ಉಡುಪಿ: ಸಿದ್ಧಾಂತಗಳಿಗೆಪರಿಣಾಮಕಾರಿಯಾಗಿ ಪ್ರತಿವಾದ ಮಂಡಿಸಿ ಖಂಡಿಸಲು ಸಾಧ್ಯವಾಗದವರು ಮೊಂಡು ವಾದ ಮಾಡುತ್ತಾರೆ. ಇದರಿಂದ ವಿದ್ಯಾವಂತರಿಗೆ ಬೆಳಕಿಗೆಬರಲು ಸಾಧ್ಯವಾಗುತ್ತಿಲ್ಲ. ಅವರ ಬೌದ್ಧಿಕ ಮತ್ತು ತಾತ್ತ್ವಿಕ ಪ್ರಯತ್ನಗಳನ್ನು ವಿಫಲಗೊಳಿಸುವ ಯತ್ನ ನಡೆಯುತ್ತಿವೆ ಎಂದು ಲೇಖಕ, ಸಂಶೋಧಕ ಡಾ| ಉಪ್ಪಂಗಳ ರಾಮ ಭಟ್ಟ ಅಭಿಪ್ರಾಯಪಟ್ಟರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋ ಧನ ಕೇಂದ್ರ ಮತ್ತು ಮಾಹೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಉಡುಪಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿ-2019 ಸ್ವೀಕರಿಸಿ ಅವರು ಮಾತನಾಡಿದರು.
ಈಗಿನ ಕಾಲಘಟ್ಟದಲ್ಲಿ ಪುಸ್ತಕ ಬೇಡ ಎನ್ನುವ ಅಭಿಪ್ರಾಯವಿದೆ. ಅದು ಉಳಿಯಬೇಕು. ಪುಸ್ತಕ ಅಳಿದರೆ ಮಾನವೀಯತೆಯೂ ಅಳಿಯುತ್ತದೆ. ಜ್ಞಾನಕ್ಕೆ ಗೌರವ ಕೊಡಬೇಕು. ಅದನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಜ್ಞಾನದಿಂದ ಮಾತ್ರ ವೈಜ್ಞಾನಿಕ, ಶಾಸ್ತ್ರೀಯವಾಗಿಯೂ ನೆಲೆ ಕಂಡುಕೊಳ್ಳಲು ಸಾಧ್ಯ. ಇನ್ನೊಬ್ಬರ ಯೋಗ್ಯತೆ, ಜ್ಞಾನವನ್ನು ಗೌರವಿಸದಿದ್ದರೆ ಅದು ಅಹಂಕಾರಕ್ಕೆ ಸಮ ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಹೆ ವಿ.ವಿ. ಕುಲಸಚಿವ ಡಾ| ನಾರಾಯಣ ಸಭಾಹಿತ್ ಮಾತನಾಡಿ, ಯಕ್ಷಗಾನ ಕಲಿತವರಿಗೆ ಸರ್ಟಿಫಿಕೇಟ್ ನೀಡುವ ಮತ್ತು ಯಕ್ಷಗಾನ ಡಿಪ್ಲೊಮಾ ಆರಂಭಿಸುವ ಕೆಲಸ ವಿಶ್ವವಿದ್ಯಾನಿಲಯ ಗಳಿಂದ ಆಗಬೇಕು ಎಂದರು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು. ತಾಳ್ತಜೆ ಕೇಶವ ಭಟ್ಟರ ಪುತ್ರ, ವಿದ್ವಾಂಸ ಡಾ| ತಾಳ್ತಜೆ ವಸಂತ ಕುಮಾರ್ ಅಭಿನಂದನಾ ಭಾಷಣಗೈದರು. ಡಾ| ವರದರಾಜ್ ಚಂದ್ರಗಿರಿ ಉಪನ್ಯಾಸ ನೀಡಿದರು. ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ| ವರದೇಶ ಹಿರೇಗಂಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ| ಎಂ.ಎಲ್. ಸಾಮಗ ವಂದಿಸಿ, ಭ್ರಮರಿ ಶಿವಪ್ರಕಾಶ್ ನಿರೂಪಿಸಿದರು.