Advertisement

ಸಮಯದ ಮುಳ್ಳು ಎದೆಯ ಚುಚ್ಚಿದಾಗ

12:30 AM Sep 02, 2018 | |

ತಪ್ಪನ್ನು ಒಪ್ಪಿಕೊಂಡು ಮುನ್ನಡೆಯುವಂಥ ಸಕಾರಾತ್ಮಕ ಮಾರ್ಗ ಇನ್ನೊಂದಿರಲಾರದು. ಸಿಖ್‌ಸಮುದಾಯದ ಕ್ಷಮೆ ಕೋರುವ ಮೂಲಕ ಮನಮೋಹನ್‌ ಸಿಂಗ್‌ ಸರ್ಕಾರ ಅಂದು ಸಕಾರಾತ್ಮಕ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ ದಂಗೆಗಳಲ್ಲಿ ಕಾಂಗ್ರೆಸ್‌ನ ಪಾತ್ರವನ್ನು ಅಲ್ಲಗಳೆದ ರಾಹುಲ್‌ ಗಾಂಧಿ ಒಂದಿಡೀ ಸಮುದಾಯವು ಎದುರಿಸಿದ ನೋವು ಮರುಕಳಿಸುವಂತೆ ಮಾಡಿಬಿಟ್ಟಿದ್ದಾರೆ. 

Advertisement

“”ಇಂದಿರಾ ಗಾಂಧಿಯವರ ಹತ್ಯೆ ಒಂದು ರಾಷ್ಟ್ರೀಯ ದುರಂತ… ತದನಂತರ ನಡೆದ ಘಟನೆಗಳು ನಮ್ಮನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದವು. ಸಿಖ್‌ ಬಂಧುಗಳಿಗೆ ಕ್ಷಮೆ ಕೇಳುವುದಕ್ಕೆ ನನಗೆ ಯಾವ ಸಂಕೋಚವೂ ಇಲ್ಲ, ನಾನು 1984ರ ಘಟನೆಗೆ ಕೇವಲ ಸಿಖ್ಬರಿಗಷ್ಟೇ ಅಲ್ಲ, ಇಡೀ ದೇಶಕ್ಕೆ ಕ್ಷಮೆಯಾಚಿಸುತ್ತೇನೆ…”

11 ಆಗಸ್ಟ್‌ 2005ರಂದು ಸಂಸತ್ತಿನಲ್ಲಿ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಈ ಮಾತು ಹೇಳುತ್ತಲೇ ಆ ದಿನ ಭಾರತೀಯ ಲೋಕತಂತ್ರ ಬಲಿಷ್ಠವಾಗಿಬಿಟ್ಟಿತು. ಯಾವ ಪಕ್ಷದ ಮೇಲೆ ಸಿಖ್‌ ದಂಗೆಗೆ ತುಪ್ಪ ಸುರಿದ ಆರೋಪವಿದೆಯೋ ಆ ಪಾರ್ಟಿಯ ಪ್ರಧಾನಿ ಕ್ಷಮೆ ಕೇಳಿದ್ದರು. ಅಲ್ಲದೇ ಯಾವ ವ್ಯಕ್ತಿ ಖುದ್ದು ಸಿಖ್‌ ಸಮುದಾಯಕ್ಕೆ ಸೇರಿದವರೋ ಅವರೇ ಕ್ಷಮೆ ಕೇಳಿದ್ದರು. ಇದು ಬಹಳ ತಡವಾಗಿಯಾದರೂ ನಿಭಾಯಿಸಲಾದ “ರಾಜಧರ್ಮ’ವಾಗಿತ್ತು.  

ಇಂದಿರಾ ಗಾಂಧಿಯವರ ಹತ್ಯೆ ಭಾರತಕ್ಕೆ ಎಷ್ಟು ದೊಡ್ಡ ನೋವಿನ ವಿಷಯವಾಗಿತ್ತೋ, ತದನಂತರ ಸಿಖVರ ವಿರುದ್ಧ ನಡೆದ ದಂಗೆಗಳು ಅದಕ್ಕಿಂತಲೂ ನೋವಿನ ವಿಷಯವಾಯಿತು. ಈ ದಂಗೆಗಳು ಅಧಿಕಾರದ ಮದದ ಪ್ರತೀಕವಾಗಿದ್ದವು. ರಾಜಧರ್ಮದಿಂದ ವಿಮುಖವಾದದ್ದರ ಪರಿಣಾಮವಾಗಿದ್ದವು. ಅಲ್ಪಸಂಖ್ಯಾತ‌ ಧರ್ಮ ಅಥವಾ ಪಂಗಡದ ಜನರು ಏನಾದರೂ ಅಪರಾಧ ಮಾಡಿಬಿಟ್ಟರೆ, ಅವರ ಇಡೀ ಧರ್ಮವನ್ನು/ ಪಂಗಡವನ್ನು ಕಟಕಟೆಯಲ್ಲಿ ನಿಲ್ಲಿಸಿಬಿಡುವ ಮಾನಸಿಕತೆಯ ಪ್ರತಿಫ‌ಲನವಾಗಿದ್ದವು. ಸಿಖ್‌ ಅಂಗರಕ್ಷಕರು ಇಂದಿರಾ ಗಾಂಧಿಯವರ ಹತ್ಯೆ ಮಾಡಿದ್ದಕ್ಕಾಗಿ ಇಡೀ ಸಮುದಾಯದ ವಿರುದ್ಧವೇ ದ್ವೇಷ ಹೆಚ್ಚಾಯಿತು. 

ಆಗ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್‌. ಆ ಸಮಯದಲ್ಲಿ ಯಾವ ಗಲ್ಲಿಗಳಲ್ಲಿ, ರಸ್ತೆಗಳಲ್ಲಿ ಸಿಖರ  ಹತ್ಯೆ ಆಗಲಾರಂಭಿಸಿತೋ, ಯಾವ ಮನೆಗಳಿಗೆ ಬೆಂಕಿ ಹಚ್ಚಲಾಯಿತೋ, ಯಾವ ಅಂಗಡಿಗಳನ್ನು ಲೂಟಿ ಮಾಡಲಾಯಿತೋ ಅಲ್ಲೆಲ್ಲ ಕಾಂಗ್ರೆಸ್‌ನ ಸರ್ವಾಧಿಕಾರಿಗಳು ಕಣ್ಣುಮುಚ್ಚಿಕೊಂಡುಬಿಟ್ಟರು ಎನ್ನುವ ಆರೋಪವಿದೆ. ದೆಹಲಿಯಿಂದ ಹಿಡಿದು ದೇಶದ ಮೂಲೆಮೂಲೆಯಲ್ಲಿದ್ದ ಪ್ರತಿಯೊಬ್ಬ ಸಿಖ್ಬನೂ ಅಂದು ಇಂದಿರಾ ಹತ್ಯೆಯ ದೋಷಿ ಆಗಿಬಿಟ್ಟ! 

Advertisement

ದೊಡ್ಡ ಮರವೊಂದು ಬಿದ್ದಾಗ ಚಿಕ್ಕ ಗಿಡಗಳಿಗೆ ಹಾನಿಯಾಗುವುದನ್ನು ತಡೆಯುವ ಶಕ್ತಿಯಿದ್ದವರೆಲ್ಲ ಅಂದು ತಮ್ಮ ಮುಖವನ್ನು ಬೇರೆಡೆ ತಿರುಗಿಸಿಬಿಟ್ಟಿದ್ದರು. 1984ರಲ್ಲಿ ಕಾಂಗ್ರೆಸ್‌ನ ಸರ್ವಾಧಿಕಾರಿಗಳು ತಪ್ಪು ಮಾಡಿದರು ಎನ್ನುವ ಆರೋಪಕ್ಕೆ ಮನಮೋಹನ್‌ ಸಿಂಗ್‌ ಅವರು 2005ರಲ್ಲಿ 
ಕ್ಷಮೆ ಕೇಳಿ ದೇಶಕ್ಕೆ ಮತ್ತು ಪ್ರಪಂಚಕ್ಕೆ ಸಕಾರಾತ್ಮಕ ಸಂದೇಶ ಕಳುಹಿಸಿದ್ದರು.  ಆದರೆ 2018ರಲ್ಲಿ ವಿದೇಶಿ ನೆಲದಲ್ಲಿ ರಾಹುಲ್‌ ಗಾಂಧಿಯವರು ಈ ಹಿಂಸೆಯಲ್ಲಿ ಕಾಂಗ್ರೆಸ್‌ಗೆ ಕ್ಲೀನ್‌ಚಿಟ್‌ ಕೊಟ್ಟು ಸಮಯದ ಮುಳ್ಳನ್ನು ಮತ್ತೆ 1984ಕ್ಕೆ ತಿರುಗಿಸಿ ನಿಲ್ಲಿಸಿಬಿಟ್ಟಿದ್ದಾರೆ ಮತ್ತು ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. 

ತಪ್ಪನ್ನು ಒಪ್ಪಿಕೊಂಡು ಮುನ್ನಡೆಯುವಂಥ ಸಕಾರಾತ್ಮಕ ಮಾರ್ಗ ಇನ್ನೊಂದಿರಲಾರದು.  2005ರಲ್ಲಿ ಮನಮೋಹನ್‌ ಸಿಂಗ್‌ ಅವರ ಮೂಲಕ ಕಾಂಗ್ರೆಸ್‌ ಪಕ್ಷ ಅಂದು ಈ ರೀತಿಯ ಸಕಾರಾತ್ಮಕ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ ದಂಗೆಗಳಲ್ಲಿ ಕಾಂಗ್ರೆಸ್‌ನ ಪಾತ್ರವನ್ನು ಅಲ್ಲಗಳೆದ ರಾಹುಲ್‌ ಗಾಂಧಿಯವರು ಒಂದಿಡೀ ಸಮುದಾಯವು ಎದುರಿಸಿದ ನೋವು ಈಗ ಮತ್ತೆ ಮರುಕಳಿಸುವಂತೆ ಮಾಡಿಬಿಟ್ಟಿದ್ದಾರೆ. 

ರಾಹುಲ್‌ ಗಾಂಧಿಯವರು ಸಿಖ್ಬರ ವಿರುದ್ಧದ ದಂಗೆಗಳಲ್ಲಿ ತಮ್ಮ ಪಕ್ಷದ ಪಾತ್ರವನ್ನು ನಿರಾಕರಿಸುತ್ತಿದ್ದಾರೇನೋ ಸರಿ. ಆದರೆ ನಿಜಕ್ಕೂ ಯಾವ ಒಂದು ಪಕ್ಷ ದಂಗೆಗಳಲ್ಲಿ ನೇರವಾಗಿ ಭಾಗವಹಿಸುತ್ತದೆ ಹೇಳಿ? ಯಾವುದೇ ಪಕ್ಷವೂ ಪ್ರಸ್‌ ಕಾನ್ಫರೆನ್ಸ್‌ ಕರೆದು ದಂಗೆ ಮಾಡಿಸುವ ಬಗ್ಗೆ ಘೋಷಿಸುವುದಿಲ್ಲ ಅಥವಾ ದಂಗೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಕಾರ್ಯಕಾರಿಣಿ ಸಭೆ ಕರೆಯುವುದಿಲ್ಲ. ಒಂದು ಘಟನೆ ನಡೆದಾಗ ಅಧಿಕಾರದಲ್ಲಿರುವ ಪಕ್ಷದ ನಿಲುವೇನು ಮತ್ತು ಅದರ ಆ ಸಮಯದ ನಡವಳಿಕೆ ಹೇಗಿರುತ್ತದೆ ಎನ್ನುವುದರ ಮೇಲೆ ಮುಂದಿನ ವಾತಾವರಣದ ರೂಪುರೇಷೆ ಸಿದ್ಧವಾಗಲು ಆರಂಭಿಸುತ್ತದೆ.  ಇಡೀ ದೇಶದಲ್ಲೇ ಅತ್ಯಂತ ಜನಪ್ರಿಯರಾಗಿದ್ದ, ತಮ್ಮ ಪಕ್ಷದ ಬೆನ್ನೆಲುಬಾಗಿದ್ದ ಪ್ರಧಾನಿಯ(ಇಂದಿರಾ) ಹತ್ಯೆಯಾಗುತ್ತದೆ. ಸಹಜವಾಗಿಯೇ ಇಂಥ ಘಟನೆಯ ನಂತರ ದೇಶಕ್ಕೆ ಮತ್ತು ಪಕ್ಷದವರಿಗೆ ಭಾವನಾತ್ಮಕವಾಗಿ ತೀವ್ರ ಯಾತನೆ ಎದುರಾಗುತ್ತದೆ ಮತ್ತು ಅತೀವ ದುಃಖವಾಗುತ್ತದೆ. ಆದರೆ ಅಂಥ ಸಮಯದಲ್ಲೇ ಆಡಳಿತದಲ್ಲಿರುವ ಪಕ್ಷದ ಜವಾಬ್ದಾರಿ ಹೆಚ್ಚಾಗುವುದು. ಏಕೆಂದರೆ ಹತ್ಯೆಯಾದ ನಾಯಕಿ ಕೇವಲ ಪಕ್ಷಕ್ಕಷ್ಟೇ ಅಲ್ಲ, ಇಡೀ ದೇಶದ ನಾಯಕಿಯಾಗಿದ್ದಳು. 

ಜನತೆಯಲ್ಲೂ ಭಾವನೆಗಳ ವೇಗೋತ್ಕರ್ಷ ಹೆಚ್ಚುವುದು ಸ್ವಾಭಾವಿಕವೇ. ಒಂದು ಪಕ್ಷದ ನಿಜವಾದ ಕೆಲಸ ಆರಂಭವಾಗುವುದು ಇಲ್ಲಿಂದ. ಜನರಲ್ಲಿ ಭುಗಿಲೆದ್ದ ಈ ನೋವು ಮತ್ತು ಭಾವನೆಗೆ ಅದು ಯಾವ ದಿಕ್ಕು ತೋರಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಕಾಂಗ್ರೆಸ್‌ ನಾಯಕರು ಅಂದು ಈ “ದೇಶದ ನೋವನ್ನು’  “ದೇಶದ ಸಿಟ್ಟಾಗಿ’ ಬದಲಿಸಿಬಿಟ್ಟರು ಎನ್ನುವ ಆರೋಪವಿದೆ. ಇದರಿಂದಾಗಿಯೇ ನಡುರಸ್ತೆಗಳಲ್ಲೇ ದ್ವೇಷದ ರಕ್ತ ಹರಿದುಬಿಟ್ಟಿತು. 

ಇಂದು ರಾಹುಲ್‌ ಗಾಂಧಿಯವರು ವಿಶ್ವ ವೇದಿಕೆಗಳಲ್ಲಿ ತಮ್ಮ ಲೋಕತಂತ್ರಪರ ವರ್ಚಸ್ಸನ್ನು ಪ್ರಸ್ತುತಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವರು ಒಂದು ಪ್ರತಿಪಕ್ಷದ ಬಲಿಷ್ಠ ಧ್ವನಿಯಾಗಿಯೂ ಹೊರಹೊಮ್ಮುತ್ತಿದ್ದಾರೆ. ಕೆಲವು ಸಮಸ್ಯೆಗಳು, ಸವಾಲುಗಳ ಬಗ್ಗೆಯೂ ಅವರ ಆಲೋಚನೆಗಳು ಮತ್ತು ನಿಲುವುಗಳು ಸ್ಪಷ್ಟವಾಗುತ್ತಿವೆ. ಆದರೆ ಜಾಗತಿಕ ವೇದಿಕೆಗಳ ಮೇಲೆ “1984ರ’ ದಂಗೆಯಂಥ ಗಂಭೀರವಾದ ವಿಷಯದ ಬಗ್ಗೆ ಮಾತನಾಡುವಾಗ, ಆ ವಿಚಾರದಲ್ಲಿ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸುವಾಗ ಅವರು ಮತ್ತು ಅವರ ತಂಡ ಉತ್ತಮ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ಏಕೆಂದರೆ ಇಂಥ ವಿಚಾರವನ್ನು ಇಡೀ ದೇಶ ಗಂಭೀರವಾಗಿ ಗಮನಿಸುತ್ತಿರುತ್ತದೆ. ಸ್ವಲ್ಪ ಏರುಪೇರಾದರೂ ಆ ವಿಷಯ ಮುಖ್ಯವಾಹಿನಿ ಚರ್ಚೆಯಾಗಿ ಬದಲಾಗಿಬಿಡುತ್ತದೆ. 

ಇಂದು ನೀವು ಪ್ರತಿಪಕ್ಷವಾಗಿ ಆಡಳಿತ ಪಕ್ಷವನ್ನು ಪ್ರಶ್ನಿಸುತ್ತೀರಿ ಎಂದರೆ, ನೀವು ಆಡಳಿತದಲ್ಲಿದ್ದಾಗಿನ ಸಮಯದ ಬಗ್ಗೆಯೂ ಪ್ರಶ್ನೆಗಳೇಳುತ್ತವೆ. ಹಾಗಿದ್ದರೆ ಇದು ರಾಹುಲ್‌ ಗಾಂಧಿಯವರ ಪೂರ್ವನಿಯೋಜಿತ ಉತ್ತರವಾಗಿತ್ತೇ? ಅವರು ಮೊದಲೇ ಹೀಗೆ ಹೇಳಿಬಿಡಬೇಕೆಂದು ನಿರ್ಧರಿಸಿಬಿಟ್ಟಿದ್ದರಾ?
ಮನಮೋಹನ್‌ ಸಿಂಗ್‌ ಅವರು ಸಂಸತ್ತಿನಲ್ಲಿ ಮಾನವೀಯ ಹೇಳಿಕೆ ನೀಡಿ, ಜನರ ನೋವಿನಲ್ಲಿ ಭಾಗಿಯಾದರು. ಆದರೆ ರಾಹುಲ್‌ ಗಾಂಧಿಯವರು ನೀಡಿದ ಹೇಳಿಕೆಯು ಆ ದಂಗೆಗಳನ್ನು ಮತ್ತು ಹಿಂಸೆಯನ್ನು “ಪ್ರಾಕೃತಿಕ’ವೆಂದು ಘೋಷಿಸಿದಂತೆ ಇದೆ. ರಾಹುಲ್‌ರ ಮಾತಿನಿಂದ ತಲೆಮಾರುಗಳು ಎದುರಿಸಿದ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಆ ಸಮಯದಲ್ಲಿ ರಾಹುಲ್‌ರ ತಂದೆ ರಾಜೀವ್‌ ಗಾಂಧಿ “ದೊಡ್ಡ ಮರಗಳು ಉರುಳಿದಾಗ ನೆಲ ಅಲುಗಾಡುತ್ತದೆ’ ಎಂದು ಹೇಳಿದ್ದೇ, ಅವರ ಮಾತಿನ ಬಗ್ಗೆ ವ್ಯಾಪಕವಾಗಿ ಚರ್ಚೆಗಳಾದವು. ಈಗಲೂ ಕೂಡ 1984ರ ಬಗ್ಗೆ ಮಾತು ಬಂದಾಗಲೆಲ್ಲ ರಾಜೀವ್‌ ಗಾಂಧಿಯವರ ಹೇಳಿಕೆಯೂ ಚರ್ಚೆ ಆಗೇ ಆಗುತ್ತದೆ. ಈ ಕಾರಣಕ್ಕಾಗಿಯೇ ರಾಹುಲ್‌ ಗಾಂಧಿಯವರು ಇಂಥ ಸಂವೇದನಾಶೀಲ ವಿಚಾರದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕಾಗಿತ್ತು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಹೀಗಿರುವಾಗ ತಮ್ಮ ಕಡೆಯಿಂದ ಅವರು ತೀರ್ಪು ನೀಡಬಾರದಿತ್ತು. 

ಇದಷ್ಟೇ ಅಲ್ಲದೇ ವಿದೇಶಿ ನೆಲದಲ್ಲಿ ಮಾತನಾಡುತ್ತಾ ಕಾಂಗ್ರೆಸ್‌ ಅಧ್ಯಕ್ಷರು ಆತಂಕವಾದವನ್ನು ನಿರುದ್ಯೋಗದೊಂದಿಗೆ ಬೆಸೆಯುವುದಕ್ಕೆ ಮುಂದಾಗುತ್ತಾರೆ. ನಿರುದ್ಯೋಗದಿಂದಾಗಿ ಜನರು ಉಗ್ರರಾಗುತ್ತಿದ್ದಾರೆ ಎಂಬ ಧಾಟಿಯಲ್ಲಿ  ಮಾತನಾಡುವಾಗ ಬಹುಶಃ ಅವರು ಅಲ್‌-ಜವಾಹಿರಿ, ಬುರ್ಹಾನ್‌ ವಾನಿ ಮತ್ತು ಇನ್ನೂ ಅನೇಕ “ಎಜುಕೇಟೆಡ್‌’ ಉಗ್ರರ ಹೆಸರುಗಳನ್ನು (ಇಂಜಿನಿಯರ್‌ಗಳಿಂದ ಹಿಡಿದು ಮ್ಯಾನೇಜ್‌ಮೆಂಟ್‌ ಮಾಡಿದವರು) ಮರೆತುಬಿಟ್ಟರು ಎನಿಸುತ್ತದೆ. 

ಈ ಉಗ್ರರೆಲ್ಲ ತಮ್ಮ ಉತ್ತಮ ನೌಕರಿಗಳನ್ನು ಬಿಟ್ಟು ಉಗ್ರವಾದದ ಹಾದಿ ತುಳಿದವರು. ಇವರೆಲ್ಲರ ತಲೆಗಳಲ್ಲಿ ಧಾರ್ಮಿಕ ಕಟ್ಟರ್‌ಪಂಥದ ವಿಷ ತುಂಬಿಕೊಂಡಿತ್ತು. ಇಂಥ ಧಾರ್ಮಿಕ ಮೂಲಭೂತವಾದದ ಕಾರಣದಿಂದ ವ್ಯಕ್ತಿಯೊಬ್ಬ ಉಗ್ರನಾಗಿ ಡಾಕ್ಟರ್‌ಗಳ, ವಕೀಲರ, ಪರ್ತಕರ್ತರ, ಲೇಖಕರ ಅಥವಾ ಬ್ಲಾಗರ್‌ಗಳ ತಲೆ ಕತ್ತರಿಸುತ್ತಾನೆ, ಅದನ್ನು ವಿಡಿಯೋ ಮಾಡಿ ಹರಡುತ್ತಾನೆ. 

 ರಾಹುಲ್‌ ಒಬ್ಬ ಜವಾಬ್ದಾರಿಯುತ ಪ್ರತಿಪಕ್ಷ ನಾಯಕನಾಗಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೂ 1984ರ ವಿಷಯದಲ್ಲಾಗಲಿ ಅಥವಾ ನಿರುದ್ಯೋಗದ ವಿಷಯದಲ್ಲಾಗಲಿ ರಾಹುಲ್‌ ಜನರ ನೋವನ್ನು ಅರ್ಥಮಾಡಿಕೊಳ್ಳಲು ಎಡವಿಬಿಡುತ್ತಿದ್ದಾರೆ. ಸಿಖVರ ವಿರುದ್ಧದ ದಂಗೆಯ ಬಗ್ಗೆ ಪ್ರಶ್ನೆ ಎದುರಾದಾಗ ಅವರು “ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಸಂಸತ್ತಿನಲ್ಲಿ ಕಾಂಗ್ರೆಸ್‌ ಪರವಾಗಿ ಕ್ಷಮೆಯಾಚಿಸಿದ್ದಾರೆ’ ಎನ್ನುವುದನ್ನು ನೆನಪಿಸಬೇಕಿತ್ತು. ಇಲ್ಲವೇ, “ಆರೋಪಿ ನಾಯಕರು ಈಗ ನ್ಯಾಯಿಕ ಪ್ರಕ್ರಿಯೆಯಲ್ಲಿದ್ದು, ನ್ಯಾಯಾಂಗದ ಅಂತಿಮ ತೀರ್ಮಾನ ಬರುವವರೆಗೂ ಈ ಬಗ್ಗೆ ಮಾತನಾಡುವುದಿಲ್ಲ’ ಎನ್ನಬೇಕಿತ್ತು. 

ಬಲಿಷ್ಠ ವಿಪಕ್ಷವಿಲ್ಲದೇ ಲೋಕತಂತ್ರ ಬಲಿಷ್ಠವಾಗಲಾರದು. ನಮ್ಮ ಲೋಕತಂತ್ರ ಎಷ್ಟು ಸ್ವಾತಂತ್ರ್ಯ ಕೊಟ್ಟಿದೆಯೆಂದರೆ ಇಂದು ರಾಹುಲ್‌ ಲೋಕದ ಎದುರು ಇದನ್ನೆಲ್ಲ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷರು ಈಗ ತುಂಬಾ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಏಕೆಂದರೆ ಈಗವರು ದೇಶವೆದುರಿಸುತ್ತಿರುವ ಕೆಲವು ಸಮಸ್ಯೆಗಳ ಕುರಿತ ಚರ್ಚೆಗಳಲ್ಲಿ ಎರಡು ಹೆಜ್ಜೆ ಮುಂದೆ ಹೋಗಿದ್ದಾರೆ, ಎಚ್ಚರಿಕೆಯಿಲ್ಲದಿದ್ದರೆ ಒಂದು ಹೆಜ್ಜೆ ಹಿಂದೆ ಬಂದುಬಿಡುವ ಸಾಧ್ಯತೆ ಇದೆ. ಹಾಗಾಗಬಾರದಲ್ಲವೇ?

ಮೂಲ: ಜನಸತ್ತಾ ಹಿಂದಿ

ಮುಖೇಶ್‌ ಭಾರದ್ವಾಜ್‌

Advertisement

Udayavani is now on Telegram. Click here to join our channel and stay updated with the latest news.

Next