ಥಾಣೆ, ಡಿ. 17: ಥಾಣೆ ಬಂಟ್ಸ್ ಅಸೋಸಿಯೇಶನ್‌ನ ಮಹಿಳಾ ವಿಭಾಗದ ಆಶ್ರಯದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮವು ಡಿ. 13 ರಂದು ಅಪರಾಹ್ನ ಥಾಣೆ ಪಶ್ಚಿಮದ ಮುಲುಂಡ್ ಚೆಕ್‌ನಾಕಾದ ಸಮೀಪದ ಹೊಟೇಲ್ ವುಡ್ ಲ್ಯಾಂಡ್ ರಿಟ್ರೀಟ್‌ನಲ್ಲಿ ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ವೇಣುಗೋಪಾಲ್ ಎಲ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕುಶಲಾ ನವೀನ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಥಾಣೆಬಂಟ್ಸ್ ಅಸೋಸಿಯೇಶನ್‌ನ ಹಿರಿಯ ಸದಸ್ಯೆಯರಾದ ವಸಂತಿ ಸುಂದರ ಶೆಟ್ಟಿ ಮತ್ತು ವೇದಾವತಿ ಕೃಷ್ಣ ಶೆಟ್ಟಿಯವರನ್ನು ಮಹಿಳಾ ವಿಭಾಗದ ವತಿಯಿಂದ ಶಾಲು ಹೊದೆಸಿ, ಫಲ ಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಸ್ಯಾಕ್ಸೋಫೋನ್ ವಾದಕಿ ಪ್ರಾಪ್ತಿ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರ ವನ್ನಿತ್ತು ಗೌರವಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ವಸಂತಿ ಸುಂದರ ಶೆಟ್ಟಿ ಅವರು, ಈ ಸಂಸ್ಥೆಯ ಓರ್ವ ಸದಸ್ಯೆಯಾಗಿದ್ದೇನೆ ಎನ್ನಲು ಹೆಮ್ಮೆಯಾಗುತ್ತಿದೆ. ಈ ಸಂಸ್ಥೆಯಿಂದ ಉತ್ತಮ ಕೆಲಸಗಳು ನಡೆಯುತ್ತಿವೆ. ನಾನು ನನ್ನ ಜೀವನದಲ್ಲಿ ಹೆಚ್ಚು ದೇವಸ್ಥಾನವನ್ನು ನೋಡಿರಲಿಲ್ಲ. ಆದರೆ ಥಾಣೆ ಬಂಟ್ಸ್‌ನ ಮುಖಾಂತರ ಅನೇಕ ಪುಣ್ಯ ಕ್ಷೇತ್ರಗಳನ್ನು ನೋಡುವ ಭಾಗ್ಯ ನನ್ನ ಪಾಲಿಗೆ ಲಭಿಸಿದೆ. ನಿಮ್ಮ ಪ್ರೀತಿ, ಗೌರವಕ್ಕೆ ಋಣಿಯಾಗಿದ್ದೇನೆ ಎಂದರು.
ಇನ್ನೋರ್ವ ಸಮ್ಮಾನಿತೆ ವೇದಾವತಿ ಕೃಷ್ಣ ಶೆಟ್ಟಿ ಅವರು ಮಾತನಾಡಿ, ನಿಮ್ಮ ಸಮ್ಮಾನಕ್ಕೆ ಕೃತಜ್ಞತೆಗಳು. ಸಂಸ್ಥೆಯಿಂದ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ನುಡಿದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೋದಾ ಮಾಡಾ ಅವರು ಕಾರ್ಯಕ್ರಮ ನಡೆಸಿ ಕೊಟ್ಟರು. ಸ್ಪರ್ಧೆಯಲ್ಲಿ ಹಿರಿಯ ಸದಸ್ಯೆ ಶಾಂತಾ ಶೆಟ್ಟಿ, ಅನಿತಾ ಶೆಟ್ಟಿ, ಶಾಂತಾ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ಶಾರದಾ ಹೆಗ್ಡೆ, ನಯನಾ ಶೆಟ್ಟಿ, ದೃಶ್ಯಾ ಶೆಟ್ಟಿ, ವಿಶಾ ಲಾಕ್ಷೀ ಶೆಟ್ಟಿ, ಸೇವಂತಿ ಶೆಟ್ಟಿ, ಸರೋಜಿನಿ ಶೆಟ್ಟಿ ಮೊದಲಾದವರು ವಿಜೇತರಾಗಿದ್ದು, ಅವರನ್ನು ಗಣ್ಯರು ಮತ್ತು ಪದಾಧಿಕಾರಿಗಳು ಗೌರವಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಪ್ರಸಿದ್ಧ ವೈದ್ಯೆ ಡಾ| ಅಮೂಲ್ಯಾ ಶೆಟ್ಟಿ ಮತ್ತು ಡಾ| ಸರಿತಾ ಶೆಟ್ಟಿ ಉಪಸ್ಥಿತರಿದ್ದರು. ಜ್ಯೋತಿ ಎನ್. ಶೆಟ್ಟಿ ಅವರು ಪ್ರಾರ್ಥನೆಗೈದರು. ಮೋಹಿನಿ ಆರ್. ಶೆಟ್ಟಿ ಮತ್ತು ತಾರಾ ಪಿ. ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು.
ಜ್ಯೋತಿ ಎನ್. ಶೆಟ್ಟಿ ಮತ್ತು ಭಾರತಿ ಶೆಟ್ಟಿ ಇವರು ಸಮ್ಮಾನಿತರನ್ನು ಪರಿಚಯಿಸಿದರು. ಉಪ ಕಾರ್ಯಾಧ್ಯಕ್ಷೆ ಶರ್ಮಿಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಲತಾ ಆರ್. ಶೆಟ್ಟಿ ವಂದಿಸಿದರು. ವೇದಿಕೆಯಲ್ಲಿ ಥಾಣೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಕುಶಲಾ ನವೀನ್ ಶೆಟ್ಟಿ, ಉಪಾಧ್ಯಕ್ಷೆ ಶರ್ಮಿಳಾ ಸೀತಾರಾಮ ಶೆಟ್ಟಿ, ಗೌರವ ಕಾರ್ಯದರ್ಶಿ ತಾರಾ ಪ್ರಕಾಶ್ ಶೆಟ್ಟಿ, ಗೌರವ ಕೋಶಾಧಿಕಾರಿ ಮೋಹಿನಿ ರಮೇಶ್ ಶೆಟ್ಟಿ, ಜತೆ ಕಾರ್ಯದರ್ಶಿ ಭಾರತಿ ಸಿ. ಶೆಟ್ಟಿ, ಜತೆ ಕೋಶಾಧಿಕಾರಿ ಜ್ಯೋತಿ ಎನ್. ಶೆಟ್ಟಿ ಅವರು ಉಪಸ್ಥಿತರಿದ್ದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ ಮತ್ತು ಆರತಿ ವೈ. ಶೆಟ್ಟಿ ಅವರು ಪದಾಧಿಕಾರಿಗಳ ಯಾದಿಯನ್ನು ಓದಿದರು. ಸಂಸ್ಥೆಯ ಸ್ಥಾಪಕರು, ಮಾಜಿ ಅಧ್ಯಕ್ಷರುಗಳು, ಮಹಿಳಾ ವಿಭಾಗದ ಸರ್ವ ಸದಸ್ಯರು, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರು,
ಥಾಣೆ ಬಂಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜದ ಮಹಿಳೆಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ