Advertisement
ಥಾಯ್ಲೆಂಡ್- ಥಾಯ್ ಅಂದರೆ “ದೇವ’; ಹಾಗಾಗಿ, ಇದು ದೇವಭೂಮಿ. ಅಲ್ಲಿನ ಜನರು ರಾಮಾಯಣದ ಘಟನೆಗಳೊಡನೆ ತಮ್ಮ ದೇಶದ ಹಲವಾರು ಪ್ರದೇಶಗಳನ್ನು ಗುರುತಿಸುತ್ತಾರೆ. ಅವರ ರಾಜಧಾನಿ, ಬ್ಯಾಂಕಾಕ್ ನಗರದ ವಿಮಾನನಿಲ್ದಾಣದ ಹೆಸರೇ “ಸ್ವರ್ಣಭೂಮಿ’! ಭಾರತೀಯ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡು ಬೆಳೆದ ಥಾಯ್ಲೆಂಡ್‌ನಲ್ಲಿ ರಾಮನಿಗೆ ವಿಶೇಷವಾದ ನಂಟಿದೆ. ವಿವಿಧ ಪ್ರಕಾರದ ರಾಮಾಯಣಗಳ ಪರಂಪರೆಯೇ ಇಲ್ಲಿ ಕಾಣುತ್ತದೆ.
Related Articles
Advertisement
ಶಿಲಾಶಾಸನಗಳಲ್ಲಿ ಉಲ್ಲೇಖ: ಬೌದ್ಧ ದೇಶ ಥಾಯ್ಲೆಂಡ್‌ನಲ್ಲಿ ರಾಮಾಯಣ, ಹಲವು ಆಚರಣೆಗಳಲ್ಲಿ ಎದ್ದು ತೋರುತ್ತದೆ. ರಾಮಾಯಣದ ಎಲ್ಲಾ ಘಟನೆಗಳೂ ಅಲ್ಲಿಯೇ ನಡೆದವು ಎಂದು ಅಲ್ಲಿನ ಹಿರಿಯರು ನಂಬುತ್ತಾರೆ. ರಾಮ- ರಾವಣರ ಯುದ್ಧ ನಡೆದದ್ದೇ ಅಲ್ಲಂತೆ! ವಾನರ ಪುಂಗವ ಹನುಮಂತ ತಂದ ಸಂಜೀವಿನಿ ಪರ್ವತವೂ ಅಲ್ಲಿಯೇ ಇದೆ! ರಾಮರಾಜ್ಯದ ರಾಜಧಾನಿಯನ್ನು ನೆನಪಿಸುವ “ಅಯುಥಾಯ- ಅಯೋಧ್ಯೆ’ ಯೂ ಬ್ಯಾಂಕಾಕ್ ನಗರದ ಹತ್ತಿರದಲ್ಲಿಯೇ ಇದೆ. ಅಲ್ಲಿ ದೊರೆತಿರುವ 13ನೇ ಶತಮಾನಕ್ಕೂ ಹಿಂದಿನ ಶಿಲಾ ಶಾಸನದಲ್ಲಿ, ರಾಮನ ಗುಹೆ (ಧಾಮ ಪ್ರಾರಾಮಾ) ಹಾಗೂ ಸೀತೆಯ ಗುಹೆಗಳ (ಧಾಮ್ ಮಂಗಸಿದಾ) ಉಲ್ಲೇಖವಿದೆ.
“ಸೇತುವೆ ಕಟ್ಟುವ’ ಸುದೀರ್ಘ ಕಥೆ: ಥಾಯ್ಲೆಂಡ್‌ನ ರಾಮ್ ಕೀನ್- ರಾಮಾಯಣದಲ್ಲಿ ಹಲವು ವಿಶೇಷಗಳಿವೆ. ರಾವಣನೊಡನೆ ಯುದ್ಧಮಾಡಲು ವಾನರ ಸೈನ್ಯದೊಂದಿಗೆ ಬಂದ ರಾಮನಿಗೆ, ಸಮುದ್ರಕ್ಕೆ ಸೇತುವೆ ಕಟ್ಟಲು, ವಾಲ್ಮೀಕಿ ರಾಮಾಯಣದಲ್ಲಿ 5 ದಿನಗಳು ಸಾಕಾಗುತ್ತವೆ. ಆದರೆ, ಅದು ರಾಮ್ ಕೀನ್ ರಾಮಾಯಣದಲ್ಲಿ ಬಹು ದೀರ್ಘಕಾಲದ ಕಥಾನಕವಾಗಿ ಬೆಳೆದಿದೆ. ಆ ಸಮಯದಲ್ಲಿ, ರಾವಣ ಏನು ಮಾಡುತ್ತಿದ್ದ?
ಸಮುದ್ರಕ್ಕೆ ಸೇತುವೆ ಕಟ್ಟುತ್ತಿರುವುದು ಅವನಿಗೆ ತಿಳಿಯದೆ ಇರುವುದು ಸಾಧ್ಯವೇ? ತಿಳಿದೂ ಅಂಥ ಮಾಯಾವಿ ರಾಕ್ಷಸ ಸುಮ್ಮನಿರುವುದು ಸಾಧ್ಯವೇ? ಎಂಬಂಥ ವಾಸ್ತವಿಕ ಪ್ರಶ್ನೆಗಳೊಂದಿಗೆ ಹಲವಾರು ರೋಚಕ ಘಟನೆಗಳು, “ರಾಮ್ ಕೀನ್’ನಲ್ಲಿವೆ. ಉತ್ತರ ರಾಮಾಯಣದಲ್ಲಿಯೂ ವಾಲ್ಮೀಕಿ ರಾಮಾಯಣದಲ್ಲಿಲ್ಲದ ಅನೇಕ ವೃತ್ತಾಂತಗಳ ಸೇರ್ಪಡೆ ನಡೆದು, ಕೊನೆಗೆ ರಾಮ- ಸೀತೆಯರು ಒಂದಾಗಿ ಬಹುಕಾಲ ಬಾಳಿದರು ಎನ್ನುವ ಸುಖಾಂತ್ಯ ಕಾಣುತ್ತದೆ.
* ಡಾ. ಜಯಂತಿ ಮನೋಹರ್