Advertisement

ಈ ಕ್ಷಣದವರೆಗಿನ ಕೋವಿಡ್ ಸುದ್ದಿಗಳು: ವಿದೇಶಿ ತಬ್ಲೀಘಿಗಳನ್ನು ಬಂಧಿಸಿದ್ದ ಪೊಲೀಸ್ ಗೆ ಸೋಂಕು!

09:12 AM Apr 11, 2020 | Hari Prasad |

ನವದೆಹಲಿ: ದೇಶಾದ್ಯಂತ ಕೋವಿಡ್ ವೈರಸ್ ಅಟ್ಟಹಾಸ ಜೋರಾಗುತ್ತಿದೆ. 1000 ಪಾಸಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ ವಾಣಿಜ್ಯ ನಗರಿ ಮುಂಬಯಿ ದೇಶದಲ್ಲೇ ಕೋವಿಡ್ ಹಾಟ್ ಸ್ಪಾಟ್ ಆಗಿ ಗುರುತಿಸಲ್ಪಟ್ಟಿದೆ. ಮಹಾರಾಷ್ಟ್ರದಲ್ಲಿ ದಾಖಲಾಗಿರುವ ಒಟ್ಟು 1574 ಕೋವಿಡ್ ಪ್ರಕರಣಗಳಲ್ಲಿ 64 ಪ್ರತಿಶತ ಸೋಂಕಿತರು ಮುಂಬಯಿ ನಗರದಲ್ಲೇ ಇರುವುದು ಕಳವಳಕಾರಿ ಅಂಶವಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ಮುಂಬಯಿಯಲ್ಲಿ 132 ಹೊಸ ಪ್ರಕರಣಗಳು ದಾಖಲಾಗಿವೆ. ಇನ್ನು ದೇಶದಲ್ಲಿನ ಈವರೆಗಿನ ಕೋವಿಡ್ ಅಪ್ ಡೇಟ್ಸ್ ಹೀಗಿದೆ.

Advertisement

ತಬ್ಲಘಿ ಜಮಾತ್ ನಲ್ಲಿ ಭಾಗವಹಿಸಿದ್ದ 21 ಮಂದಿ ವಿದೇಶಿಯರನ್ನು ಪತ್ತೆ ಮಾಡುವ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಿರಿಯ ಪೊಲೀಸ್ ಇನ್ ಸ್ಪೆಕ್ಟರ್ ಒಬ್ಬರಲ್ಲಿ ಇಂದು ಕೋವಿಡ್ ಸೋಂಕು ಪಾಸಿಟಿವ್ ಆಗಿದೆ. ಈ ಹಿರಿಯ ಪೊಲೀಸ್ ಅಧಿಕಾರಿ ಥಾಣೆಯ ಮುಂಬ್ರಾದಲ್ಲಿ 13 ಮಂದಿ ಬಾಂಗ್ಲಾದೇಶೀ ಹಾಗೂ 8 ಮಲೇಷಿಯಾ ದೇಶದ ತಬ್ಲಿಘಿಗಳನ್ನು ವಶಕ್ಕೆ ಪಡೆದುಕೊಳ್ಳುವ ಕಾರ್ಯಾಚರಣೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸಿದ್ದರು. ದೆಹಲಿಯ ನಿಝಾಮುದ್ದೀನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಈ 21 ಜನ ವಿದೇಶಿ ತಬ್ಲಿಘಿಗಳು ತಮಿಳುನಾಡಿಗೆ ಹೋಗಿ ಬಳಿಕ ಮುಂಬ್ರಾಗೆ ಬಂದಿದ್ದರು.

ಭಾರತೀಯ ವಾಯುಪಡೆಯ ಸಿ-17, ಸಿ-130, ಐಎಲ್- 76, ಎಎನ್-32 ಮತ್ತು ಡೋರ್ನಿಯರ್ ಕಾರ್ಗೋ ವಿಮಾನಗಳು ಅಗತ್ಯ ಸಾಮಾಗ್ರಿಗಳನ್ನು ಮುಂಬಯಿ, ಬೆಂಗಳೂರು, ಗೌಹಾತಿ ಮತ್ತು ಲೇಹ್ ಗಳಿಗೆ ತಲುಪಿಸಿವೆ. ಭಾರತೀಯ ವಾಯುಪಡೆಯ 140ಕ್ಕೂ ಹೆಚ್ಚು ವಿಮಾನಗಳು ಇಲ್ಲಿಯವೆರೆಗೆ ದೇಶದ ವಿವಿಧ ಭಾಗಗಳಲ್ಲಿ 200 ಟನ್ ಗಳಷ್ಟು ಅಗತ್ಯ ಸಾಮಾಗ್ರಿಗಳನ್ನು ಸಾಗಿಸಿವೆ.


ಛತ್ತೀಸ್ ಗಢದ ರಾಜ್ ನಂದ್ ಗಾಂವ್ ನಲ್ಲಿರುವ ಆಲ್ ಜಮಾತ್ ನ ಸದಸ್ಯರಿಗೆ ತಮ್ಮ ಇತ್ತೀಚಿನ ಪ್ರಯಾಣದ ವಿವರಗಳನ್ನು ಬಹಿರಂಗಗೊಳಿಸುವಂತೆ ಅಲ್ಲಿನ ಜಿಲ್ಲಾಧಿಕಾರಿ ಜೆ.ಪಿ. ಮೌರ್ಯ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಮಾರ್ಚ್ 1ರ ಬಳಿಕದ ಪ್ರಯಾಣದ ವಿವರಗಳನ್ನು ಈ ಸಂಘಟನೆಯ ಸದಸ್ಯರು ಬಹಿರಂಗಗೊಳಿಸಬೇಕು ಎಂದು ಡಿಸಿ ಆದೇಶಿಸಿದ್ದಾರೆ. ಮತ್ತು ಯಾವುದೇ ವ್ಯಕ್ತಿ ಈ ಸಂಬಂಧವಾಗಿ ವಿವರಗಳನ್ನು ಮುಚ್ಚಿಡುತ್ತಾರೋ ಅವರ ಮೇಲೆ ಐಪಿಸಿ 302 ಅಥವಾ 307 (ಕೊಲೆ ಅಥವಾ ಕೊಲೆ ಯತ್ನ) ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಇಲ್ಲಿನ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಕೇರಳದಲ್ಲಿ ಮತ್ತೆ 7 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 364 ಕ್ಕೆ ಏರಿಕೆಯಾಗಿದೆ. ಈ ಏಳು ಪ್ರಕರಣಗಳಲ್ಲಿ ಮೂರು ಕಾಸರಗೋಡು ಜಿಲ್ಲೆಯಲ್ಲಿ ವರದಿಯಾದರೆ ಇನ್ನಿಬ್ಬರು ಕಣ್ಣೂರು ಹಾಗೂ ಮಲಪ್ಪುರಂನವರಾಗಿದ್ದು, ಇವರು ಇತ್ತೀಚೆಗಷ್ಟೇ ನಿಜಾಮುದ್ದೀನ್ ಕಾರ್ಯಕ್ರಮದಿಂದ ವಾಪಾಸಾದವರಾಗಿದ್ದಾರೆ ಎಂದು ಕೇರಳ ರಾಜ್ಯದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಮಾಹಿತಿ ನೀಡಿದ್ದಾರೆ.

Advertisement

ಟರ್ಕಿ ದೇಶದಲ್ಲಿ ಕೋವಿಡ್ 19 ವೈರಸ್ ಸಂಬಂಧಿತ ಸಾವಿನ ಸಂಖ್ಯೆ 1000 ದಾಟಿದೆ ಎಂದು ಅಲ್ಲಿನ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಮೀನುಗಾರಿಕೆ ಹಾಗೂ ಸಮುದ್ರ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ಕೇಂದ್ರ ಸರಕಾರ ವಿನಾಯಿತಿ ನೀಡಿದೆ. ತನ್ನ ಲಾಕ್ ಡೌನ್ ಆದೇಶಕ್ಕೆ ಐದನೇ ಅಂಶವನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿರುವ ಕೇಂದ್ರ ಗೃಹ ಸಚಿವಾಲಯವು ಇಂದು ಈ ಆದೇಶವನ್ನು ಹೊರಡಿಸಿದೆ.


ಅಮೆರಿಕಾವು ಭಾರತದ ಬಳಿಯಿಂದ 48 ಲಕ್ಷ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳಿಗೆ ಬೇಡಿಕೆ ಇಟ್ಟಿತ್ತು. ಭಾರತ ಇದೀಗ 35.82 ಲಕ್ಷ ಮಾತ್ರಗಳನ್ನು ಕಳುಹಿಸಿಕೊಡಲು ಒಪ್ಪಿಗೆ ನೀಡಿದೆ. ಇದರ ಜೊತೆಯಲ್ಲಿ ಭಾರತವು ಆ ದೇಶದ ಕೋರಿಕೆಯ ಮೇರೆಗೆ 9ಎಂ.ಟಿ. ಎಪಿಐ ಸಹ ಕಳುಹಿಸಿಕೊಟ್ಟಿದೆ.

ಇನ್ನು ಬ್ರಝಿಲ್ ಹಾಗೂ ಕೆನಡಾ 50 ಲಕ್ಷ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರಗಳನ್ನು ಎರಡನೇ ಕಂತಿನಲ್ಲಿ ಪಡೆದುಕೊಳ್ಳುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ಬ್ರಝಿಲ್ ದೇಶಕ್ಕೆ 0.53 ಎಂ.ಟಿ. ಎಪಿಐ ರವಾನೆಗೊಳ್ಳಲಿದೆ. ಜರ್ಮನಿ ಸಹ ಎರಡನೇ ಹಂತದಲ್ಲಿ 50 ಲಕ್ಷ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಭಾರತದಿಂದ ಪಡೆದುಕೊಳ್ಳಲಿದೆ. ಮೊದಲ ಅವಧಿಯಲ್ಲಿ ಈ ದೇಶಕ್ಕೆ 1.5 ಎಂಟಿ ಎಪಿಐ ರವಾನೆಯಾಗಿದೆ.

ಇದರ ಜೊತೆಜೊತೆಗೆ ಬಾಂಗ್ಲಾದೇಶ 20 ಲಕ್ಷ, ನೇಪಾಳ 10 ಲಕ್ಷ, ಭೂತಾನ್ 2 ಲಕ್ಷ, ಶ್ರೀಲಂಕಾ 10 ಲಕ್ಷ, ಅಫ್ಘಾನಿಸ್ಥಾನ 5 ಲಕ್ಷ ಹಾಗೂ ಮಾಲ್ಡೀವ್ಸ್ 2 ಲಕ್ಷ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಭಾರತದಿಂದ ಪಡೆದುಕೊಳ್ಳಲಿವೆ.

ಭಾರತವು ತನ್ನ ಪ್ರಥಮ ಹಂತದ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳ ರವಾನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಹಂತದಲ್ಲಿ ಭಾರತದ ಬಳಿಯಿಂದ ಅಮೆರಿಕಾ, ಸ್ಪೈನ್, ಜರ್ಮನಿ, ಬಹ್ರೈನ್, ಬ್ರಝಿಲ್, ನೇಪಾಳ, ಭೂತಾನ್, ಅಫ್ಘಾನಿಸ್ಥಾನ, ಮಾಲ್ಡೀವ್ಸ್, ಬಾಂಗ್ಲಾದೇಶ, ಸಿಚೆಲ್ಸ್, ಮಾರಿಷಸ್ ಹಾಗೂ ಡೊಮೆನಿಕನ್ ರಿಪಬ್ಲಿಕ್ಸ್ ದೇಶಗಳು ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರಗಳನ್ನು ಪಡೆದುಕೊಂಡಿವೆ. ಈ ದೇಶಗಳು ಒಟ್ಟು 14 ಮಿಲಿಯನ್ ಮಾತ್ರೆಗಳನ್ನು ಪಡೆದುಕೊಳ್ಳಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪಾಕಿಸ್ಥಾನದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 4695ಕ್ಕೆ ಮುಟ್ಟಿದೆ. ಈ ಹಿನ್ನಲೆಯಲ್ಲಿ ಪಾಕ್ ಎಪ್ರಿಲ್ 21ರವರೆಗೆ ತನ್ನೆಲ್ಲಾ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ರದ್ದುಗೊಳಿಸಿದೆ. 727 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಇಲ್ಲಿಯವರೆಗೆ 66 ಸಾವು ಸಂಭವಿಸಿದೆ.

ಇಂಗ್ಲಂಡ್ ನಲ್ಲಿ ಕೋವಿಡ್ ಮಹಾಮಾರಿಯ ಅಟ್ಟಹಾಸ ಮುಂದುವರೆದಿದೆ. ಈ ದೇಶದಲ್ಲಿ ಒಂದೇ ದಿನ ಕೋವಿಡ್ ಸೋಂಕು ಸಂಬಂಧಿತ 980 ಸಾವು ಸಂಭವಿಸಿದೆ.

ನಿಜಾಮುದ್ದೀನ್ ಪ್ರದೇಶದ ಭಿಕ್ಷುಕನಿಗೂ ಕೋವಿಡ್ ಸೋಂಕು ತಗುಲಿದೆ. ನಿರ್ಬಂಧಿತ ಪ್ರದೇಶದ 6000 ಮಂದಿಯ ಮಾದರಿಗಳ ಪೈಕಿ ಈ ವ್ಯಕ್ತಿಯದ್ದು ಮಾತ್ರವೇ ಪಾಸಿಟಿವ್ ಬಂದಿದೆ. ರಾಜಸ್ಥಾನದಲ್ಲಿ ಮತ್ತೆ 98 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 53 ಪ್ರಕರಣಗಳು ಜೈಪುರ ಒಂದರಲ್ಲೇ ವರದಿಯಾಗಿದೆ. ಇದೀಗ ರಾಜ್ಯದಲ್ಲಿ ಒಟ್ಟು 561 ಕೋವಿಡ್ ಸೋಂಕು ಪೀಡಿತರಿದ್ದಾರೆ ಎಂದು ರಾಜ್ಯದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೆಹಲಿಯ ಮಜ್ನು-ಕಾ-ಟಿಲ್ಲಾ ಪ್ರದೇಶದಲ್ಲಿ ಡ್ರೋನ್ ಗಳ ಸಹಾಯದಿಂದ ಸೋಂಕುನಾಶಕಗಳನ್ನು ಸಿಂಪಡಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next