Advertisement

ಸಂಚಾರ ಅಸ್ತವ್ಯಸ್ತ; ಲಘು ಲಾಠೀ ಪ್ರಹಾರ

01:02 AM Feb 27, 2020 | mahesh |

ಉಳ್ಳಾಲ: ಮಂಗಳೂರಿನಿಂದ ತಲಪಾಡಿಗೆ ಸಂಚರಿಸುವ ಖಾಸಗಿ ಬಸ್‌ಗಳು ಮತ್ತು ತಲಪಾಡಿ ಟೋಲ್‌ಪ್ಲಾಜಾ ನಡುವಿನ ವಿವಾದ ಮುಂದುವರಿದಿದೆ. ಬುಧವಾರ ಬೆಳಗ್ಗೆ ಟೋಲ್‌ ಫ್ಲಾಜಾದಲ್ಲಿ ರಿಯಾಯಿತಿ ದರದಲ್ಲಿ ತೆರಳಲು ಅನುಮತಿ ನೀಡಬೇಕು ಮತ್ತು ಪ್ರತ್ಯೇಕ ಗೇಟ್‌ಗಳನ್ನು ಮೀಸಲಿಡಬೇಕು ಎಂದು ಆಗ್ರಹಿಸಿ ಟೋಲ್‌ಗೇಟ್‌ ಬಳಿ ಖಾಸಗಿ ಬಸ್‌ಗಳನ್ನು ಅಡ್ಡ ಇಟ್ಟು ಪ್ರತಿಭಟನೆ ನಡೆಸಿದ್ದರಿಂದ ಸ್ವಲ್ಪಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಮಧ್ಯಪ್ರವೇಶಿಸಿದ ಪೊಲೀಸರು ಲಘು ಲಾಠೀಪ್ರಹಾರ ಮಾಡಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.

Advertisement

ಬಸ್‌ ಮಾಲಕರ ನೇತೃತ್ವದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಖಾಸಗಿ ಬಸ್‌ಗಳನ್ನು ನಗದು ಪಾವತಿ ಕೌಂಟರ್‌ ಸನಿಹ ನಿಲ್ಲಿಸಿ ಪ್ರತಿಭಟನೆ ನಡೆಯಿತು. ಇದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಟೋಲ್‌ಪ್ಲಾಜಾದ ಎದುರು ಜಮಾಯಿಸಿದ ಜನರು ಟೋಲ್‌ ಸಿಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾತಿನ ಚಕಮಕಿ
ಜನ ಸೇರುತ್ತಿದ್ದಂತೆ ವಾಹನಗಳಿಗೆ ಮುಂದುವರಿಯುವುದು ಅಸಾಧ್ಯವಾಯಿತು. ಈ ಸಂದರ್ಭ ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್‌ಗಳನ್ನು ಟೋಲ್‌ಗೇಟ್‌ ಬಳಿಯಿಂದ ಖಾಲಿ ಜಾಗಕ್ಕೆ ಸ್ಥಳಾಂತರಿಸಿದಾಗ ಪೊಲೀಸರು, ಸಂಘಟನೆಯ ಮುಖಂಡರು, ಬಸ್‌ ಮಾಲಕರು, ನಾಗರಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಪೊಲೀಸರು ಲಘು ಲಾಠಿ ಚಾರ್ಜ್‌ ನಡೆಸಿ ಪ್ರತಿಭಟನಕಾರರನ್ನು ಚದುರಿಸಿದರು. ಒಂದು ಗಂಟೆಯ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ಪ್ರಯಾಣಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.

ಫೆ. 29ರಂದು ಸ‌ಭೆ
ಬಸ್‌ನ ಸಿಬಂದಿ ಸೇರಿದಂತೆ ಮಾಲಕರು, ಸಂಘಟನೆಯ ಮುಖ್ಯಸ್ಥರು ಪಟ್ಟು ಹಿಡಿದು ಟೋಲ್‌ಬಳಿ ನಿಂತಾಗ ಸಹಾಯಕ ಪೊಲೀಸ್‌ ಆಯುಕ್ತ ಕೋದಂಡರಾಮ ಅವರು ಪ್ರತಿಭಟನಕಾರರೊಂದಿಗೆ ಸಂದಾನ ನಡೆಸಿ ಫೆ. 29ರಂದು ಜಿಲ್ಲಾಧಿಕಾರಿ, ಸಂಸದರು, ಟೋಲ್‌ ಅಧಿಕಾರಿಗಳನ್ನು ಜತೆಗೆ ಸೇರಿಸಿಕೊಂಡು ತುರ್ತು ಸಭೆ ನಡೆಸುವ ಕುರಿತು ಮನವಿ ಮಾಡುವುದಾಗಿ ಭರವಸೆ ನೀಡಿದರು. ಆಬಳಿಕ ಸಾರ್ವಜನಿಕರು ಪ್ರತಿಭಟನೆಯನ್ನು ಕೈಬಿಟ್ಟರು.

ಮುಗಿಯದ ಗೋಳು
ತಲಪಾಡಿ ಕೊನೆಯ ನಿಲ್ದಾಣಕ್ಕೆ ತೆರಳಲು ಖಾಸಗಿ ಬಸ್‌ಗಳು ಟೋಲ್‌ ಪಾವತಿ ಮಾಡಲೇಬೇಕಾದ್ದರಿಂದ ಟೋಲ್‌ಪ್ಲಾಜಾದ ಎದುರಿನಿಂದಲೇ ಬಸ್‌ಗಳು ಮಂಗಳೂರಿಗೆ ವಾಪಸಾಗುತ್ತಿವೆ. ಇದರಿಂದ ಕೇರಳ ಭಾಗಕ್ಕೆ ಹೋಗುವ ಪ್ರಯಾಣಿಕರು ನಡೆದುಕೊಂಡು ಹೋಗಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next