Advertisement

ಮಳೆ; ತರೀಕೆರೆ ತಾಲೂಕಲ್ಲಿ ಭಾರೀ ಹಾನಿ

05:10 PM May 06, 2020 | Naveen |

ತರೀಕೆರೆ: ಸೋಮವಾರ ಸಂಜೆ 5 ಗಂಟೆ ಸಮಯದಲ್ಲಿ ಸುರಿದ ಮಳೆ, ಗಾಳಿಗೆ ಕಸಬಾ, ಲಕ್ಕವಳ್ಳಿ ಮತ್ತು ತರೀಕೆರೆ ಪಟ್ಟಣದಲ್ಲಿ ಭಾರೀ ಹಾನಿ ಸಂಭವಿಸಿದೆ. 10 ನಿಮಿಷಗಳ ಕಾಲ ಬೀಸಿದ ಬಿರುಗಾಳಿಗೆ ರೈತರು ಕಂಗಾಲಾಗಿದ್ದಾರೆ. ಸಿದ್ದರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 5000ಕ್ಕೂ ಹೆಚ್ಚು ಅಡಿ‌ಕೆ ಮರಗಳು ಧರಶಾಹಿಯಾಗಿವೆ.

Advertisement

ನೂರಾರು ತೆಂಗಿನ ಮರಗಳು ಬುಡ ಸಮೇತ ತೋಟದಲ್ಲಿ ನೆಲ ಕಚ್ಚಿವೆ. ಲಕ್ಕವಳ್ಳಿ ಮತ್ತು ಕಸಬಾದಲ್ಲಿ ಬೆಳೆದು ನಿಂತಿದ್ದ ಎಕರೆಗಟ್ಟಲೆ ಬಾಳೆಗಿಡ ನೆಲಕ್ಕೆ ಬಾಗಿದೆ. ನೂರಾರು ಕೋಟಿ ಬೆಲೆ ಬಾಳುವ ಅಡಕೆ, ತೆಂಗು, ಬಾಳೆ, ಮಾವು ಮತ್ತು ಸಾಗವಾನಿ ನಲಕ್ಕೆ ಉರುಳಿವೆ, ಗುಡುಗು, ಮಿಂಚು, ಸಿಡಿಲು, ಆಲಿಕಲ್ಲು ಸಹಿತ ಬೀಸಿದ ಬಿರುಗಾಳಿ ರೈತರು ತತ್ತರಿಸಿ ಹೋಗಿದ್ದಾರೆ.

ಗ್ರಾಪಂ ಸದಸ್ಯ ವಾಸು ಅವರ ತೋಟದಲ್ಲಿ 1200 ಕ್ಕೂ ಹೆಚ್ಚು ಮರಗಳು, ಚೆನ್ನಾಪುರ ಚಂದ್ರಶೇಖರ್‌ ಅವರ ತೋಟದಲ್ಲಿ 500ಕ್ಕೂ ಹೆಚ್ಚು, ಅಶೋಕ ಅವರ ತೋಟದಲ್ಲಿ 700ಕ್ಕೂ ಹೆಚ್ಚು, ಬಿ.ಎಸ್‌. ನಂಜುಂಡಪ್ಪ ಅವರ ತೋಟದಲ್ಲಿ ನೂರಾರು, ಬಿ.ರಾಜಪ್ಪ ಅವರ ತೋಟದಲ್ಲಿ 150ಕ್ಕೂ ಹೆಚ್ಚು ಫಸಲು ನೀಡುತ್ತಿದ್ದ ಅಡಕೆ ಮರಗಳು ಚಿಂದಿಯಾಗಿ ಧರೆಶಾಹಿಯಾಗಿವೆ.

ಜೀವಮಾನದಲ್ಲಿಯೇ ಇಂತಹ ಗಾಳಿ ಮಳೆ ನೋಡಿರಲಿಲ್ಲ ಎನ್ನುತ್ತಾರೆ ರೈತರು. ಮೊದಲ ಬಾರಿಗೆ ಈ ಭಾಗದಲ್ಲಿ ಇಂತಹ ಅನಾಹುತ ಸೃಷ್ಟಿಯಾಗಿದೆ. ಸಿದ್ದರಹಳ್ಳಿ, ದುಗ್ಲಾಪುರ, ಸ್ಟೇಷನ್‌ ದುಗ್ಲಾಪುರ, ಎಲುಗೆರೆ ಇನ್ನಿತರ ಗ್ರಾಮಗಳಲ್ಲಿ ಮೇಲ್ಛಾವಣಿ ಹೊದಿಸಿದ್ದ ಹಂಚು, ತಗಡಗಳು ಹಾರಿ ಹೋಗಿವೆ. ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆ ಮೇಲಿನ ಚಾವಣಿ ಹಂಚು ಹಾರಿ ಅಕ್ಕ ಪಕ್ಕದ ಮನೆ ಮೇಲೆ ಬಿದ್ದು ಇನ್ನಷ್ಟು ಅನಾಹುತಕ್ಕೆ ಕಾರಣವಾಗಿದೆ. ಗಾಳಿಯ ವೇಗಕ್ಕೆ ತೆಂಗಿನ ಗರಿಗಳು ನೂರಾರು ಅಡಿ ಹಾರಿ ಹೋಗಿವೆ.

ತರೀಕೆರೆ ಪಟ್ಟಣದಲ್ಲಿ ಹಲವಾರು ಕಡೆ ಮರಗಳು ನೆಲಕಚ್ಚಿದ್ದು, ಬಯಲು ರಂಗಮಂದಿರಲ್ಲಿ ಮರವೊಂದು ಬಿದ್ದು ಸ್ಕಾರ್ಪಿಯೋ ವಾಹನ ತೀವ್ರ ಜಖಂಗೊಂಡಿದೆ. ಪೊಲೀಸ್‌ ಕ್ವಾರ್ಟಸ್‌ ಮುಂಭಾಗದಲ್ಲಿ ನಿಲ್ಲಿಸಿದ್ದ ಮಾರುತಿ ಓಮ್ನಿ ಮೇಲೆ ಮರದ ಕೊಂಬೆ ಬಿದ್ದು ಭಾಗಶಃ ಜಖಂಗೊಂಡಿದೆ. ಲಕ್ಕವಳ್ಳಿ ರಸ್ತೆಯಲ್ಲಿ ಅಲ್ಲಲ್ಲಿ ಸಾಲುಮರಗಳ ಕೊಂಬೆಗಳು ಮುರಿದು ಬಿದ್ದಿವೆ ಸ್ಥಳಕ್ಕೆ ಶಾಸಕ ಡಿ.ಎಸ್‌.ಸುರೇಶ್‌ ಭೇಟಿ ನೀಡಿ ತೋಟದಲ್ಲಿ ಉಂಟಾಗಿರುವ ಅನಾಹುತಗಳನ್ನು ಪರಿಶೀಲನೆ ನಡೆಸಿದರು.

Advertisement

ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಂದಾಯ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಜಂಟೀ ಸರ್ವೇ ನಡೆಸಿ ರೈತರಿಗೆ ಉಂಟಾಗಿರುವ ನಷ್ಟದ ಪ್ರಮಾಣವನ್ನು ಗುರುತಿಸಿ ವರದಿ ತಯಾರಿಸಬೇಕು. ವರದಿ ಬಂದ ನಂತರ ಸರಕಾರದೊಡನೆ ಚರ್ಚೆ ನಡೆಸಿ ಅವರಿಗೆ ಪರಿಹಾರ ನೀಡಲಾಗುವುದು. ರೈತರು ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದರು. ಶಾಸಕರ ಜೊತೆಯಲ್ಲಿ ಉಪ ವಿಭಾಗಾಧಿಕಾರಿ ರೇಣುಕಾಪ್ರಸಾದ್‌, ತಹಶೀಲ್ದಾರ್‌ ಸಿ.ಜಿ.ಗೀತಾ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಯತಿರಾಜ್‌, ಸೋಮಶೇಖರ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next