Advertisement

ಅರಣ್ಯ ನಾಶದಿಂದ ಬರಗಾಲ

12:06 PM Jun 13, 2019 | Team Udayavani |

ತರೀಕೆರೆ: ನಿರಂತರವಾಗಿ ಅರಣ್ಯ ನಾಶ ಮಾಡುತ್ತಿರುವುದರಿಂದ ಮಲೆನಾಡಿನಲ್ಲಿ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಕಾಡು ನಾಶವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳು ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತಿವೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಶಾಸಕ ಡಿ.ಎಸ್‌.ಸುರೇಶ್‌ ಹೇಳಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ, ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ವರ್ಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿ ನೆಪದಲ್ಲಿ ಕಾಡು ನಾಶ: ಪರಿಸರದಲ್ಲಿ ಉತ್ತಮ ಗಾಳಿ ಸಿಗುತ್ತಿಲ್ಲ, ಧೂಳು ಮಿಶ್ರಿತ ಗಾಳಿಯನ್ನು ನಾವು ಸೇವಿಸುವಂತಾಗಿದೆ. ಇದಕ್ಕೆ ಪ್ರಕೃತಿಯ ಮೇಲೆ ಮಾನವ ನಡೆಸಿದ ದಾಳಿಯೇ ಕಾರಣ. ಅಭಿವೃದ್ಧಿಯ ನೆಪದಲ್ಲಿ ಕಾಡು ನಾಶವಾಗಿದೆ. ಆದರೆ, ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ನಾವು ಮಾಡಿಕೊಳ್ಳದ ಕಾರಣ ವಾತಾವರಣ ಕಲುಷಿತವಾಗಿದೆ ಎಂದು ಹೇಳಿದರು.

ಸ್ವಚ್ಛತಾ ಕಾರ್ಯಕ್ರಮ: ವಿಶ್ವ ಪರಿಸರ ದಿನಾಚರಣೆ ಜೊತೆಗೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ, ಪ್ಲಾಸ್ಟಿಕ್‌ ಮುಕ್ತ ಗ್ರಾಮಗಳನ್ನಾಗಿಸುವುದು ಮತ್ತು ಅಂತರ್ಜಲ ವೃದ್ಧಿಸಲು ಜಲಾಮೃತ ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪರಿಸರ ಉಳಿಸುವ ಕಾರ್ಯಕ್ರಮಗಳನ್ನು ಜನಸಾಮಾನ್ಯರ ಸಹಭಾಗಿತ್ವದಲ್ಲಿ ನಡೆಸಬೇಕು ಎಂದು ಸಲಹೆ ನೀಡಿದರು.

ಕೆರೆಗಳ ಅಭಿವೃದ್ಧಿ ಮಾಡಿ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಆರ್‌.ಆನಂದಪ್ಪ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಕಾಡು ನಾಶ ಮಾಡಿದ್ದರಿಂದ ಸತತವಾಗಿ ಬರಗಾಲ ಅನುಭವಿಸುವಂತಾಗಿದೆ. ವಾಡಿಕೆ ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ ಅಂತರ್ಜಲ ಕುಸಿದಿದೆ. ಅಂತರ್ಜಲ ಪುನಃಶ್ಚೇತನಗೊಳಿಸಲು ಚೆಕ್‌ ಡ್ಯಾಂಗಳ ನಿರ್ಮಾಣ, ಕೆರೆಗಳ ಅಭಿವೃದ್ಧಿ ಮಾಡಬೇಕಾಗಿದೆ ಎಂದರು.

Advertisement

ಅರಣ್ಯ ನಾಶವಾದ ಕಾರಣ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಪರಿಸರ ನಾಶಕ್ಕೆ ನಮ್ಮ ದುರಾಸೆಗಳೇ ಕಾರಣ. ಪ್ರತಿಯೊಬ್ಬರೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿಕೊಂಡು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರಕೃತಿ ಮುನಿಸಿ ಕೊಂಡರೆ ಏನಾದರೂ ಆಗಬಹುದು. ಹಾಗಾಗಿ, ಈ ಬಗ್ಗೆ ಈಗಲೇ ಎಚ್ಚೆತ್ತುಕೊಂಡರೆ ಮುಂಬರುವ ದಿನಗಳಲ್ಲಿ ನಡೆಯುವ ಅನಾಹುತಗಳನ್ನು ತಪ್ಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಪ್ಲಾಸ್ಟಿಕ್‌ನಿಂದ ಅವಾಂತರ ಸೃಷ್ಠಿ: ಪಟ್ಟಣದಲ್ಲಿ ಪ್ಲಾಸ್ಟಿಕ್‌ ಅವಾಂತರ ಸೃಷ್ಠಿ ಮಾಡಿದೆ. ಹಸಿಮತ್ತು ಒಣ ಕಸ ಬೇರ್ಪಡಿಸದೇ ಪ್ಲಾಸ್ಟಿಕ್‌ಚೀಲದಲ್ಲಿ ತುಂಬಿ ಕಸದ ರಾಶಿಗೆ ಹಾಕುವುದರಿಂದ ಮಣ್ಣಿನಲ್ಲಿ ಪ್ಲಾಸ್ಟಿಕ್‌ ಸೇರಿ ನೀರು ಭೂಮಿಯ ಒಡಲು ಸೇರುತ್ತಿಲ್ಲ. ಕೇವಲ ಸಸಿ ನೆಡುವುದರಿಂದ ಪರಿಸರ ಸಂರಕ್ಷಿಸಲು ಸಾಧ್ಯವಿಲ್ಲ. ಗ್ರಾಮ, ಪಟ್ಟಣಗಳನ್ನು ಮೊದಲು ಪ್ಲಾಸ್ಟಿಕ್‌ ಮುಕ್ತವಾಗಿಸಬೇಕೆಂದು ಹೇಳಿದರು.

ಸಭೆಯಲ್ಲಿ ಜಿಪಂ ಸದಸ್ಯೆ ಚೈತಶ್ರೀ, ರಾಧಮ್ಮ, ತಾಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಮಂಜುಳಾ ಮಾತನಾಡಿದರು. ತಾಪಂ ಲೆಕ್ಕ ಅಧಿಧೀಕ್ಷಕ ಬೈರೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ಜಿಪಂ ಸದಸ್ಯರ ಅನುದಾನದಲ್ಲಿ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಪರಿಕರಗಳನ್ನು ವಿತರಣೆ ಮಾಡಲಾಯಿತು. ತಾಪಂ ಸದಸ್ಯರಾದ ಕರಿಯಣ್ಣ, ಹಾಲಾನಾಯ್ಕ, ಕೃಷ್ಣಪ್ಪ, ಹೇಮಾವತಿ, ತಾಪಂ ಇಒ ವಿಶಾಲಾಕ್ಷಮ್ಮ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next