ಬ್ಯಾಂಕಾಕ್: ಭಾರತದ ಕಿರಣ್ ಜಾರ್ಜ್ ತನ್ನ ಉತ್ತಮ ನಿರ್ವಹಣೆಯನ್ನು ಮುಂದುವರಿಸಿ ಥಾಯ್ಲೆಂಡ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಕೂಟದಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದ್ದಾರೆ.
ಇದೇ ವೇಳೆ ಲಕ್ಷ್ಯ ಸೇನ್ ಚೀನದ ಎದುರಾಳಿ ಲಿ ಶಿ ಫೆಂಗ್ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲಿಗೇರಿದೆ ಆಶ್ಮಿತಾ ಚಲಿಹಾ ಸೋಲನ್ನು ಕಂಡು ಹೊರಬಿದ್ದಿದ್ದಾರೆ.
ವಿಶ್ವದ 59ನೇ ರ್‍ಯಾಂಕಿನ ಕಿರಣ್ 39 ನಿಮಿಷಗಳ ಹೋರಾಟದಲ್ಲಿ ಚೀನದ ವೆಂಗ್ ಹಾಂಗ್ ಯಾಂಗ್ ಅವರನ್ನು 21-11, 21-19 ಗೇಮ್‌ಗಳಿಂದ ಉರುಳಿಸಿ ಕ್ವಾರ್ಟರ್‌ಫೈನಲಿಗೇರಿದರು.2022ರ ಒಡಿಶಾ ಓಪನ್ ವಿಜೇತ ಕಿರಣ್ ಶುಕ್ರವಾರ ಕ್ವಾರ್ಟರ್‌ಫೈನಲ್ ಪಂದ್ಯವನ್ನಾಡಲಿದ್ದಾರೆ.ಅವರ ಎದು ರಾಳಿ ಯಾರೆಂಬುದನ್ನು ಇನ್ನಷ್ಟೇ ಗೊತ್ತಾಗಬೇಕಿದೆ.
ಇದೇ ವೇಳೆ 23ರ ಹರೆಯದ ಆಶ್ಮಿತಾ ಚಲಿಹಾ ಅವರು ಸ್ಪೇಯ್ನನ 3 ಬಾರಿಯ ವಿಶ್ವ ಚಾಂಪಿಯನ್ ಕ್ಯಾರೋಲಿನಾ ಮರಿನ್ ಅವರೆದುರು 18-21, 13-21 ಗೇಮ್‌ಗಳಿಂದ ಶರಣಾದರು.
ಸಂಜೆ ನಡೆದ ಪಂದ್ಯದಲ್ಲಿ ವಿಶ್ವದ 23ನೇ ರ್‍ಯಾಂಕಿನ ಲಕ್ಷ್ಯ ಸೇನ್ ಅವರು ಫೆಂಗ್ ಅವರನ್ನು 21-17, 21-15 ಗೇಮ್‌ಗಳಿಂದ ಉರುಳಿಸಿ ಅಂತಿಮ ಎಂಟರ ಸುತ್ತಿಗೆ ತಲುಪಿದರು. ಅಲ್ಲಿ ಅವರು ಮಲೇಷ್ಯದ ಅರ್ಹತಾ ಆಟಗಾರ ಲಿಯಾಂಗ್ ಜುನ್ ಹಾವೊ ಅವರನ್ನು ಎದುರಿಸಲಿದ್ದಾರೆ.
ವನಿತೆಯರ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಮೂರನೇ ಶ್ರೇಯಾಂಕದ ಚೀನದ ಹಿ ಬಿಂಗ್ ಜಾವೊ ಅವರ ಕೈಯಲ್ಲಿ 11-21, 14-21 ಗೇಮ್‌ಗಳಿಂದ ಶರಣಾದರೆ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಇಂಡೋನೇಶ್ಯದ ಮುಹಮ್ಮದ್ ಶೊಹಿಬುಲ್ ಫಿಕ್ರಿ ಮತ್ತು ಬಗಸ್ ಮೌಲಾನಾ ಅವರಿಗೆ 26-24, 11-21, 17-21 ಗೇಮ್‌ಗಳಿಂದ ಸೋತು ಹೊರಬಿದ್ದರು.