Advertisement

ಸಾಹಿತ್ಯದ ಮೇಲೆ ಪ್ರೀತಿ ಹುಟ್ಟಿದ ಆ ಕ್ಷಣ

09:46 PM Jul 14, 2019 | Sriram |

ಯಾವುದೇ ವಿಷಯದಲ್ಲಾದರೂ ಅಷ್ಟೇ ನಮ್ಮ ಸಾಮರ್ಥ್ಯ ಹೊರಗೆ ಹಾಕಲು ಅದಕ್ಕೆ ಸರಿಯಾದ ಪ್ರೋತ್ಸಾಹ ಅತ್ಯಗತ್ಯ. ನಾವು ಬೆಳೆದ ವಾತಾವರಣ ನಮ್ಮನ್ನು ಕುಗ್ಗಿಸಲು ಹೊರಟರೆ, ಅವುಗಳನ್ನು ದಾಟಿ ಏನಾದರೂ ಹೊಸತನ್ನು ಪ್ರಯತ್ನಿಸಬೇಕಾದರೆ ಪ್ರೋತ್ಸಾಹ ಮಾಡುವ ನಿಶ್ಕಲ್ಮಶ ಮನಸ್ಸುಗಳು ನಮ್ಮ ವಲಯದಲ್ಲಿರಬೇಕು. ಪಿಯುಸಿ ಮುಗಿದು ಪದವಿ ತರಗತಿ ಸೇರಿದ ಹೊಸತರಲ್ಲಿ ಕಾಲೇಜಿನ ಪರಿಸರ ಸ್ವಲ್ಪ ಭಿನ್ನವಾಗಿಯೇ ಕಂಡಿತು. ಇಲ್ಲಿ ನಾವು ಕಾಲೇಜಿಗೆ ಎಷ್ಟು ಹೊತ್ತು ಬರುತ್ತೇವೆ, ರಜೆ ಯಾಕೆ ಹಾಕಿದ್ದು, ಈ ರೀತಿಯ ಪ್ರಶ್ನೆಗಳು ಬಹು ವಿರಳ. ಪಿಯುಸಿ ತರಗತಿಗಳಲ್ಲಿ ನಾವೇನಾದರೂ ನೃತ್ಯ ಮಾಡಬೇಕೆಂದಾಗ ಲೆಕ್ಚರರ್ ಗಳೇ ಬಂದು ಒತ್ತಾಯಿಸುತ್ತಿದ್ದರು. ಆದರೆ ಇಲ್ಲಿ ಹಾಗಲ್ಲ. ಬೇರೆ ಎಲ್ಲಾ ತರಗತಿಗಳಿಗಿಂತ ಭಿನ್ನವಾಗಿ ಕಂಡಿದ್ದು ನನಗೆ ಪತ್ರಿಕೋದ್ಯಮ ತರಗತಿ. ಹೌದು ಇಲ್ಲಿ ಮಾತು, ಚರ್ಚೆಗಳ ಮೂಲಕ ಗುರು, ಶಿಷ್ಯರ ಸಂಬಂಧ ಹೀಗಿರಬೇಕು ಅಂತಾ ಗೊತ್ತಾಗಿದ್ದೂ ಇಲ್ಲಿಯೇ.

Advertisement

ಪತ್ರಿಕೋದ್ಯಮ ಅಂದರೆ ಬರವಣಿಗೆ, ಸೃಜನಶೀಲತೆಗೆ ಒತ್ತು. ಬರವಣಿಗೆಯೆ ಗೊತ್ತಿಲ್ಲದ ನಾನು ದಿನಾ ಬರೆದು ಹಾಕುತ್ತಿದ್ದೆ. ಆದರೆ ಪ್ರತಿ ಬಾರಿಯೂ ವಿಫ‌ಲವಾಗುತ್ತಿತ್ತು. ನನ್ನ ಬರಹಗಳು ಸಂಪಾದಕರ ಕಸದ ಬುಟ್ಟಿ ಸೇರುತ್ತಿತ್ತು. ಒಂದು ದಿನ ಒಂದು ಹುಡುಗಿ ಬಂದು ನೀನೇನಾದರೂ ಬರೆದು ಹಾಕಿದ್ದೀಯಾ ಎಂದು ಕೇಳಿದಳು. ನಾ ಹೂ ಅಂದೆ. ಪತ್ರಿಕೆಯಲ್ಲಿ ಬಂದಿದೆ ಅಂತಾ ಹೇಳಿದಳು. ನಾನು ಮಧ್ಯಾಹ್ನ ಆ ಪತ್ರಿಕೆ ಖರೀದಿಸಿ ಬಂದು ಹಲವರಲ್ಲಿ ಪತ್ರಿಕೆ ತೋರಿಸಿದೆ. ಅದೇ ದಿನ ಪತ್ರಿಕೋದ್ಯಮದ ಯಾವುದೋ ಕಾರ್ಯಕ್ರಮವಿತ್ತು.

ಅಲ್ಲಿಯವರೆಗೆ ಪತ್ರಿಕೋದ್ಯಮದ ಎಚ್‌.ಒ.ಡಿ. ರಾಜಲಕ್ಷ್ಮೀಯವರನ್ನು ಕಂಡು ಕಾಣದಂತೆ ಹೋಗುತ್ತಿದ್ದ ನನಗೆ ಆವತ್ತು ಅವರಿಗೆ ಲೇಖನದ ಪ್ರತಿಯನ್ನು ತೋರಿಸುವ ತವಕ. ಕಾರ್ಯಕ್ರಮ ಮುಗಿದು ಹೊರಬಂದಾಗ ಮೇಡಮ್‌ ನಂದು ಒಂದು ಆರ್ಟಿಕಲ್‌ ಬಂದಿದೆ ಎಂದಾಗ ಅವರು ತೋರ್ಪಡಿಸಿದ ಪ್ರತಿಕ್ರಿಯೆ ಸ್ಮರಣೀಯ. ತುಂಬಾ ಬ್ಯುಸಿಯಾಗಿದ್ದರೂ ಕಂಗ್ರಾಜ್ಯುಲೇಶನ್‌ ಅನ್ನುತ್ತಾ ವಾಟ್ಸಪ್‌ ನಂಬರ್‌ ಕೊಟ್ಟು ಏನಾದರೂ ಇದ್ದರೆ ಕೇಳಿ ಎಂದು ಮಾತನಾಡಿಸಿ ನಿರ್ಗಮಿಸಿದರು. ಕೊನೆಗೆ ನಾನೇ ಮೆಸೇಜ್‌ ಹಾಕಿ ನಾನು ಹೆಸರು ತಿಳಿಸಿ ಜರ್ನಲಿಸಂ ಸ್ಟುಡೆಂಟ್‌ ಆಗ ಅವರು ತುಂಬಾ ಉದ್ದವಾಗಿ ಆ ಸಣ್ಣ ಲೇಖನದ ಬಗ್ಗೆ ಕೊಟ್ಟ ಪ್ರಶಂಸೆಯ ಸುರಿಮಳೆ ನಾನೇನೋ ದೊಡ್ಡ ಸಾಧನೆ ಮಾಡಿದಾಗೆ ಅನಿಸಿದ್ದು ಸುಳ್ಳಲ್ಲ. ಅನಂತರ ನನಗೆ ಓದಲು ಪುಸ್ತಕವನ್ನು ಕೊಡುತ್ತಿದ್ದರು. ನನಗಂತಲ್ಲ ಸಾಹಿತ್ಯದ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅವರು ಕೊಡುತ್ತಿದ್ದ ಪ್ರೋತ್ಸಾಹಕ್ಕೆ ಅವರ ವಿದ್ಯಾರ್ಥಿಯಾಗಬೇಕು ಎಂದು ಅನಿಸುತ್ತದೆ.

 - ವಿಶ್ವಾಸ್‌ ಅಡ್ಯಾರ್‌

Advertisement

Udayavani is now on Telegram. Click here to join our channel and stay updated with the latest news.

Next