Advertisement

ಪ್ರಜಾಪ್ರಭುತ್ವಕ್ಕೆ ಅಣಕವಾದ ಆ 21 ತಿಂಗಳು

03:25 AM Apr 14, 2019 | Team Udayavani |

ಮಂಗಳೂರು: ಭಾರತದ ಪ್ರಜಾತಾಂತ್ರಿಕ ಪರಂಪರೆಯ ಅಧ್ಯಯನ ನಡೆಸುವ ಸಂದರ್ಭದಲ್ಲಿ ಭಾರತದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ (ಎಮರ್ಜೆನ್ಸಿ) ಬಗ್ಗೆ ಮಾಹಿತಿಯು ಮುಖ್ಯವಾಗಿರುತ್ತದೆ.

Advertisement

1975ರ ಜೂನ್‌ ತಿಂಗಳಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ ದೇಶದ ತುರ್ತು ಪರಿಸ್ಥಿತಿಯ ಪ್ರಸ್ತಾವಕ್ಕೆ ಆಗಿನ ರಾಷ್ಟ್ರಪತಿ ಫಕ್ರುದ್ದೀನ್‌ ಆಲಿ ಅಹ್ಮದ್‌ ಅವರು ಅಂಕಿತ ಹಾಕಿದ್ದರು. ರಾತ್ರಿಯ ವೇಳೆ ಹಾಕಿದ ಈ ಅಂಕಿತದ ಪರಿಣಾಮ ಆ ಕ್ಷಣದಿಂದಲೇ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು.

ಭಾರತದ ಸಂವಿಧಾನವನ್ನು ಜಗತ್ತಿನ ಶ್ರೇಷ್ಠ ಸಂವಿಧಾನ ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ ದೇಶ ಕಂಡ ಈ 21 ತಿಂಗಳ ಅವಧಿಯ ಈ ತುರ್ತು ಪರಿಸ್ಥಿತಿಯ (ವಿಷಮ ಪರಿಸ್ಥಿತಿ ಎಂದೂ ಉಲ್ಲೇಖೀಸಲಾಗುತ್ತದೆ) ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ನಡುವೆಯೇ ಪರಸ್ಪರ ಸಂಘರ್ಷ ಉಂಟು ಮಾಡಲು ಕಾರಣವಾಯಿತು. ಹೀಗೆ, ಭಾರತದ ಸಂವಿಧಾನದ ಅಧ್ಯಯನ ಮಾಡುವವರು ಈ ತುರ್ತು ಪರಿಸ್ಥಿತಿಯ ಘಟನಾವಳಿಗಳ ಬಗ್ಗೆ ವಿಶೇಷ ಗಮನಹರಿಸುತ್ತಾರೆ. (25-6-1975ರಿಂದ 21-3-1977ರವರೆಗೆ).

1971ರ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಇಂದಿರಾ ಅವರು ಅಧಿಕಾರಕ್ಕೆ ಬಂದರು. ಗರೀಬಿ ಹಟಾವೋ ಎಂಬ ಘೋಷಣೆಯೇ ಈ ಗೆಲುವಿಗೆ ಮುಖ್ಯ ಕಾರಣವಾಗಿತ್ತು. ಆರಂಭಿಕ ಹಂತದಲ್ಲಿ ಅಧಿಕಾರ ನಿರ್ವಹಣೆಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ, ನಿಧಾನಕ್ಕೆ ಆಕೆ ಅನೇಕ ಸಮಸ್ಯೆಗಳನ್ನು ಎದುರಿಸಿದರು. 1971ರಲ್ಲಿ ಭಾರತವು ಪಾಕಿಸ್ಥಾನದ ವಿರುದ್ಧ ಯುದ್ಧ ಗೆದ್ದಿತ್ತು. ಪಾಕ್‌ ವಿಭಜನೆಯಾಗಿ ಬಾಂಗ್ಲಾ ದೇಶ ಅಸ್ತಿತ್ವಕ್ಕೆ ಬರಲು ಕೂಡ ಆಕೆ ಕಾರಣರಾಗಿದ್ದರು. ಸರಕಾರ ಮತ್ತು ಪಕ್ಷ ಸಂಪೂರ್ಣವಾಗಿ ಆಕೆಯ ಹಿಡಿತದಲ್ಲಿತ್ತು.

ಆದರೆ, 1973-75ರಲ್ಲಿ ಆಕೆಯ ವಿರುದ್ಧ ದೇಶಾದ್ಯಂತ ಅಸಮಾಧಾನ ಸ್ಫೋಟಿಸಿತು. ನವನಿರ್ಮಾಣ ಅಭಿಯಾನ, ವಿದ್ಯಾರ್ಥಿಗಳ ಪ್ರತಿಭಟನೆ, ಇಂದಿರಾ ವಿರುದ್ಧ ಚುನಾವಣಾ ಲೋಪಗಳ ಕೇಸುಗಳು ಇತ್ಯಾದಿ ನಡೆದವು. ಇಂದಿರಾ ಅನರ್ಹತೆಯ ಬಗ್ಗೆ ಸೂಚನೆ ದೊರೆಯಲಾರಂಭಿಸಿತು. ಈ ನಡುವೆ ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ನೇತೃತ್ವದಲ್ಲಿ ದೇಶಾದ್ಯಂತ ಇಂದಿರಾ ವಿರುದ್ಧ ಪ್ರತಿಭಟನೆ ಸಂಘಟನೆಯಾಯಿತು. ನ್ಯಾಯಾಂಗ ತನ್ನ ವಿರುದ್ಧವಾಗಿ ತೀರ್ಪು ನೀಡುತ್ತಲೇ ಆಕೆ ದೇಶದಲ್ಲಿ ಅರಾಜಕತೆ ಉಂಟಾಗಿದೆ ಎಂದು ತುರ್ತು ಪರಿಸ್ಥಿತಿ ಘೋಷಿಸಿದರು.

Advertisement

ಇಂದಿರಾ ಅವರ ಟೀಕಾಕಾರರು, ವಿಪಕ್ಷ ನಾಯಕರನ್ನು ಬಂಧಿಸಲಾಯಿತು. ಪತ್ರಿಕೆಗಳ ಮೇಲೆ ನಿಯಂತ್ರಣ ಹೇರಲಾಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಮಂದಿ ವಿಪಕ್ಷ ನಾಯಕರು, ಸಕ್ರಿಯ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

ಮುಂದೆ, ಆಕೆ ಸಂಸತ್ತನ್ನೂ ಮುಂದೂಡಿದರು. 1977ರಲ್ಲಿ ಚುನಾವಣೆ ನಡೆಸಿದರು; ಅವರೂ ಸೋತರು. ಅವರ ಪಕ್ಷವೂ ಸೋತಿತು. ವಿಪಕ್ಷಗಳೆಲ್ಲ ಒಗ್ಗೂಡಿ ಜನತಾ ಪಕ್ಷ ಸ್ಥಾಪನೆಯಾಗಿ ಅಧಿಕಾರ ಪಡೆದರು. ಮೊರಾರ್ಜಿ ದೇಸಾಯಿ ಅವರು ದೇಶದ ಪ್ರಥಮ ಕಾಂಗ್ರೆಸೇತರ ಪ್ರಧಾನಿಯಾದರು. ಆ ಚುನಾವಣೆಯ ಪ್ರಚಾರಕ್ಕೆ ಆಗಿನ ಜನತಾ ಪಕ್ಷದ ಬಹುತೇಕ ವರಿಷ್ಠ ನಾಯಕರು ಮಂಗಳೂರು- ಉಡುಪಿಗೆ ಬಂದದ್ದು ಉಲ್ಲೇಖನೀಯ.

ಅಂದಹಾಗೆ..
ತುರ್ತು ಪರಿಸ್ಥಿತಿಯು ಮಾಧ್ಯಮಗಳಿಗೆ ತೀವ್ರಗತಿಯ ಪ್ರಹಾರ ನೀಡಿತು. ಆಡಳಿತವನ್ನು ಟೀಕಿಸುತ್ತಿದ್ದ ಪತ್ರಿಕಾ ಕಚೇರಿಗಳ ವಿದ್ಯುತ್‌ ಸಂಪರ್ಕವನ್ನು ದೇಶದ ಹಲವೆಡೆ ಕಡಿತಗೊಳಿಸಲಾಗಿತ್ತು. ಪತ್ರಕರ್ತರನ್ನೂ ಬಂಧಿಸಲಾಗಿತ್ತು. ವಿಪರ್ಯಾಸವೆಂದರೆ, ಪತ್ರಿಕಾ ಕಚೇರಿಗಳು ತಮ್ಮ ಪತ್ರಿಕೆಯ ಸಂಪಾದಕೀಯ ಮತ್ತು ಇತರ ವರದಿಗಳನ್ನು ಮುದ್ರಣಕ್ಕೆ ಮುನ್ನ ಜಿಲ್ಲಾಧಿಕಾರಿ ಅಥವಾ ನೇಮಿತ ಅಧಿಕಾರಿಗೆ ತೋರಿಸಬೇಕಾಗಿತ್ತು!

-  ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next