ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದ ಸರ್ವೆ ನಂಬರ್ 4ರಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದ ಅರಣ್ಯ ಭೂಮಿಯನ್ನು ಕಾರ್ಯಾಚರಣೆ ಮೂಲಕ ವಶಪಡಿಸಿಕೊಂಡ ಅರಣ್ಯ ಅಧಿಕಾರಿಗಳು, ಮೂವರು ರೈತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಇದೇ ವೇಳೆ ಅರಣ್ಯ ಭೂಮಿಯಲ್ಲಿ ರೈತರು ಅನಧಿಕೃತವಾಗಿ ಹಾಕಿಕೊಂಡಿದ್ದ ಮಂಚಿಕೆ(ಚಿಕ್ಕ ಚಿಕ್ಕ ಗುಡಿಸಲು)ಗಳನ್ನು ಕಿತ್ತು ಹಾಕಿ, ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ.
ಎಂ.ಸಿ.ಹಳ್ಳಿ ಸ.ನಂ 4ರಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ಜಮೀನಿನಲ್ಲಿ ಬಿತ್ತನೆ ಕಾರ್ಯ ಕೈಗೊಂಡಿದ್ದ ರೈತರನ್ನು ತಡೆಯುವ ಪ್ರಯತ್ನ ಮಾಡಿದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಪ್ರತಿರೋಧ ತೋರಿದ ರೈತರ ಮೇಲೆ ದೌರ್ಜನ್ಯ ನಡೆಸಿದರು ಎಂದು ರೈತರು ದೂರಿದ್ದಾರೆ.
ಘಟನಾ ಸಮಯದಲ್ಲಿ ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಜಮೀನಿನಲ್ಲಿ ರೈತರು ಕಾವಲು ಕಾಯಲು ಹಾಕಿಕೊಂಡಿದ್ದ ಮಂಚಿಕೆ(ಚಿಕ್ಕ ಚಿಕ್ಕ ಗುಡಿಸಲು)ಗಳನ್ನು ಧ್ವಂಸಗೊಳಿಸಿ, ಕೆಂಪಮ್ಮ ಎಂಬ 62 ವರ್ಷದ ವೃದ್ಧೆಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದರು ಎನ್ನಲಾಗಿದೆ.
ಅಧಿಕಾರಿಗಳ ಜತೆ ಚರ್ಚೆಗಿಳಿದ ಹನುಮಂತಪ್ಪ, ಕೃಷ್ಣಮೂರ್ತಿ ಹಾಗೂ ಅನ್ವರ್ ಎಂಬ ರೈತರನ್ನು ವಶಕ್ಕೆ ಪಡೆದು, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಕರೆ ತಂದರು. ನಂತರ ರೈತರ ಮನವಿ ಮೇರೆಗೆ ಅವರಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ರೈತರ ನಡುವೆ ತಳ್ಳಾಟ, ನೂಕಾಟದ ಸಮಯದಲ್ಲಿ ಗಾಯಗೊಂಡಿದ್ದ ವೃದ್ಧೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರಣ್ಯ ಇಲಾಖೆ ಜಾಗವೆಂದು ದೃಢಪಟ್ಟಿರುವುದರಿಂದ ಅಲ್ಲಿ ಸಾಗುವಳಿ ಮಾಡಲು ರೈತರಿಗೆ ಅವಕಾಶ ನೀಡಲ್ಲ. ಹೈಕೋರ್ಟ್ ನಿರ್ವಣೇಗೌಡ ಪ್ರಕರಣದಲ್ಲಿ ತೀರ್ಪು ನೀಡಿರುವ ಪ್ರಕಾರ ವಿವಾದಿತ ಜಾಗ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಡಲಿದೆ. ಒಮ್ಮೆ ಮೀಸಲು ಅರಣ್ಯವೆಂದು ಘೋಷಿಸಿದ ಮೇಲೆ ಕಂದಾಯ ಇಲಾಖೆಗೆ ಯಾವುದೇ ಅಧಿಕಾರವಿಲ್ಲ. ಸ.ನಂ. 4ರಲ್ಲಿ 438ಎಕರೆ ಭೂಮಿಯಿದ್ದು, ಅದರಲ್ಲಿ 238ಎಕರೆ ಭೂಮಿಯನ್ನು ಕಂದಾಯ ಇಲಾಖೆ ಮಂಜೂರು ಮಾಡಿದೆ. ಅನಧಿಕೃತ ಮಂಜೂರಾತಿ ವಜಾಗೊಳಿಸಲು ಉಪ ವಿಭಾಗಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.