ಹುಣಸೂರು: ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಮಾಜಿ ಶಾಸಕ ಮಂಜುನಾಥ್ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ. ಇವರನ್ನು ಸೋಲಿಸಿದ್ದರಿಂದ ತಾಲೂಕಿನ ಅಭಿವೃದ್ಧಿ ಮೂಲೆ ಗುಂಪಾಗುವಂತಾಗಿದೆ ಎಂದು ಮಾಜಿಸಚಿವ ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಬಿಳಿಕೆರೆ ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ರೂವಾರಿ ಮಾಜಿ ಶಾಸಕ ಎಚ್.ಪಿ.ಮಂಜುನಾಥರಿಗೆ ಬಿಳಿಕೆರೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಕೆರೆಯ ಏರಿಮೇಲೆ ನಡೆದ ಸಮಾರಂಭದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಂಜುನಾಥರು ಜಾತಿಮೀರಿದ ಜವಾಬ್ದಾರಿಯುತ ಪ್ರತಿನಿಧಿಯಾಗಿದ್ದವರು.
ಈ ಬಾರಿಯ ಚುನಾವಣೆಯಲ್ಲಿ ಜಾತಿ ವ್ಯವಸ್ಥೆ ಎಂಬುದು ಅಭಿವೃದ್ಧಿ ಮೇಲೆ ಸವಾರಿ ಮಾಡಿದೆ. ಹೀಗಾದಾಗ ಪ್ರಜಾಪ್ರಭುತ್ವ ದುರ್ಬಲವಾಗಲಿದೆ ಎಂದು ಬೇಸರಿಸಿ, ತಾಲೂಕಿನಲ್ಲಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳು ಹಿಂದಿನ ಸರಕಾರದ ಅವ ಯಲ್ಲಿ ಮಂಜೂರಾಗಿದ್ದವು, ಈಗ ಮಂಜೂರು ಮಾಡಿಸುತ್ತಿದ್ದೇನೆಂಬ ಹೇಳಿಕೆಗಳನ್ನು ಗಮನಿಸಿದ್ದೇನೆ, ಕಣ್ಣಿಗೆ ಕಾಣುವ ಅಭಿವೃದ್ಧಿಯನ್ನು ಯಾರೂ ಸುಳ್ಳು ಹೇಳಲು ಸಾಧ್ಯವಿಲ್ಲವೆಂದು ಟಾಂಗ್ ನೀಡಿದರು.
ಮಾಜಿ ಸಚಿವ ಶಿವರಾಜ್‌ತಂಗಡಗಿ ಮಾತನಾಡಿ ಸಿದ್ದರಾಮಯ್ಯ ಸರಕಾರವು ಕೆರೆಗಳಿಗೆ ನೀರುತುಂಬಿಸುವ ಯೋಜನೆಯನ್ನು ಆರಂಬಿಸಿ 3,500ಕೋಟಿ ಅನುದಾನ ನೀಡಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡೆ ಈಗಿನ ಸಮ್ಮಿಶ್ರ ಸರಕಾರ ಈ ಯೋಜನೆಗೆ 16 ಸಾವಿರ ಕೋಟಿ ರೂ ಮೀಸಲಿಟ್ಟಿದೆ ಎಂದರು.
ಗ್ರಾಮಸ್ಥರಿಂದ ಮಂಜುನಾಥ್ ಬೆಳ್ಳಿಗದೆ ಸನ್ಮಾನ ಸ್ವೀಕರಿಸಿ ಮಾತನಾಡಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ಸರಕಾರದಲ್ಲಿ ತಾಲೂಕಿಗೆ 7 ಏತ ನೀರಾವರಿಯೋಜನೆ ಮಂಜೂರಾಗಿತ್ತು, ಕೆ.ಆರ್.ಎಸ್.ಹಿನ್ನೀರಿಗೆ ಆಯರಹಳ್ಳಿಬಳಿ ತಡೆಗಟ್ಟೆನಿರ್ಮಿಸಿ ನೀರುಸಂಗ್ರಹಿಸಲಾಗುತ್ತಿದೆ ಎಂದರು. ಮಾಜಿ ಸಂಸದ ವಿಜಯಶಂಕರ್ ಮಾಜಿ ಶಾಸಕರಾದ ಪುಟ್ಟಸಿದ್ದಶೆಟ್ಟಿ, ವಿಜಯಾನಂದ ಕಾಶಂಪುರ್ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯಕುಮಾರ್, ಜಿ.ಪಂ.ಉಪಾಧ್ಯಕ್ಷೆ ಗೌರಮ್ಮಸೋಮಶೇಖರ್, ಸದಸ್ಯ ಕಟ್ಟನಾಯಕ, ಮಾಜಿಸದಸ್ಯರಾದ ಮಂಜುನಾಥ್,ರಾಮಕೃಷ್ಣೇಗೌಡ,ತಾ.ಪಂ.ಅಧ್ಯಕ್ಷೆ ಪದ್ಮಮ್ಮ, ಸದಸ್ಯರಾದ ರತ್ನ,ಗಣಪತಿ, ರಾಜೇಂದ್ರಬಾಯಿ, ತಾ.ಕಾಂಗ್ರೆಸ್ ಅಧ್ಯಕ್ಷರಾದ ನಾರಾಯಣ್,ಬಸವರಾಜೇಗೌಡ, ಶೋಭಾ ಇತರರಿದ್ದರು.