Advertisement

ಮರೆಯದಂಥ ಪಾಠ ಕಲಿಸಿದ್ದಕ್ಕೆ ಥ್ಯಾಂಕ್ಸ್‌!

12:30 AM Feb 19, 2019 | |

ಒಲವು ಒಮ್ಮೆಲೇ ಕೈ ಜಾರಿದ್ದೇಕೆ ಎಂದು ಕಾರಣ ಕೇಳ್ಳೋಣವೆಂದರೆ, ನೀನು ಮಾತಾಡುತ್ತಿಲ್ಲ. ಒಂದಂತೂ ಸತ್ಯ; ನೀನು ನನ್ನೊಡನೆ ಪ್ರೀತಿಯ ನಾಟಕವಾಡಿ ಎದ್ದು ಹೋಗಿಬಿಟ್ಟೆ. ಆದರೆ, ನಾನಿನ್ನೂ ಆ ನಾಟಕದೊಳಗೆ ಸಿಲುಕಿ, ಪ್ರೇಯಸಿಯ ಪಾತ್ರದಲ್ಲಿಯೇ ಜೀವಿಸುತ್ತಿದ್ದೇನೆ. 

Advertisement

“ತಡದ ಮಳಿ ಜಡದು ಬರ್ತದ’ ಅಂತಾರೆ. ಆದರೆ, ನನ್ನ ಜೀವನದಲ್ಲಿ ಹಾಗಾಗಲೇ ಇಲ್ಲ. ತಡವಾಗಿ ಸಿಕ್ಕ ಪ್ರೀತಿ, ದಡ ತಲುಪಲಾಗದೆ ಸಟ್ಟ ಸರಿಹೊತ್ತಿನಲ್ಲಿ ಸಮುದ್ರದ ನಟ್ಟನಡುವೆ ಮುಳುಗಿ ಲೀನವಾಯ್ತು.

ನನ್ನ ಪ್ರೀತಿಗೆ ನೀನು ಮುನ್ನುಡಿಯೂ ಆಗಲಿಲ್ಲ, ಬೆನ್ನುಡಿಯೂ ಆಗಲಿಲ್ಲ. ಪ್ರೀತಿಯ ಫ‌ಲಕ್ಕೆ ಉಪಸಂಹಾರವಾದೆ. ನಿನ್ನ ಒಂದು ನೋಟಕ್ಕಾಗಿ ನಾನು ಹಗಲಿರುಳು ಹಂಬಲಿಸಿದೆ. ಆದರೆ, ನಿನ್ನ ಪ್ರೀತಿಗಾಗಿ ನಾನೇನೂ ಮಹಾ ಕಷ್ಟ ಪಡಲಿಲ್ಲ ಅನ್ನೋದು ನಿಜ. ಸುಲಭವಾಗಿ ಸಿಕ್ಕಿದವನು ಅಂತ ಪ್ರೀತಿಯ ದುರುಪಯೋಗವನ್ನೂ ಮಾಡಲಿಲ್ಲ. ನನ್ನ ಪ್ರೀತಿ ಹಾಲಿನಷ್ಟೇ ಪವಿತ್ರವಾಗಿತ್ತು. ಆದರೆ, ಹಾಲು ಒಡೆದು ಹೋಗಿದ್ದು ಹೇಗೆ? 

ಕಾರಣ ಹೇಳದೆ, ಒಂದು ಚಿಕ್ಕ ಸುಳಿವನ್ನೂ ಕೊಡದೆ ನನ್ನಿಂದ ದೂರಗಿಬಿಟ್ಟೆಯಲ್ಲ, ಯಾಕೆ? ನಿನಗೆ ನೆನಪಿರಬಹುದು; ನಾನು ಅತ್ತರೆ ನೀನು ಕಣ್ಣೀರಾಗುತ್ತಿದ್ದೆ. ಬೇರೆ ಹುಡುಗರು ನನ್ನನ್ನು ಮಾತನಾಡಿಸಿದರೆ ನೀನು ಉರಿದು ಬೀಳುತ್ತಿದ್ದೆ. ಆಗೆಲ್ಲಾ ನಂಗೆ ಒಳಗೊಳಗೇ ತುಂಬಾ ಖುಷಿಯಾಗುತ್ತಿತ್ತು. ಒಂದು ದಿನ ನಾವಿಬ್ಬರೂ ಕಾಫಿ ಕುಡಿಯುತ್ತಿದ್ದಾಗ, ಲೆಕ್ಚರರ್‌ ಕಣ್ಣಿಗೆ ಬಿದ್ದು “ಜೆರಾಕ್ಸ್‌ ಮಾಡಿಸೋಕೆ ಬಂದಿದ್ದೀವಿ’ ಅಂತ ಸುಳ್ಳು ಹೇಳಿದ್ದೆವಲ್ವಾ? ನಿನ್ನೊಡನೆ ಕಳೆದ ಆ ಸಂಜೆಗಳು, ಕಾಲೇಜು ಲೈಬ್ರರಿ, ಅರಳಿಮರ, ಕಾಲೇಜು ಕ್ಯಾಂಪಸ್‌, ಆಟದ ಮೈದಾನ, ಕಂಪ್ಯೂಟರ್‌ ಲ್ಯಾಬ್‌, “ಕಾಫಿ ರಾಣಿ’ ಅಂತ ಹೀಯಾಳಿಸುತ್ತಿದ್ದ ನಿನ್ನ ದನಿ… ಇವೆಲ್ಲವೂ ನಿನ್ನ ಮಧುರ ಮೋಸಕ್ಕೆ  ಸಾಕ್ಷಿಯಾಗಿ, ಹೃದಯ ಹಿಂಡುತ್ತಿವೆ.

ಒಲವು ಒಮ್ಮೆಲೇ ಕೈ ಜಾರಿದ್ದೇಕೆ ಎಂದು ಕಾರಣ ಕೇಳ್ಳೋಣವೆಂದರೆ, ನೀನು ಮಾತಾಡುತ್ತಿಲ್ಲ. ಒಂದಂತೂ ಸತ್ಯ; ನೀನು ನನ್ನೊಡನೆ ಪ್ರೀತಿಯ ನಾಟಕವಾಡಿ ಎದ್ದು ಹೋಗಿಬಿಟ್ಟೆ. ಆದರೆ, ನಾನಿನ್ನೂ ಆ ನಾಟಕದೊಳಗೆ ಸಿಲುಕಿ, ಪ್ರೇಯಸಿಯ ಪಾತ್ರದಲ್ಲಿಯೇ ಜೀವಿಸುತ್ತಿದ್ದೇನೆ. ಜೀವನದಲ್ಲಿ ಯಾರೂ, ಯಾವುದೂ ಶಾಶ್ವತವಲ್ಲ ಅಂತ ಪಾಠ ಕಲಿಸಿದ್ದಕ್ಕೆ ಥ್ಯಾಂಕ್ಸ್‌. ನಾನೀಗ ಪೂರ್ತಿಯಾಗಿ ಖಾಲಿಯಾಗಿದ್ದೇನೆ. ಖಾಲಿಯಾಗಿಯೂ ಪರಿಪೂರ್ಣತೆಯೆಡೆಗೆ ಸಾಗುವ ಪ್ರಯತ್ನದಲ್ಲಿದ್ದೇನೆ. 

Advertisement

ಭವಿಷ್ಯದಲ್ಲಿ ಇಬ್ಬರೂ ಮುಖಾಮುಖೀಯಾಗುವ ಸಂದರ್ಭ ಬಂದರೆ, ಬೆನ್ನು ತೋರಿಸಿ ದಾಟಿ ಹೋಗೋಣ; ಅಪರಿಚಿತರಂತೆ. 

ರೇಣುಕಾ ಮಳಿಯಪ್ಪ ಮಾದಾರ್‌, ಬಾದಾಮಿ

Advertisement

Udayavani is now on Telegram. Click here to join our channel and stay updated with the latest news.

Next