ತಾಳಿಕೋಟೆ: ತಾಲೂಕಿನ ಅಸ್ಕಿ ಗ್ರಾಪಂ ವ್ಯಾಪ್ತಿಯ ನೀರಲಗಿ ಗ್ರಾಮದಲ್ಲಿ 2000/2001ನೇ ಸಾಲಿನಲ್ಲಿ ಸುಮಾರು 35 ಜನರಿಗೆ ಆಶ್ರಯ ಪ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಸದರಿ ಜಾಗೆಯನ್ನು ಗ್ರಾಮದ ಪ್ರಭಾವಿ ವ್ಯಕ್ತಿಗಳು ಕಬಳಿಕೆ ಮಾಡುವುದರೊಂದಿಗೆ ಜಾಗೆಗಳನ್ನು ಮಾರಾಟ ಮಾಡುತ್ತಾ ಸಾಗಿದ್ದಾರೆ. ಕೂಡಲೇ ಕ್ರಮಕೈಗೊಂಡು ದಲಿತ ಜನಾಂಗದವರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನೀರಲಗಿ ಗ್ರಾಮದಿಂದ ಅಸ್ಕಿ ಗ್ರಾಮದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಶರಣು ಜಮಖಂಡಿ ಮಾತನಾಡಿ, ಸರ್ವೇ ನಂ.186ರ 3.20 ಗುಂಟೆ ರಾಜ್ಯಪಾಲರ ಹೆಸರಿನಲ್ಲಿರುವ ಈ ಜಾಗೆಯಲ್ಲಿ 2000/01ರಲ್ಲಿ ಜಾಗೆ ಇಲ್ಲದ ದಲಿತ ಜನಾಂಗದ 7 ಜನರನ್ನು ಸೇರಿಸಿ ಒಟ್ಟು 35 ಪ್ಲಾಟ್ ಗಳನ್ನು ಹಂಚಿಕೆ ಮಾಡಲಾಗಿದೆ. ಸದರಿ ಹಂಚಿಕೆ ಮಾಡಲಾದ ಪ್ಲಾಟ್‌ಗಳಿಗೆ ಸಂಬಂಧಿಸಿದ ಹಕ್ಕು ಪತ್ರಗಳನ್ನೂ ಸಹ ನೀಡಲಾಗಿದೆ. ಹಕ್ಕು ಪತ್ರದಲ್ಲಿ ಚೆಕ್ಕಬಂದಿ ಹಾಕದಿರುವುದರಿಂದ ಮನೆಗಳನ್ನು ಕಟ್ಟಿಸಿಕೊಳ್ಳಲು ಆಗಿಲ್ಲ. ಈ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ತಾಪಂ ಇಒ, ಪಿಡಿಒಗಳಿಗೆ ಪ್ಲಾಟ್ ಗುರುತಿಸಿ ಚೆಕ್ಕಬಂದಿ ನಿರ್ಮಿಸಿ ಮನೆ ಕಟ್ಟಿಸಿಕೊಳ್ಳಲು ಉತ್ತಾರೆ ನೀಡಬೇಕೆಂದು ಮನವಿ ಸಲ್ಲಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಡಿಎಸ್‌ಎಸ್ ಉತ್ತರ ಕರ್ನಾಟಕ ಅಧ್ಯಕ್ಷ ಅಶೋಕ ಸುಲ್ಪಿ ಮಾತನಾಡಿ, ಅಸ್ಕಿ ಗ್ರಾಪಂ ವ್ಯಾಪ್ತಿಯ ನೀರಲಗಿ ಗ್ರಾಮದ ಪ್ರಭಾವಿ ವ್ಯಕ್ತಿಗಳು ತಮ್ಮ ರಾಜಕೀಯ ಒತ್ತಡದಿಂದ ಹಂಚಿಕೆ ಮಾಡಲಾದ ಪ್ಲಾಟ್‌ಗಳು ತಮ್ಮದೇ ಎಂದು ಮಾರಾಟ ಮಾಡುತ್ತಾ ಸಾಗಿದ್ದಾರೆ. ಆದರೆ ಸದರಿ ಪ್ಲಾಟ್‌ಗಳಿಗೆ ಸಂಬಂಧಿಸಿ ಹಕ್ಕುಪತ್ರದೊಂದಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ
ಇಲ್ಲದ ಸಬೂಬ ಹೇಳುತ್ತಾರೆ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ ದಲಿತ ಜನಾಂಗದವರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದರು.
ಡಿಎಸ್‌ಎಸ್ ತಾಲೂಕು ಸಂಘಟನಾ ಸಂಚಾಲಕ ಚಂದ್ರಶೇಖರ ದೊಡಮನಿ, ತಾಳಿಕೋಟೆ ತಾಲೂಕು ಸಂಚಾಲಕ ಯಮನೂರಿ ಬೇಕಿನಾಳ ಮಾತನಾಡಿದರು. ನಂತರ ಉಪತಹಶೀಲ್ದಾರ್ ಅಶೋಕ ಶರ್ಮಾ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಮುಖಂಡರಾದ ಅಶೋಕ ಶುಲ್ಪಿ, ಸಂಗಮೇಶ ನಡುವಿನಕೇರಿ, ಬಾಬು ಕೆಳಗಿನಮನಿ, ತಿಪ್ಪಣ್ಣ ಮಾದರ, ಅನಿಲ ಬಡಿಗೇರ, ಪ್ರಕಾಶ ಮಲ್ಲಾರಿ, ಜಾನು ಗುಡಿಮನಿ, ಪರಶುರಾಮ ಬ್ಯಾಕೋಡ, ಹಣಮಂತ ವಡ್ಡರ, ಗುರುಪ್ರಸಾದ ಬಿ.ಜಿ., ಸಿದ್ರಾಮ ಮೇಲಿನಮನಿ, ಸೋಮಪ್ಪ ನಡುವಿನಮನಿ, ಸಾಯಬಣ್ಣ ನಡುವಿನಮನಿ, ಪರಶುರಾಮ ಜಾಲಹಳ್ಳಿ, ಬಾಬಾಸಾಹೇಬ ಮುಜಾವರ ಸೇರಿದಂತೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು .