ಬ್ಯಾಂಕಾಕ್: ಕೋವಿಡ್ ವೈರಸ್ ಅಪಾರ ಪ್ರಮಾಣದ ಸಾವುನೋವುಗಳಿಗೆ ಕಾರಣವಾಗುತ್ತಿದ್ದರೆ ಮತ್ತೂಂದೆಡೆ ಮಾನವ ಕಳ್ಳ ಸಾಗಾಣಿಕೆಯ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಆತಂಕ ವ್ಯಕ್ತವಾಗುತ್ತಿದೆ.
ಥೈಲ್ಯಾಂಡ್‌ನ ಉತ್ತರ ನ್ಯಾನ್ ಪ್ರಾಂತ್ಯದಲ್ಲಿನ ಬಡ ಕುಟುಂಬಗಳು ಈ ಸಮಸ್ಯೆಗೆ ಹೆಚ್ಚು ಒಳಗಾಗುತ್ತಿದ್ದಾರೆ. ಗುಡ್ಡಗಾಡು ಪ್ರದೇಶದ ಈ ಬುಡಕಟ್ಟು ಜನಾಂಗ ಮತ್ತು ಸಣ್ಣಪುಟ್ಟ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವವರು ಕಳ್ಳಸಾಗಣೆಗೆ ಬಲಿಯಾಗುತ್ತಿದ್ದಾರೆ. ಹೆಚ್ಚಾಗಿ ಇಲ್ಲಿನ ಮಕ್ಕಳು ದೈಹಿಕವಾಗಿಯೂ ದುರ್ಬಲವಾಗಿದ್ದು, ಶಿಕ್ಷಣದಿಂದ ವಂಚಿತರಾಗಿರುತ್ತಾರೆ.
ಆಗ್ನೇಯ ಏಷ್ಯಾ ಬಹಳ ಹಿಂದಿನಿಂದಲೂ ಮಾನವ ಕಳ್ಳಸಾಗಣೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಇದೀಗ ಕೋವಿಡ್ ವೈರಸ್‌ನ ವಿರುದ್ಧದ ಹೋರಾಟದ ಭಾಗವಾಗಿ ಲಾಕ್‌ಡೌನ್ ವಿಸ್ತರಣೆಗೊಂಡಿದೆ. ಇದರ ಪರಿಣಾಮವಾಗಿ ಕಾರ್ಖಾನೆಗಳು ಮುಚ್ಚಿದ್ದು, ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿವೆ. ಬಹುತೇಕ ಉದ್ಯಮಗಳು ಈಗ ಮುಚ್ಚಿದ್ದು, ಉದ್ಯೋಗ ನಷ್ಟಗಳ ಪ್ರಮಾಣ ಹೆಚ್ಚಾಗಿದೆ. ಕಾಂಬೋಡಿಯಾದ ಉಡುಪು ಉದ್ಯಮ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ನಷ್ಟಗೊಂಡಿವೆ.
ನಗರಗಳಲ್ಲಿ ಉದ್ಯೋಗ ನಷ್ಟವಾದರೆ ಅದರ ಪರಿಣಾಮ ಕಾಂಬೋಡಿಯಾದ ಹಳ್ಳಿಗಳ ಮೇಲೆ ಆಗುತ್ತದೆ. ಹಳ್ಳಿಗಳಿಂದ ತೆರಳಿ ನಗರದಲ್ಲಿ ಉದ್ಯೋಗ ಮಾಡುತ್ತಿದ್ದವರು ಮನೆಗೆ ಹಣವನ್ನು ಕಳುಹಿಸಬೇಕು. ಯಾಕೆಂದರೆ, ಹಳ್ಳಿಗಳಲ್ಲಿನ ಜನರು ಸಾಲ ತೆಗೆದುಕೊಂಡು ಜೀವನ ಸಾಗಿಸುತ್ತಿದ್ದು, ಇದರ ಬಡ್ಡಿಯನ್ನು ನಗರದಲ್ಲಿದ್ದವರು ಪಾವತಿಸುತ್ತಿದ್ದರು. ಇಂತಹ ಕಠಿನ ಸಂದರ್ಭ ಸಾಲ ಮರುಪಾವತಿಸಲು ಸಾಧ್ಯವಾಗದೇ ಇದ್ದರೆ ಮನೆಯಲ್ಲಿನ ಹೆಣ್ಣುಮಕ್ಕಳನ್ನು ಒತ್ತೆಯಾಳುಗಳಾಗಿ ಇಡಲಾಗುತ್ತದೆ. ಈ ಹಿಂದಿನ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಇಂಥ ಬೆಳವಣಿಗೆ ಘಟಿಸಿದ್ದವು.
ಥೈಲ್ಯಾಂಡ್‌ನಲ್ಲಂತೂ ಕೋವಿಡ್ ಸಾಂಕ್ರಾಮಿಕ ದೇಶದ ಬಡವರನ್ನು ಹತಾಶೆಗೆ ತಳ್ಳಿದೆ. ಬಡ ಸಮುದಾಯಗಳು ಇಂದು ಸಂಕಷ್ಟದಲ್ಲಿದ್ದಾರೆ. ಉದ್ಯೋಗ ಕೊರತೆಗಳು ಮತ್ತು ಉದ್ಯೋಗ ನಷ್ಟದ ಪರಿಣಾಮಗಳನ್ನು ಹದಿಹರೆಯದವರು ಎದುರಿಸುವಂತಾಗಿದೆ. ಮಾನವ ಕಳ್ಳಸಾಗಣೆಗಾಗರರು ಇದರ ದುರ್ಲಾಭ ಪಡೆಯಲು ಯತ್ನಿಸುತ್ತಿದ್ದು, ಎಳೆಯ ಮಕ್ಕಳನ್ನು ಸೇರಿದಂತೆ ಯುವಕ ಯುವತಿಯನ್ನು ಅಪಹರಿಸಿ ಕೆಲಸದಾಳುಗಳಿಗೆ ಮಾರುತ್ತಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಮಕ್ಕಳಿಗೆ ಅಪಾಯ
ಯುವತಿಯರನ್ನು ಲೈಂಗಿಕತೆಗೆ ಬಳಸಿಕೊಳ್ಳಲಾಗುತ್ತಿದ್ದು, ಇಂಥ ಚಟುವಟಿಕೆಗಳು ದೇಶದಲ್ಲಿ ತಲೆ ಎತ್ತುತ್ತಿವೆ. ಹಣದ ಅನಿವಾರ್ಯತೆಗೆ ಕುಟುಂಬಗಳು ಬಲಿಯಾಗುತ್ತಿವೆ. ಶಾಲಾ ಕಾಲೇಜುಗಳು ಮುಚ್ಚಲಾದ ಪರಿಣಾಮ ಮಕ್ಕಳು ಮನೆಯಲ್ಲಿಯೇ ಇದ್ದು, ಆನ್‌ಲೈನ್‌ಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಇದರಿಂದ ಇಂಟರ್ನೆಟ್ ಮೂಲಕ ಕಳ್ಳಸಾಗಾಣಿಕೆಯ ಜಾಲಗಳು ಇವರನ್ನು ಸಂಪರ್ಕಿಸುವ ಅಪಾಯವಿದೆ. ಚಾಟ್, ವೀಡಿಯೋ ಚಾಟ್ ಮಾಡಿ ಹಣಗಳಿಸಬಲ್ಲ ತಾಣಗಳು ಅಲ್ಲಿ ಸಕ್ರಿಯವಾಗಿವೆ.
ಶಿಕ್ಷಣ ಇಲ್ಲ
ಶಿಕ್ಷಣದಿಂದ ಬಹುತೇಕ ವಂಚಿತರಾಗಿರುವ ಹಲವು ಬಡ ಮಕ್ಕಳು ಅನೇಕ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪೋಷಕರು ದೂರದಲ್ಲೆಲ್ಲೋ ಕೂಲಿ ಮಾಡುವುದರಿಂದ ಮನೆಯಲ್ಲಿ ಮಕ್ಕಳೂ ಮಾತ್ರ. ಈ ಸಂದರ್ಭ ಕಳ್ಳಸಾಗಾಣಿಕೆಯ ಜಾಲ ಸಕ್ರಿಯವಾಗಲು ಅನುಕೂಲ. ಅಮೆರಿಕದ ಅಂದಾಜಿನ ಪ್ರಕಾರ ವಾರ್ಷಿಕವಾಗಿ 8 ಲಕ್ಷ ಜನರನ್ನು ಅಂತಾರಾಷ್ಟ್ರೀಯ ಗಡಿಗಳಲ್ಲಿ ಈ ಮೂಲಕ ಸಾಗಿಸಲಾಗುತ್ತದೆ. ಅಕ್ರಮ ಮಾನವ ಕಳ್ಳಸಾಗಣೆಯ ಒಟ್ಟು ಮಾರುಕಟ್ಟೆ ಮೌಲ್ಯವು ಸರಿಸುಮಾರು 32 ಬಿಲಿಯನ್ ಡಾಲರ್ ಆಗಿದೆ ಎಂದು ಹೇಳಲಾಗಿದೆ.