ನವಲಗುಂದ: ಪಟ್ಟಣದಲ್ಲಿ ಕುಡಿಯುವ ನೀರು ಬರುತ್ತದೆಯೋ ಇಲ್ಲವೋ ಎಂದು ಜನರು ಚಾತಕ ಪಕ್ಷಿಯಂತೆ ಕಾದು ಕುಳಿತುಕೊಳ್ಳುವಂತ ಪರಿಸ್ಥಿತಿ ಉಂಟಾಗಿದೆ.
ಹತ್ತು ದಿನವಾದರೂ ಜವಳೇ ಪೇಟೆ, ಕುಂಬಾರ ಓಣಿ, ದೇಸಾಯಿ ಪೇಟೆ, ಸಿದ್ದಾಪುರ ಓಣಿ, ತೆಗ್ಗಿನಕೇರಿ ಓಣಿ, ಆನೆಗುಂದಿ ಪ್ಲಾಟ್, ನೀರಾವರಿ ಕಾಲೋನಿ, ಆರ್ಮಿ ಕಾಲೋನಿ, ಮುದಿಗೌಡರ ಪ್ಲಾಟ್ ಸೇರಿದಂತೆ ಹಲವಾರು ವಾರ್ಡ್‌ಗಳಲ್ಲಿ ನಲ್ಲಿಯ ನೀರು ಬರದೆ ಪುರಸಭೆಯವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸಮಸ್ಯೆಯ ಮೂಲ: ಪಟ್ಟಣದ ಹೃದಯ ಭಾಗದಲ್ಲಿರುವ ನೀಲಮ್ಮನ ಕೆರೆಯಲ್ಲಿ ನೀರಿಲ್ಲ. ಪಟ್ಟಣದ ಎರಡು ಶುದ್ಧೀಕರಣ ಘಟಕ ಇದ್ದರೂ ಅದರಲ್ಲಿಯೂ ನೀರು ಬರುತ್ತಿಲ್ಲ. ಇತ್ತೀಚೆಗೆ ಮಳೆ, ಗಾಳಿ, ಸಿಡಿಲಿನಿಂದ ಪಟ್ಟಣಕ್ಕೆ ನೀರು ಪೂರೈಸುವ ಚನ್ನಮ್ಮನ ಜಲಾಗಾರದ ವಿದ್ಯುತ್ ಪರಿವರ್ತಕ ಸುಟ್ಟುಹೋಗಿದ್ದರಿಂದ ಸಾರ್ವಜನಿಕರಿಗೆ ನೀರು ಬಂಗಾರವಾಗಿದೆ. 10 ದಿನಗಳಾದರೂ ಕೆಲವು ವಾರ್ಡ್‌ಗಳಿಗೆ ನೀರು ಪೂರೈಕೆಯಾಗದ್ದರಿಂದ ಐದು ಕಿಮೀ ದೂರದ ಚನ್ನಮ್ಮನ ಜಲಾಶಯಕ್ಕೇ ಹೋಗಿ ನೀರು ತರುವಂತಾಗಿದೆ. ಇನ್ನು ಹೊಸ ವಿದ್ಯುತ್ ಪರಿವರ್ತಕ ಅಳವಡಿಸುವವರೆಗೂ ನೀರಿನ ಸಮಸ್ಯೆ ಮಾತ್ರ ತಪ್ಪಿದ್ದಲ್ಲ.
ಇಚ್ಛಾಶಕ್ತಿ ಕೊರತೆ: ಪುರಸಭೆಯಲ್ಲಿ ಅನುದಾನಕ್ಕೇನೂ ಕಡಿಮೆ ಇಲ್ಲ. ನೀರು ಪೂರೈಸುವ ಚನ್ನಮ್ಮನ ಜಲಾಗಾರಕ್ಕೆ ಇನ್ನೂ ಒಂದು ವಿದ್ಯುತ್ ಪರಿವರ್ತಕ ಕಾಯ್ದಿರಿಸಿದ್ದರೆ ಈ ರೀತಿ ಅವಘಡ ಸಂಭವಿಸಿದಾಗ ತಕ್ಷಣ ಬದಲಾಯಿಸಿ ಪಟ್ಟಣದ ವಾರ್ಡ್‌ಗಳಿಗೆ ನೀರನ್ನು ಪೂರೈಸಬಹುದಾಗಿತ್ತು. ಆದರೆ ಜನಪ್ರತಿನಿಧಿಗಳು-ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ. ನೀರಿದ್ದರೂ ಸರಿಯಾಗಿ ಬಳಸಿಕೊಳ್ಳದಂತಾಗಿದೆ.
ಜಲಾಗಾರಕ್ಕೆ ಮುಗಿಬಿದ್ದ ಜನತೆ: ಸೋಮವಾರದವರೆಗೆ ನೀರು ಬರುವುದಿಲ್ಲವೆಂಬ ವಿಷಯ ತಿಳಿದ ಸಾರ್ವಜನಿಕರು ನೀರಿಗಾಗಿ ದ್ವಿಚಕ್ರವಾಹನ, ಟಾಟಾ ಏಸ್, ಟ್ರ್ಯಾಕ್ಟರ್, ಆಟೋ ರಿಕ್ಷಾಗಳೊಂದಿಗೆ ಚನ್ನಮ್ಮನ ಜಲಾಗಾರ ಬಳಿ ಜಮಾಯಿಸಿದ್ದರು.
ಜನಪರ ಕಾಳಜಿ ಇದೆಯೇ? ಚನ್ನಮ್ಮನ ಜಲಾಶಯದಿಂದ ಪಟ್ಟಣಕ್ಕೆ ನೀರು ಪೂರೈಸಲು ಅಗತ್ಯವಿರುವ ಅವಶ್ಯಕ ಉಪಕರಣಗಳ ಕೊರತೆಯಿಂದ ಇವತ್ತು ಸಾರ್ವಜನಿಕರಿಗೆ ಬರೆ ಬೀಳುತ್ತಿದೆ. ಜ್ವಲಂತ ಸಮಸ್ಯೆಯತ್ತ ಅದೆಷ್ಟು ಸಲ ಗಮನ ಸೆಳೆದರೂ ಆಡಳಿತ ವ್ಯವಸ್ಥೆ ಜಿಡ್ಡುಗಟ್ಟಿದೆ. ಅಧ್ಯಕ್ಷ-ಉಪಾಧ್ಯಕ್ಷರ ರಾಜೀನಾಮೆಯಿಂದ ಅಧಿಕಾರ ಅಧಿಕಾರಗಳ ಕೈಯಲ್ಲಿದೆ. ಸಂಬಂಧಪಟ್ಟ ಅಧಿ ಕಾರಿಗಳಿಗೆ ವಿಚಾರಿಸಿದರೆ ಟಿಸಿ ಸುಟ್ಟು ಹೋದರೆ ನಾವೇನು ಮಾಡಬೇಕೆಂಬ ಹಾರಿಕೆ ಉತ್ತರ ಕೇಳಿಬರುತ್ತಿದೆ. ಇನ್ನೂ ಜನಪ್ರತಿನಿ ಧಿಗಳು ಅಧ್ಯಕ್ಷ-ಉಪಾಧ್ಯಕ್ಷರ ರಾಜೀನಾಮೆಗಾಗಿ ಪ್ರತಿಭಟನೆ ಮಾಡಿದಂತೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೂ ಪ್ರತಿಭಟನೆ ಮಾಡುವಂತಾಗಲಿ ಎಂಬುದು ಪಟ್ಟಣದ ಜನರ ಅಭಿಪ್ರಾಯ.
ಪ್ರತಿ ಸಲ ಏನಾದರೊಂದು ನೆಪ ಹೇಳುತ್ತಾರೆ. ಬಳಕೆ ಮಾಡಲು ನೀಲಮ್ಮನ ಕೆರೆಯಲ್ಲೂ ನೀರಿಲ್ಲ. ಪರಿಸ್ಥಿತಿ ಹೀಗಿರುವಾಗ ನೀರು ಎಲ್ಲಿದೆಯೋ ಅಲ್ಲಿಗಾದರೂ ಹೋಗಿ ತರಬೇಕು. ಇನ್ನು ನಮ್ಮ ಪರಿಸ್ಥಿತಿ ಎಲ್ಲಿಗೆ ಬರುತ್ತದೆ ನೋಡೋಣ. –
ಮಂಜು ಸುಬೇದಾರ, ಪಟ್ಟಣದ ನಿವಾಸಿ
ವಿದ್ಯುತ್ ಪರಿವರ್ತಕ ಹಾಳಾಗಿದೆ. ಸೋಮವಾರದವರೆಗೆ ನೀರು ಬರುವುದಿಲ್ಲ ಎಂದು ಹೇಳಿದ್ದಾರೆ. ಎರಡು ಡ್ರಮ್ ತುಂಬುಕೊಂಡು ಹೋಗಿ ಮನೆಯಲ್ಲಿಡಬೇಕಿದೆ. –
ನಿಂಗನಗೌಡ ಪಾಟೀಲ, ಪಟ್ಟಣದ ನಿವಾಸಿ
ಮಳೆ, ಗಾಳಿ, ಸಿಡಿಲಿನಿಂದ ಚನ್ನಮ್ಮ ಜಲಾಗಾರದಲ್ಲಿರುವ ವಿದ್ಯುತ್ ಪರಿವರ್ತಕ ಸುಟ್ಟಿರುವುದರಿಂದ ನೀರು ಸರಬರಾಜಿಗೆ ತೊಂದರೆಯಾಗಿದೆ. ಪರಿವರ್ತಕ ಅಳವಡಿಸಲಾಗಿದೆ.
-ವೀರಣ್ಣ ಹಸಬಿ, ಪುರಸಭೆ ಮುಖ್ಯಾಧಿಕಾರಿ
-ಪುಂಡಲೀಕ ಮುಧೋಳೆ