ನವದೆಹಲಿ: ಭಾರತ ಸೇರಿದಂತೆ ಇಡೀ ಜಗತ್ತು ಕೋವಿಡ್ 19 ಸೋಂಕಿನ ವಿರುದ್ಧ ಹೋರಾಡುತ್ತಿದೆ. ಏತನ್ಮಧ್ಯೆ ಗೂಗಲ್ ಕೋವಿಡ್ ವಾರಿಯರ್ಸ್ ಗೆ ವಿಶೇಷ ಡೂಡಲ್ ಅರ್ಪಣೆ ಮೂಲಕ ಅಭಿನಂದನೆ ಸಲ್ಲಿಸಿರುವುದಾಗಿ ತಿಳಿಸಿದೆ.
ಗೂಗಲ್ ಡೂಡಲ್ ನಲ್ಲಿ ವೈದ್ಯರು, ನರ್ಸ್ ಗಳು, ಡೆಲಿವರಿ ಸ್ಟಾಫ್, ರೈತರು, ಶಿಕ್ಷಕರು, ಸಂಶೋಧಕರು, ಸ್ವಚ್ಛತಾ ಕೆಲಸಗಾರರು, ತರಕಾರಿ ಅಂಗಡಿ, ತುರ್ತುಸೇವೆಯ ಸಿಬ್ಬಂದಿಗಳು ಸೇರಿದಂತೆ ಎಲ್ಲಾ ಕೋವಿಡ್ ವಾರಿಯರ್ಸ್ ಗೆ ಕೃತಜ್ಞತೆ ಸಲ್ಲಿಸಿದೆ.
ವಿಶೇಷವಾಗಿ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಗೂಗಲ್ (Google)ನಲ್ಲಿರುವ ಎರಡು “ಒ” ಗಳನ್ನು ಡೂಡಲ್ ಮಾಡಲು ಉಪಯೋಗಿಸಿಕೊಂಡಿದೆ. ಎಲ್ಲರ ಸುರಕ್ಷತೆಗಾಗಿ ಹೋರಾಡುತ್ತಿರುವ ಕೋವಿಡ್ ವಾರಿಯರ್ಸ್ ಗೆ ಗೌರವ ನೀಡುವ ನಿಟ್ಟಿನಲ್ಲಿ ಎಲ್ಲರೂ ಮನೆಯಲ್ಲಿ ಇರುವಂತೆ ಗೂಗಲ್ ಇಂಡಿಯಾ ಮನವಿ ಮಾಡಿಕೊಂಡು ಡೂಡಲ್ ಅನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿತ್ತು.
ದೇಶ, ವಿದೇಶಗಳು ಪ್ರತಿಷ್ಠಿತ, ಗಣ್ಯ ವ್ಯಕ್ತಿಗಳ ವರ್ಷಾಚರಣೆ, ಹುಟ್ಟುಹಬ್ಬ, ವಿಶೇಷ ಹಬ್ಬಗಳು, ದೇಶದ ಇತಿಹಾಸದ ಮುಖ್ಯ ಘಟನೆಗಳ ಸಂದರ್ಭದ ದಿನದಂದು ಗೂಗಲ್ ಕಳೆದ ಕೆಲವು ವರ್ಷಗಳಿಂದ ವಿಶೇಷ ಡೂಡಲ್ ಮೂಲಕ ಗೌರವಿಸುತ್ತಿದೆ. ಅಷ್ಟೇ ಅಲ್ಲ ಮುಖ್ಯವಾದ ಸಂದರ್ಭದಲ್ಲಿ ಕಂಪನಿ ಲೋಗೋವನ್ನು ಕೂಡಾ ಬದಲಾಯಿಸುತ್ತಿರುತ್ತದೆ ಎಂದು ವರದಿ ತಿಳಿಸಿದೆ.