Advertisement
ಕಳೆಗೆಟ್ಟಿದ್ದ ಮುಖ ಚಹರೆ ನಿದ್ರೆಯಿಲ್ಲದೇ ಕಳೆದ ರಾತ್ರಿಗಳ ಸಾರುತ್ತಿತ್ತು. ಮುಖದ ಮೇಲೆ ಹುಸಿ ನಗೆ ತಂದುಕೊಂಡು ಸೋಫಾ ದತ್ತ ಕೈಚಾಚಿ, ಟೀ ತರುತ್ತೇನೆ ಅಂತ ಬೆನ್ನು ಮಾಡಿ ಹೊರಟವಳ ಕಣ್ಣು ತುಂಬಿದ್ದು ಮಾತ್ರ ಊಹಿಸಬಲ್ಲವಳಾಗಿದ್ದೆ. ಇಷ್ಟು ಬಲವಂತಕ್ಕೆ ಮನಸ್ಸನ್ನು ಕಡಿದಾದ ಬಂಡೆಯಂತೆ ಮಾಡಿಕೊಂಡು ಕನಸು-ಪ್ರೀತಿ ಮಮತೆಯನ್ನೆಲ್ಲ ದೂರ ಮಾಡಿಕೊಳ್ಳುವ ನೋವು ಅನುಭವಿಸಿದವರಿಗೆ ಮಾತ್ರ ನಿಲುಕುವಂಥದ್ದು. ಸೋಫಾ ಮೇಲೆ ಬ್ಯಾಗ್ ಬಿಸಾಕಿದವಳೇ ಅವಳ ಹಿಂದೆ ಕಿಚನ್‌ಗೆ ನಡೆದು ಬೆನ್ನು ಹಿಡಿದು ಸವರಿದೆ. ಒಮ್ಮೆಲೇ ಛಿದ್ರಗೊಂಡವಳಂತೆ ಬಿಕ್ಕಳಿಸಿದಳು, ಟೀ ಕುದಿಯುತ್ತಲೇ ಇತ್ತು. ಸತತ ಇಪ್ಪತ್ತೆರಡು ನಿಮಿಷಗಳಾದರೂ ನಿಲ್ಲದ ಬಿಕ್ಕು….
Related Articles
ಅವಳನ್ನೇ ದಿಟ್ಟಿಸುತ್ತಾ ಹೇಳಿದೆ….
Advertisement
“ಯಾವುದೇ ಕಾರಣಕ್ಕೂ ಅವನನ್ನು ನಿನ್ನಿಂದ ದೂರವಾಗಿಸಿಕೊಳ್ಳಬೇಡ. ಅವನು ಹೇಗೋ ಬದುಕಿಬಿಡಬಲ್ಲ. ಆದರೆ, ನೀನು ನಿರ್ಜೀವವಾಗುತ್ತೀಯ. ಹೌದು, ನೀನು ಮನಸ್ಸಿಂದ ರೆಸಿಡೆನ್ಷಿಯಲ್ ಸ್ಕೂಲ್‌ಗೆ ಸೇರಿದ್ದರೆ ಇಷ್ಟು ನೋವು-ಆತಂಕ ಅನುಭವಿಸುತ್ತಿರಲಿಲ್ಲ. ಆದರೆ, ಇದೆಲ್ಲಾ ನಿನ್ನಿಚ್ಛೆ ಗೇ ವಿರುದ್ದ ನಡೆಯುತ್ತಿರುವುದರಿಂದ ಹೀಗೆ ಅದುಮಿಟ್ಟ ಮಮತೆ-ಪ್ರೀತಿಗಳು ನಿನ್ನನ್ನು ಆತಂಕ ಅನಿವಾರ್ಯತೆಗಳಲ್ಲೇ ಬದುಕುವಂತೆ ಮಾಡುತ್ತಿವೆ. ಒಮ್ಮೆ ಎಲ್ಲರನ್ನೂ ಕೂರಿಸಿಕೊಂಡು ಘಂಟಾಘೋಷವಾಗಿ ಹೇಳಿಬಿಡು, ಯಾವುದೇ ಕಾರಣಕ್ಕೂ ಮಗನನ್ನು ರೆಸಿಡೆನ್ಷಿಯಲ್ ಸ್ಕೂಲ್ ಗೆ ಸೇರಿಸುವುದಿಲ್ಲ. ಹೀಗೆ ಮಾಡಿದರೆ, ಹಲವು ದಿನ ರಂಪಾಟ, ವಿಪರೀತದ ಚುಚ್ಚುಮಾತುಗಳು ನಿಶ್ಚಿತ. ಅದಕ್ಕೆ ಮಾನಸಿಕವಾಗಿ ಸಿದ್ದಳಾಗು. ಆದರೆ, ಇದಕ್ಕೆಲ್ಲಾಅಂಜಿ ನಿರ್ಣಯ ಬದಲಿಸಬೇಡ…’ ಅಂದೆ ಹಿಂದೆ ಬ್ರೆಜಿಲ್‌ನಲ್ಲಿ ಸಿರಿವಂತ ಕುಟುಂಬದ ಕುಡಿಯಾಗಿ, 1682 ರಲ್ಲಿ ಡಿನಾ ಮಾರಿಯಾ ಜನಿಸುತ್ತಾಳೆ. ಹದಿನೇಳರ ನವಿರು ಯೌವನದಲ್ಲಿ ಆಕೆಗೆ ಮದುವೆ ಗೊತ್ತುಪಡಿಸುತ್ತಾರೆ. ಆಕೆಗೆ ಅದು ಅತೀ ಬಲವಂತದ ಮದುವೆ. ಇಷ್ಟವಿಲ್ಲದ ಬದುಕು ಬದುಕಲು ಮನಸ್ಸು ಒಪ್ಪದೆ ಆಕೆ ವಿಹ್ವಲಳಾಗಿ ಆಕೆ ಅನುಭವಿಸುವ ಯಾತನೆ ಘೋರವೇ. ಆದರೆ, ಇಂಥ ಪರಿಸ್ಥಿಯಲ್ಲಿ ಇತರೆ ಹೆಣ್ಣು ಮಕ್ಕಳಂತೆ ಸಾಯುವ ಪ್ರಯತ್ನವಾಗಲಿ, ಖನ್ನತೆಗೆ ಒಳಗಾಗುವುದಾಗಲಿ ಇನ್ಯಾರನ್ನೋ ಮದುವೆಯಾಗುವುದಾಗಲೀ ಮಾಡದೇ, ರಾತ್ರೋರಾತ್ರಿ ಮನೆಬಿಟ್ಟು ಹೊರಡುತ್ತಾಳೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಲುವಾಗಿ ಗಂಡು ವೇಷ ತೊಟ್ಟು ಬಲಾತ್ಸಾì ಆಗಿ ಬದಲಾಗಿ ನೇವಿ ಸೇರುತ್ತಾಳೆ. ಅಲ್ಲಿಂದ ಎದೆಯಲ್ಲಿ ತಾನು ಹೆಣ್ಣೆಂಬ ಸತ್ಯ ಹೂಳಿಕೊಂಡ ಅವಳ ಅದ್ಭುತ ಪರಾಕ್ರಮದ ಬದುಕು ತೆರದುಕೊಳ್ಳುತ್ತದೆ. ಆಗಷ್ಟೇ ವಾಸ್ಕೋಡಿಗಾಮ ಸಮುದ್ರ ಮುಖೇನ ಭಾರತಕ್ಕೆ ಮಾರ್ಗ ಕಂಡುಹಿಡಿದು ಇನ್ನೂರು ವರ್ಷ ಗತಿಸಿದ ಸಮಯ. ಪೋರ್ಚುಗೀಸ್‌ರ ನೇವಿಯಲ್ಲಿ ಅವಳ ಪರಾಕ್ರಮದ ಹೋರಾಟದ ಫಲವಾಗಿ ಬಲಿಷ್ಠ ಹು¨ªೆಗಳನ್ನು ಅಲಂಕರಿಸಿ ಕಡೆಗೆ ಕಾರ್ಪೋರಲ್ ಕೂಡ ಆಗುತ್ತಾಳೆ. ಇಷ್ಟಾದರೂ ಅವಳು ಹೆಣ್ಣೆಂಬ ಸತ್ಯ ಯಾರಿಗೂ ತಿಳಿದಿರುವುದಿಲ್ಲ. ಇಂಥ ಸತ್ಯದ ಹೊರೆ ಹೊತ್ತು ಹದಿನಾಲ್ಕು ವರ್ಷ ಬಲಾತ್ಸಾì ಆಗಿ ಬದುಕುತ್ತಾಳೆ. ಮಾಂಡೋವಿ ನದಿ ತೀರದ ಮರಾಠರ ಕೋಟೆ ಆಕ್ರಮಣಕ್ಕಾಗಿ ಸಾವಂತ್ ವಿರುದ್ಧ ನಡೆದ ಯುದ್ಧದಲ್ಲಿ ಹೊಸ ವೈಸ್‌ರಾಯ್ ಡಿ ಮೆಲ್ಲೋರೊಂದಿಗೆ ಪರಾಕ್ರಮದಿಂದ ಹೋರಾಡಿ ಗೆದ್ದರೂ, ತೀವ್ರವಾಗಿ ಘಾಸಿಯಾಗುತ್ತಾಳೆ. ಹೀಗೆ ಗಾಯಗೊಂಡ ಡಿನಾಳನ್ನು ಆದರದಿಂದ ಉಪಚರಿಸುವ ಡಿ ಮೆಲ್ಲೋಗೆ ಆಕೆ ಹೆಣ್ಣೆಂಬ ಸತ್ಯ ತಿಳಿಯುತ್ತದೆ. ಎಷ್ಟೋ ದಿನ ಗಾಯಗೊಂಡು ಮೂಛೆìಯಿಂದ ಎಚ್ಚರಗೊಂಡವಳಿಗೆ ಇಷ್ಟೆಲ್ಲಾ ತನ್ನ ಪರಾಕ್ರಮದ ಹೋರಾಟ -ಹುದ್ದೆ ಸಾಧನೆಯಲ್ಲಿ ಸದಾ ಹೂತ ಹೊರೆಯಾಗಿದ್ದ ತನ್ನ ಸತ್ಯ ಹೊರಬಿದ್ದಿರುವುದು ಅರಿವಾಗಿ ಅರ್ಧಜೀವವಾಗಿ ಹೋಗುತ್ತಾಳೆ. ಆದರೆ ಡಿ ಮೆಲ್ಲೋಅವಳ ಸತ್ಯದ ಬಗ್ಗೆ ಯಾರಿಗೂ ತಿಳಿಸದೇ ಆದ್ರìತೆ – ಅಪ್ಯಾಯತೆಯಿಂದ ಅವಳ ಗತ ಅರಿಯುತ್ತಾನೆ. ಸತ್ಯದ ಹೊರೆಹೊತ್ತು ಎದೆಗುಂದಿದ್ದವಳಿಗೆ ಭರವಸೆ ತುಂಬುತ್ತಾನೆ. ಅವನ ಮೇಲೆ ಮೂಡುವ ಗೌರವ-ಆದರದಿಂದ ಅವನನ್ನು ಮದುವೆಯಾಗಲು ನಿರ್ಣಯಿಸಿ 14 ವರ್ಷಗಳ ಗಂಡು ಜೀವನದಿಂದ ಹೊರಬಂದು ತನ್ನ ನಿಜವನ್ನು ಘೋಷಿಸಿ ತನ್ನೆಲ್ಲಾ ಪರಾಕ್ರಮದ ಫಲದ ಸ್ಥಾನಮಾನ ಕಳೆದುಕೊಳ್ಳುವ ಭಯಾನಕ ಮುಂದಿದ್ದರೂ ತಾನು ಹೆಣ್ಣೆಂಬ ಸತ್ಯವನ್ನು ಜಗದ ಮುಂದಿಡುತ್ತಾಳೆ. ಅಷ್ಟು ವರ್ಷ ಸತ್ಯವೊಂದನ್ನು ಹೂತುಕೊಂಡು ಭಯದ ಬದುಕು ಬದುಕುತ್ತಿದ್ದವಳಿಗೆ ನಿಜವನ್ನು ತೆರೆದಿಟ್ಟ ಗಳಿಗೆ ಅನುಭವಿಸುವ ನಿರಾಳತೆ ವರ್ಣನೆಗೆ ನಿಲುಕದ್ದು. ಅನಿವಾರ್ಯತೆಗೆ ಪ್ರೀತಿ- ಮಮತೆಯನ್ನು ಅದುಮಿಟ್ಟುಕೊಂಡು ನಿರಾಳವಾಗಿ ಬದುಕಲು ಹೇಗೆ ಸಾಧ್ಯ? ಹೀಗೆ ಅಸಹನೀಯತೆ-ದುಗುಡ-ಸಂಕಟ ಸತತ ಹೊತ್ತು ತೊಳಲಾಡುತ್ತಾ ಬದುಕುವ ಬದಲು ಸತ್ಯ ಹೇಳಿಬಿಡು. ಮಗನನ್ನು ಅಲ್ಲಿಗೆ ಕಳಿಸಿ ದಿನನಿತ್ಯ ನಿನ್ನೊಂದಿಗೇ ನೀನೇ ಹೋರಾಡುವಂತಾಗುವ ಬದಲು, ಇವೆಲ್ಲಾ ಜಂಜಡಗಳೊಂದಿಗೆ ಹೋರಾಡುತ್ತೇನೆ ಅಂತ ಘೋಷಿಸಿಬಿಡು ಅಂದೆ. ಹಲವು ನಿಮಿಷಗಳು ವಿಚಿತ್ರ ಮೌನ ದರ್ಬಾರು ನಡೆಸಿತು. ಖಾಲಿಯಿದ್ದ ಟೀ ಗ್ಲಾಸು ಹಿಡಿದು ಮೇಲೆದ್ದವಳ ಮುಖದಲ್ಲಿ ಕಳೆದ ಏಳೆಂಟು ತಿಂಗಳುಗಳಿಂದ ಅನುಭವಿಸಿದ ಘೋರ ಕದನಕ್ಕೆ ತೆರೆಬೀಳುತ್ತಿದ್ದ ನಿರಾಳ ಭಾವ. ಟೀ ಗ್ಲಾಸ್ ಸಿಂಕ್ ನಲ್ಲಿಟ್ಟವಳೇ ಇಲ್ಲೇ ಮಾಲ್‌ಗೆ ಹೋಗಿ ಬರೋಣ ಬಾ ಅಂತ ಪರ್ಸ್ ಕೈಗೆತ್ತಿಕೊಂಡಳು. ಅಪಾರ್ಟ್‌ಮೆಂಟ್ ಹಿಂದಿದ್ದ ಸಂಪಿಗೆ ಮರದಿಂದ ತೇಲಿಬಂದ ನವಿರುಗಾಳಿಗೆ ಹಾಯೆನಿಸಿತು. -ಮಂಜುಳಾ ಡಿ.