ಥಾಣೆ(ಮಹಾರಾಷ್ಟ್ರ): ಇತ್ತೀಚೆಗೆ ಪೋಷಕರು ಉಡುಗೊರೆಯಾಗಿ ನೀಡಿದ್ದ ಕಾರಿನಲ್ಲಿ ಸುತ್ತಾಡಲು ತೆರಳಿದ್ದ 17 ವರ್ಷದ ಬಾಲಕ ಹಾಗೂ ಆತನ ಗೆಳೆಯ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Chikkamagaluru Protest: ನಿರಂತರ ವಿದ್ಯುತ್ ಲೋಡ್ ಶೆಡ್ಡಿಂಗ್; ರೈತ ಸಂಘದಿಂದ ಪ್ರತಿಭಟನೆ
ಉಲ್ಲಾಸ್ ನಗರ-ಅಂಬರ್ ನಾಥ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿರುವುದಾಗಿ ಅಂಬರ್ ನಾಥ್ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ಪೊಲೀಸರ ಹೇಳಿಕೆಯ ಪ್ರಕಾರ, ಪೋಷಕರು ಉಡುಗೊರೆಯಾಗಿ ನೀಡಿದ್ದ ಕಾರನ್ನು ಬಾಲಕ ತನ್ನ 18 ವರ್ಷದ ಗೆಳೆಯನ ಜೊತೆ ವ್ಹೀಲಿಂಗ್ ಮಾಡಿದ್ದು, ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ತಿಳಿಸಿದ್ದಾರೆ.
ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರಿಬ್ಬರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಪಘಾತ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.