ಹರಿಯಾಣ: ಗುರ್ಗಾಂವ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ, ಇದನ್ನು ನೋಡಿ ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಅರೆ ಇದೇನಪ್ಪಾ ಎಂದು ನೋಡಿದರೆ ಥಾರ್ ವಾಹನವೊಂದು ವಿದ್ಯುತ್ ಕಂಬವೇರಿ ನಿಂತಿದೆ.
ಈ ಘಟನೆ ನಡೆದಿದ್ದು ಹರಿಯಾಣದ ಗುರುಗ್ರಾಮದಲ್ಲಿ ಮಹಿಳೆಯೊಬ್ಬರು ಥಾರ್ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಥಾರ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಪರಿಣಾಮ ಮಹಿಳೆ ತನ್ನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಘಟನೆಯಲ್ಲಿ ಥಾರ್ ವಾಹನದಲ್ಲಿದ್ದ ಮಹಿಳೆಯನ್ನು ಅಲ್ಲಿನ ಸ್ಥಳೀಯರು ಸೇರಿ ಕೆಳಗಿಳಿಸಿದ್ದಾರೆ, ಆದರೆ ಡಿಕ್ಕಿ ಹೊಡೆದ ಕಾರು ಚಾಲಕ ಮಾತ್ರ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.
ಕಂಬದ ಮೇಲೇರಿದ ವಾಹನವನ್ನು ಬಳಿಕ ಕ್ರೇನ್ ಬಳಸಿ ಕೆಳಗಿಳಿಸಲಾಯಿತು. ಘಟನೆಯಿಂದ ಯಾರಿಗೂ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.
ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಲ್ಲಿನ ಸ್ಥಳೀಯರು ವಾಹನ ಕಂಬವೇರಿ ನಿಂತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.