ಗೋಕಾಕ: ಕರದಂಟು ನಗರಿ ಗೋಕಾಕದಲ್ಲಿ ಎರಡು ದಿನಗಳ ಜಿಲ್ಲಾ ಮಟ್ಟದ ಕನ್ನಡ ಹಬ್ಬ ಅಕ್ಷರ ಜಾತ್ರೆಯ ಸಂಭ್ರಮಕ್ಕೆ ಶನಿವಾರ ಅದ್ಧೂರಿ ತೆರೆ ಕಂಡಿತು. ಮಳೆರಾಯನ ಸ್ವಾಗತದೊಂದಿಗೆ ಆರಂಭಗೊಂಡಿದ್ದ ನುಡಿ ಜಾತ್ರೆ ಶನಿವಾರ ಜಿಟಿ ಜಿಟಿ ಮಳೆಯಲ್ಲಿಯೇ ಸಂಪನ್ನಗೊಂಡಿದ್ದು ವಿಶೇಷವಾಗಿತ್ತು.
ಇಲ್ಲಿಯ ಕೆಎಲ್ಇ ಸಂಸ್ಥೆಯ ಎಂ.ಬಿ. ಮುನವಳ್ಳಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಬೆಳಗಾವಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ
ಸಮ್ಮೇಳನದ ಆಕ್ಷರ ದಾಸೋಹ ಈಗ ಎಲ್ಲರ ಮನೆ ಮಾತಾಗಿದ್ದು, ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಗಡಿ ಜಿಲ್ಲೆಯ ಹಿತದೃಷ್ಟಿಯಿಂದ ಮಂಡಿಸಿದ ನಿರ್ಣಯಗಳ ಮೂಲಕ ನುಡಿ ಜಾತ್ರೆ ಮುಕ್ತಾಯಗೊಂಡಿತು.
ಜಿಟಿ ಜಿಟಿ ಮಳೆಯಿಂದ ಪುಸ್ತಕ ಮಳಿಗೆಗಳು ಹಾಗೂ ಇತರ ಅಂಗಡಿಕಾರರಿಗೆ ಅನಾನುಕೂಲವಾಗಿದ್ದರೂ ಕನ್ನಡದ ಉತ್ಸಾಹ ಮಾತ್ರ ಕಡಿಮೆ ಆಗಲಿಲ್ಲ. ಶುಕ್ರವಾರ ಬೆಳಗ್ಗೆ ಮೆರವಣಿಗೆ ಮೂಲಕ ಆರಂಭಗೊಂಡ ಸಮ್ಮೇಳನದ ಮುಖ್ಯ ವೇದಿಕೆಗೆ ಬರುತ್ತಿದ್ದಂತೆ ಮಳೆ ಶುರು ಆಗಿತ್ತು. ಉದ್ಘಾಟನೆ ಸಮಾರಂಭ ಮುಗಿಯುತ್ತಿದ್ದಂತೆ ಧೋ ಧೋ ಮಳೆ ಸುರಿಯುತು.
ಮಳೆ ಧಾರಾಕಾರವಾಗಿ ಸುರಿದಿದ್ದರಿಂದ ಇಡೀ ವೇದಿಕೆಯಲ್ಲಿ ನೀರು ಆವರಿಸಿತ್ತು. ನಂತರದ ಎಲ್ಲ ಗೋಷ್ಠಿ ಹಾಗೂ ಇತರ ಕಾರ್ಯಕ್ರಮಗಳು ಸಮೀಪದ ಕಾಲೇಜು ಆವರಣದಲ್ಲಿಯೇ ನಡೆದವು. ಸಮಾರೋಪ ಸಮಾರಂಭ ಮುಗಿಯುವುದರೊಳಗಾಗಿಯೇ ಮುಖ್ಯ ವೇದಿಕೆಯ ಮಂಟಪವನ್ನು ತೆಗೆಯಲಾಯಿತು.
•ಭೈರೋಬಾ ಕಾಂಬಳೆ