ಜೀವನ ಮುಂದೆ ಹೀಗೇ ಸಾಗುತ್ತದೆ ಎಂದು ಊಹಿಸಿಕೊಳ್ಳಲಾಗುವುದಿಲ್ಲ. ಜೀವನದ ಪಯಣದಲ್ಲಿ ಯಾವಾಗ ಯಾವ ತಿರುವು ಬೇಕಾದರೂ ಎದುರಾಗಬಹುದು, ಅದರಿಂದ ಏನು ಬೇಕಾದರೂ ಆಗಬಹುದು. ಪೊಲೀಸ್ ಆಫೀಸರ್ ಸೂರ್ಯ ತೇಜ್ ಬಾಳಲ್ಲೂ ಇಂತಹ ತಿರುವು ಸಿಗುತ್ತದೆ, ಆಗಬಾರದ ಅನಾಹುತವೊಂದು ಆಗುತ್ತದೆ. ಆದರೆ, ಆ ತಿರುವು, ಆಘಾತದ ಹಿಂದೆ ದೊಡ್ಡದೊಂದು ರೋಚಕ ಕಥೆ ಇದೆ. ಅದೇನು ಎಂಬ ಕುತೂಹಲವಿದ್ದರೆ ನೀವು “ಆ ದೃಶ್ಯ’ ನೋಡಬಹುದು.
ಒಂದು ಕಡೆ ತಮ್ಮದೇ ಶೈಲಿಯ ರೊಮ್ಯಾಂಟಿಕ್ ಸಿನಿಮಾ ಮಾಡುತ್ತಾ ತಮ್ಮ ಪಕ್ಕಾ ಅಭಿಮಾನಿಗಳನ್ನು ಖುಷಿಪಡಿಸುತ್ತಿರುವ ರವಿಚಂದ್ರನ್, ಇನ್ನೊಂದು ಕಡೆ ತಮಗೆ ಇಷ್ಟವಾದ ಸಸ್ಪೆನ್ಸ್ -ಥ್ರಿಲ್ಲರ್ ಸಿನಿಮಾಗಳನ್ನು ಮಾಡುತ್ತಾ ಮತ್ತೂಂದು ವರ್ಗದ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಈ ಹಿಂದೆ “ದೃಶ್ಯ’ ಸಿನಿಮಾದಲ್ಲಿ ಥ್ರಿಲ್ ಕೊಟ್ಟಿದ್ದ ಕ್ರೇಜಿಸ್ಟಾರ್ ಈ ಬಾರಿ “ಆ ದೃಶ್ಯ’ದಲ್ಲಿ ಆ ಥ್ರಿಲ್ ಅನ್ನು ದುಪ್ಪಟ್ಟು ಮಾಡಿದ್ದಾರೆ. ನೀವು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಾಗಿದ್ದರೆ ನಿಮಗೆ “ಆ ದೃಶ್ಯ’ ಖಂಡಿತಾ ಇಷ್ಟವಾಗುತ್ತದೆ.
ಆರಂಭದಿಂದ ಕೊನೆಯವರೆಗೂ ಕುತೂಹಲ ಹೆಚ್ಚಿಸುತ್ತಲೇ ಸಾಗುವ ಈ ಸಿನಿಮಾದಲ್ಲಿ ಆಗಾಗ ನಿಮಗೆ ಸಣ್ಣಪುಟ್ಟ ಸಂದೇಹಗಳು, ಪ್ರಶ್ನೆಗಳು ಎದುರಾಗುತ್ತವೆ. ಆದರೆ, ಆ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಮುಂದಿನ ಸನ್ನಿವೇಶಗಳಲ್ಲಿ ಸಿಗುವ ಮೂಲಕ ಗೊಂದಲ ನಿವಾರಣೆಯಾಗುತ್ತದೆ. ಅಂದಹಾಗೆ, ಇದು ತೆಲುಗಿನ “ಧ್ರುವಂಗಳ್ ಪದಿನಾರ್’ ಚಿತ್ರದಿಂದ ಸ್ಫೂರ್ತಿ ಪಡೆದ ಚಿತ್ರ. ಆದರೆ, ನಿರ್ದೇಶಕ ಶಿವಗಣೇಶನ್ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು, ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ಒಂದು ಸಸ್ಪೆನ್ಸ್ -ಥ್ರಿಲ್ಲರ್ ಸಿನಿಮಾದಲ್ಲಿ ಅನಾವಶ್ಯಕವಾಗಿ ಹಾಡು, ಫೈಟ್, ಕಾಮಿಡಿ ಇದ್ದರೆ ಕಥೆಯ ಓಘಕ್ಕೆ ಧಕ್ಕೆಯಾಗುತ್ತದೆ. ಆ ಕಾರಣದಿಂದಲೇ ಈ ಸಿನಿಮಾ ಅವೆಲ್ಲದರಿಂದ ಮುಕ್ತ. ಅಪಾರ್ಟ್‌ಮೆಂಟ್‌ನಲ್ಲಿನ ಹುಡುಗಿ ಮಿಸ್ಸಿಂಗ್‌ನಿಂದ, ಪಾರ್ಕ್ ಬಳಿಯ ಪತ್ತೆಯಾಗುವ ಮೃತದೇಹ, ಕೊಲೆಗಾರ, ಅದರ ಹಿಂದಿನ ಹುಡುಕಾಟದ ಅಂಶದೊಂದಿಗೆ “ಆ ದೃಶ್ಯ’ ಸಿನಿಮಾ ಸಾಗುತ್ತದೆ. ಈ ಚಿತ್ರದಲ್ಲಿ ಸೆಂಟಿಮೆಂಟ್‌ನ ಎಳೆಯೊಂದು ಕೂಡಾ ಹಾದು ಹೋಗಿದೆ. ಆದರೆ, ಅದನ್ನಿಲ್ಲಿ ವೈಭವೀರಿಸಿಲ್ಲ.
ಫ್ಲ್ಯಾಶ್‌ಬ್ಯಾಕ್ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ರವಿಚಂದ್ರನ್ ಅವರು ಎರಡು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ತವ್ಯದಲ್ಲಿರುವ ಪೊಲೀಸ್ ಆಫೀಸರ್ ಹಾಗೂ ನಿವೃತ್ತ ಪೊಲೀಸ್ ಆಫೀಸರ್. ಎರಡೂ ಪಾತ್ರಗಳಲ್ಲೂ ಇಷ್ಟವಾಗುತ್ತಾರೆ. ಬಹುತೇಕ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಪೊಲೀಸ್ ಆಫೀಸರ್ ಪಾತ್ರಗಳಲ್ಲಿ ಕಾಣಸಿಗುವ ಗತ್ತು-ಗೈರತ್ತನ್ನು ಬದಿಗೆ ಸರಿಸಿ ರವಿಚಂದ್ರನ್ ತಮ್ಮದೇ ಶೈಲಿಯಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಅಚ್ಯುತ್,ಯಶ್ ಶೆಟ್ಟಿ ಇಷ್ಟವಾಗುತ್ತಾರೆ. ಇನ್ನು ಈ ಚಿತ್ರದಲ್ಲಿ ಸಾಕಷ್ಟು ಮಂದಿ ಹೊಸ ಪ್ರತಿಭೆಗಳು ನಟಿಸಿದ್ದು, ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.
ಚಿತ್ರ: ಆ ದೃಶ್ಯ
ನಿರ್ಮಾಣ: ಕೆ.ಮಂಜು
ನಿರ್ದೇಶನ: ಶಿವ ಗಣೇಶ್
ತಾರಾಗಣ: ರವಿಚಂದ್ರನ್, ಅಚ್ಯುತ್, ಚೈತ್ರಾ ರಾವ್, ಯಶ್ ಶೆಟ್ಟಿ ಮತ್ತಿತರರು.
* ರವಿಪ್ರಕಾಶ್ ರೈ