೊ| ಅಶೋಕ್ ಎಂ. ರಾಯಚೂರು ಅತಿಥಿಗಳಾಗಿ ಭಾಗವಹಿಸುವರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು. ಆ. 12ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಹಾಗೂ “ವರ್ಷದ ಅತ್ಯುತ್ತಮ ಪ್ರಾಜೆಕ್ಟ್’ ಪ್ರಶಸ್ತಿ ಪ್ರದಾನ ನಡೆಯಲಿದ್ದು, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸುವರು. ಆಳ್ವಾಸ್ ಶಿಕ್ಷಣ ಪ್ರತಿ ಷ್ಠಾನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿರುವರು ಎಂದರು.
ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ| ಪೀಟರ್ ಫೆರ್ನಾಂಡಿಸ್, ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಸುಧೀರ್ ಶೆಟ್ಟಿ, ವೆಂಕಟೇಶ್ ಉಪಸ್ಥಿತರಿದ್ದರು.