Advertisement

ಕುಸಿಯುವ ಭೀತಿಯಲ್ಲಿ ತಾರೆಮಾರ್‌ ಕಿರುಸೇತುವೆ 

09:59 AM Jul 12, 2018 | Team Udayavani |

ಎಡಪದವು: ಮೂಲರಪಟ್ಣ ಸೇತುವೆ ಕುಸಿತಗೊಂಡ ಪ್ರದೇಶದ ಸ್ವಲ್ಪ ದೂರದ ತಾರೆಮಾರ್‌ ಎಂಬಲ್ಲಿ ನಿರ್ಮಿಸಿರುವ ಕಿರುಸೇತುವೆಯ ಇಕ್ಕೆಲಗಳಲ್ಲಿ ಕಲ್ಲುಗಳು ಬಿದ್ದಿದ್ದು ಇದು ಕೂಡ ಕುಸಿಯುವ ಭೀತಿ ವ್ಯಕ್ತವಾಗಿದೆ. ಮುತ್ತೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ತಾರೆಮಾರ್‌ನಿಂದ ಕುಕ್ಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇಲ್ಲಿ ಕಿರುಸೇತುವೆ ನಿರ್ಮಿಸಲಾಗಿದೆ.

Advertisement

ಈ ಕಿರುಸೇತುವೆಯ ಅಡಿಯಲ್ಲಿ ಕಾಡಿನ ಬೃಹತ್‌ ಪ್ರಮಾಣದ ನೀರು ವೇಗವಾಗಿ ಹರಿಯುತ್ತಿದ್ದು ಇದನ್ನು ಅಬ್ಬಿ ಎಂದು ಕರೆಯಲಾಗುತ್ತಿದೆ. ಅಲ್ಲದೆ ಇದು ಅಗಲ ಕಿರಿದಾದ ಸೇತುವೆಯಾಗಿದೆ. ಬಸ್‌ ಸೇರಿ ಹಲವಾರು ಘನ ವಾಹನಗಳು ಇದರಲ್ಲಿ ನಿತ್ಯ ಸಂಚರಿಸುತ್ತಿವೆ.

ತುರ್ತು ಗಮನ ಅಗತ್ಯ
ಈ ಸೇತುವೆಯ ಮುಖಾಂತರ ಗಂಜಿಮಠದಿಂದ ಕುಪ್ಪೆಪದವು, ಸೊರ್ನಾಡ್‌, ಮುತ್ತೂರು, ನೋಣಲ್‌, ಮೂಲರಪಟ್ಣ ಹೀಗೆ ಹಲವು ಪ್ರದೇಶಗಳು ಸೇರಿ ಬಂಟ್ವಾಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ಮೊದಲೇ ಮೂಲರಪಟ್ಣ ಸೇತುವೆ ಕುಸಿದಿದ್ದು, ಒಂದು ವೇಳೆ ಈ ಸೇತುವೆ ಕುಸಿದರೆ ಇಲ್ಲಿನ ನಾಗರಿಕರು ಸಾಕಷ್ಟು ಸಂಕಷ್ಟ ಪಡುವ ಕಾಲ ದೂರವಿಲ್ಲ. ವಾಹನ ಸಂಚರಿಸುವಾಗಲೇ ಕುಸಿದುಬಿದ್ದರೆ ಪ್ರಾಣಾಪಾಯವೂ ಸಂಭವಿಸಬಹುದು. ಆದ್ದರಿಂದ ಇಲಾಖೆ ಈ ಬಗ್ಗೆ ತುರ್ತಾಗಿ ಗಮನಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ದುರ್ಬಲ ಸಾಧ್ಯತೆ
ಇದರ ಎರಡೂ ಪಾರ್ಶ್ವದ ಕಲ್ಲುಗಳು ಕುಸಿದಿರುವುದರಿಂದ ದೃಢತೆ ಕಳೆದುಕೊಂಡಿದೆ. ಅಲ್ಲದೆ ವೇಗವಾಗಿ ನೀರು ಹರಿಯುವುದರಿಂದ ಸೇತುವೆಯ ಕಂಬಗಳಿಗೆ ಒಂದೇ ಸಮನೆ ಢಿಕ್ಕಿ ಹೊಡೆದು ಸೇತುವೆ ದುರ್ಬಲಗೊಳ್ಳುವ
ಸಾಧ್ಯತೆಯೂ ಇದೆ. ಸೇತುವೆಯ ಇಕ್ಕೆಲಗಳ ಮಣ್ಣು ಕೂಡ ಸಡಿಲಗೊಂಡಿದೆ.

ಹೊಸ ಸೇತುವೆ ನಿರ್ಮಾಣ
ಗಂಜಿಮಠದಿಂದ ಕುಪ್ಪೆಪದವು ತನಕದ ಐದು ಕಿಲೋಮೀಟರ್‌ ರಸ್ತೆಯನ್ನು ಮೂರು ಕೋಟಿ ರೂ. ವೆಚ್ಚದಲ್ಲಿ ವಿಸ್ತರಿಸಲಾಗಿದ್ದು, ಈ ವೇಳೆ ಹಳೆ ಸೇತುವೆಯನ್ನು ತೆಗೆದು ಹೊಸ ಸೇತುವೆ ನಿರ್ಮಿಸಲಾಗುವುದು. ಈ ಬಗ್ಗೆ ಟೆಂಡರ್‌ ಕೆಲಸ ನಡೆದಿದ್ದು, ಶೀಘ್ರ ಕೆಲಸ ಆರಂಭಿಸಲಾಗುವುದು. 
ರವಿ ಕುಮಾರ್‌ ,
ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಪಿಡಬ್ಲ್ಯೂಡಿ

Advertisement

 ಗಿರೀಶ್‌ ಮಳಲಿ

Advertisement

Udayavani is now on Telegram. Click here to join our channel and stay updated with the latest news.

Next