ತಲ್ಲೂರು: ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಪೇಟೆಯಲ್ಲಿ ಚರಂಡಿಯಿಲ್ಲದೆ ತೊಂದರೆಯಾಗುತ್ತಿರುವುದರ ಬಗ್ಗೆ ಅಲ್ಲಿನ ಜನ ಆಕ್ಷೇಪ ವ್ಯಕ್ತಪಡಿಸಿದ್ದು, ಪರಿಸ್ಥಿತಿಯ ತೀವ್ರತೆಯನ್ನರಿತು ಸದ್ಯ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಅಧಿಕಾರಿಗಳು ಸ್ಪಂದಿಸಿದ್ದಾರೆ.
ತಲ್ಲೂರು ಪೇಟೆಯಲ್ಲಿ ಚರಂಡಿ ಕಾಮಗಾರಿ ಆರಂಭಿಸಿದ್ದಾರೆ.
ತಲ್ಲೂರು ಪೇಟೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ, ಕೃತಕ ನೆರೆ ಸೃಷ್ಟಿಯಾಗುವ ಭೀತಿಯೂ ಇಲ್ಲಿಯ ಜನರಿಗಿತ್ತು.
ಅದಲ್ಲದೆ ಕೆಲದಿನಗಳ ಹಿಂದೆ ಸುರಿದ ಮಳೆ ನೀರು, ಮಣ್ಣೆಲ್ಲ ಅಕ್ಕಪಕ್ಕದಲ್ಲಿರುವ ಮನೆಯಂಗಳಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ಜನತೆ ತುರ್ತು ಅಗತ್ಯವಾಗಿ ಚರಂಡಿ ನಿರ್ಮಾಣದತ್ತ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುವಂತೆ ಆಗ್ರಹಿಸಿದ್ದರು.
ಡಿವೈಡರ್ : ವಿಸ್ತರಣೆಗೆ ಆಗ್ರಹ
ಇಲ್ಲಿರುವ ಡಿವೈಡರ್‌ನ ಅಗಲ ಕಡಿಮೆಯಿದ್ದು, ಇದರಿಂದ ಉಪ್ಪಿನಕುದ್ರು ಕಡೆಯಿಂದ ಬರುವ ಬಸ್ ಸಹಿತ ಇತರೆ ವಾಹನಗಳು ಕುಂದಾಪುರ ಅಥವಾ ನೇರಳಕಟ್ಟೆ ಕಡೆಗೆ ಸಂಚರಿಸಲು ರಸ್ತೆ ಕ್ರಾಸ್ ಮಾಡಬೇಕಾದರೆ, ಹೆದ್ದಾರಿ ಮಧ್ಯೆ ಬಂದು ನಿಲ್ಲಬೇಕು. ಇದರಿಂದ ಅಪಘಾತವಾಗುವುದರ ಜತೆಗೆ ಟ್ರಾಫಿಕ್ ನಿಲುಗಡೆ ಕೂಡ ಆಗುತ್ತದೆ.
ಇದಕ್ಕೆ ಡಿವೈಡರ್‌ನ ಅಗಲವನ್ನು ಇನ್ನು 4-5 ಫೀಟ್ ಆದರೂ ವಿಸ್ತರಿಸಬೇಕು ಎಂದು ಇಲ್ಲಿನ ವಾಹನ ಸವಾರರು ಆಗ್ರಹಿಸಿದ್ದಾರೆ.