ತಾಳಿಕೋಟೆ: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ರಚನೆಗೆ ಸಂಬಂಧಪಟ್ಟಂತೆ ಮೊದಲಿನಿಂದಲೂ ಚುನಾವಣಾ ಪ್ರಕ್ರಿಯೆ ಮೂಲಕ ನಡೆಯದೇ ಹಾಗೂ ಸಂಘದ ಕಾಯ್ದೆ, ಬಾಯ್ಲಾ ಹಾಗೂ ನಿರ್ದೇಶನಗಳನ್ನು ಪಾಲಿಸದೇ ಕೇವಲ ಸಾಮಾನ್ಯ ಸಭೆಯಲ್ಲಿಯೇ ಆಡಳಿತ ಮಂಡಳಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯುತ್ತ ಸಾಗಿದ್ದಕ್ಕೆ ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಕೊನೆಗೂ ಬ್ರೇಕ್ ಹಾಕಿದ್ದಾರೆ.
ಚುನಾವಣೆ ವಿಷಯಕ್ಕೆ ಸಂಬಂಧಿಸಿ ಎಂ.ಎಂ. ಪಾಟೀಲ ಅವರು 18-12-2019ರಂದು ಜಿಲ್ಲಾ ಸಂಘಗಳ ನೋಂದಣಾ ಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಲಿಖೀತವಾಗಿ ದೂರು ಸಲ್ಲಿಸಿದ್ದರು. ಇದನ್ನು ಪರಿಶೀಲನೆ ನಡೆಸದ ನೋಂದಣಾಧಿಕಾರಿಗಳು ವೀ.ವಿ.ಸಂಘದ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ ವಿಚಾರಣೆಗಾಗಿ 3-1-2020ರಂದು ನಿಗ ದಿಪಡಿಸಿ ತಿಳಿವಳಿಕೆ ಪತ್ರ ನೀಡಿದ್ದರು. ಆದರೆ ಅರ್ಜಿದಾರ ಎಂ.ಎಂ. ಪಾಟೀಲ ಅವರು ಸಂಘದ ವಾರ್ಷಿಕ ಮಹಾಸಭೆಯನ್ನು 29-12-2019ಕ್ಕೆ ನಿಗದಿ ಮಾಡಿದ್ದಾರೆ.
ತುರ್ತು ವಿಚಾರಣೆಗೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದರಿಂದ ಜಿಲ್ಲಾ ನೋಂದಣಾಧಿಕಾರಿಗಳು ನ್ಯಾಯದ ಹಿತದೃಷ್ಟಿಯಿಂದ ಸಂಘದ ವಿಚಾರಣೆಯನ್ನು 26-12-2019ರಂದು ನಿಗದಿಪಡಿಸಿ ಕರೆಯಲಾದ ವಿಚಾರಣೆಯಲ್ಲಿ ಸಂಘದ ಕಾರ್ಯದರ್ಶಿ ಬಸನಗೌಡ ಗಬಸಾವಳಗಿ, ಎಂ.ಎಸ್. ಸರಶೆಟ್ಟಿ, ಕೆ.ಎಸ್. ಮುರಾಳ ಹಾಜರಾಗಿ ಸಂಘದ ದಾಖಲಾತಿಗಳನ್ನು ಸಲ್ಲಿಸಲು ಕಾಲಾವಕಾಶ ಕೇಳಿದ್ದರಿಂದ 27-12-2019ಕ್ಕೆ ಮುಂದೂಡಲಾಗಿತ್ತು. ಸದರಿ ಡಿ. 27ರಂದು ಕರೆಯಲಾದ ವಿಚಾರಣೆ ಕಾಲಾವಕಾಶದಲ್ಲಿ ದೂರುದಾರ ಎಂ.ಎಂ. ಪಾಟೀಲ ಹಾಜರಿದ್ದು ವೀ.ವಿ.ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಗೈರಾಗಿದ್ದಾರೆ.
ಇನ್ನೊಬ್ಬ ಅಜೀವ ಸದಸ್ಯರಾದ ಶಿವಾನಂದ ಬಾಗೇವಾಡಿ, ಭೀಮನಗೌಡ ಪಾಟೀಲ ದೂರು ಸಲ್ಲಿಸಿ ಡಿ. 29ರಂದು ಜರುಗುವ ಸಂಘದ ವಾರ್ಷಿಕ ಮಹಾಸಭೆ ನೋಟಿಸ್ ಪತ್ರ ತಲುಪಿದೆ. ಆದರೆ 11 ಆಡಳಿತ ಮಂಡಳಿ ಸದಸ್ಯ ಚುನಾವಣೆ ಪ್ರಕ್ರಿಯೆಗೆ ಚುನಾವಣಾಧಿಕಾರಿ ಹಾಗೂ ಚುನಾವಣಾ ವೇಳಾಪಟ್ಟಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಡಿ. 29ರಂದು ಜರುಗುವ ಚುನಾವಣೆ ತಡೆಹಿಡಿಯಬೇಕೆಂದು ಮನವಿ ಮಾಡಿದರು.
ಸಂಘದ ಲಭ್ಯವಿದ್ದ ಮಾಹಿತಿ, ಹಿಂದಿನ ಕಡತಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾ ನೋಂದಣಾ ಧಿಕಾರಿಗಳು ಅರ್ಜಿದಾರ ಎಂ.ಎಂ. ಪಾಟೀಲ ಹಾಗೂ ಇತರರು ಸಲ್ಲಿಸಿದ ದೂರಿನ ಅರ್ಜಿ ವಿಚಾರಣೆಯಾಗಿದ್ದು, ಸಂಘದ ಅಧ್ಯಕ್ಷರಿಗೆ 21-11-2013ರಂದು ನೀಡಿದ ನಿರ್ದೇಶನದಂತೆ ಚುನಾವಣೆ ನಡೆಸಲು ಆದಶಪತ್ರದಲ್ಲಿ ಸೂಚಿಸಿದ್ದಾರೆ.
29-12-2019ರಂದು ನಡೆಯಲಿರುವ ವಾರ್ಷಿಕ ಮಹಾಸಭೆಗೂ 5 ದಿನ ಮುಂಚಿತ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಿ ನಂತರ ವಾರ್ಷಿಕ ಮಹಾಸಭೆ ನಡೆಸಬೇಕೆಂದು ವೀ.ವಿ.ಸಂಘದ ಅಧ್ಯಕ್ಷ, ಕಾರ್ಯದರ್ಶಿಯವರಿಗೆ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಜಿಲ್ಲಾ ಸಂಘಗಳ ನೋಂದಣಾ ಕಾರಿಗಳು ಆದೇಶಿಸಿದ್ದಾರೆ. ಇದರಿಂದ ಡಿ.29ರಂದು ನಡೆಯಬೇಕಿದ್ದ ವಾರ್ಷಿಕ ಮಹಾಸಭೆಗೆ ತಡೆಬಿದ್ದಂತಾಗಿದೆ.