ನವದೆಹಲಿ : ಚುನಾವಣಾ ಆಯೋಗ ಸೋಮವಾರ ಶಿವಸೇನೆಯ ಉದ್ದವ್ ಠಾಕ್ರೆ ನೇತೃತ್ವದ ಬಣಕ್ಕೆ ಚುನಾವಣಾ ಚಿಹ್ನೆಯಾಗಿ ” ಉರಿಯುತ್ತಿರುವ ಪಂಜಿನ (ಕೈಯಲ್ಲಿ ಹಿಡಿದ ಜ್ವಾಲೆಯ ಜ್ಯೋತಿ) ಅನ್ನು ಹಂಚಿಕೆ ಮಾಡಿದೆ.ಪಕ್ಷದ ಹೆಸರಾಗಿ “ಶಿವಸೇನೆ – ಉದ್ಧವ್ ಬಾಳಾಸಾಹೇಬ್ ಠಾಕ್ರೆ” ಅನ್ನು ನಿಗದಿಪಡಿಸಿದೆ
ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಹೆಚ್ಚಿನ ಆಯ್ಕೆಗಳನ್ನು ಸಲ್ಲಿಸಿ ಮನವಿ ಮಾಡಿದೆ. ”ಬಾಳಾಸಾಹೆಬಂಚಿ ಶಿವಸೇನೆ” ಅನ್ನು ಶಿಂಧೆ ಶಿಬಿರಕ್ಕೆ ಪಕ್ಷದ ಹೆಸರಾಗಿ ನೀಡಲಾಗಿದೆ.
ಶಿಂಧೆ ಬಣವು ಚಿಹ್ನೆಯ ಆಯ್ಕೆಯಾಗಿ ಗದೆ ಮತ್ತು ತ್ರಿಶೂಲವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು. ಧಾರ್ಮಿಕ ಅರ್ಥಗಳನ್ನು ಉಲ್ಲೇಖಿಸಿ ಚಿಹ್ನೆಗಳಾಗಿ ತಿರಸ್ಕರಿಸಿತು. ಎರಡೂ ಬಣಗಳು ಬಯಸಿದ ‘ಉದಯಿಸುವ ಸೂರ್ಯ’ ಚುನಾವಣಾ ಚಿಹ್ನೆಯನ್ನು ತಮಿಳುನಾಡು ಮತ್ತು ಪುದುಚೇರಿಯಲ್ಲಿ ಡಿಎಂಕೆಗೆ ಮೀಸಲಿಡಲಾಗಿದೆ ಎಂದು ಅದು ಆಯೋಗ ಗಮನಸೆಳೆದಿದೆ.
ಮಂಗಳವಾರ ಬೆಳಗ್ಗೆ 10 ಗಂಟೆಯೊಳಗೆ ಮೂರು ಚಿಹ್ನೆಗಳ ಹೊಸ ಪಟ್ಟಿಯನ್ನು ಸಲ್ಲಿಸುವಂತೆ ಆಯೋಗವು ಶಿಂಧೆ ಬಣವನ್ನು ಕೇಳಿದೆ.
ಕಳೆದ ವಾರದ ಆರಂಭದಲ್ಲಿ, ಮುಂದಿನ ತಿಂಗಳು ನಡೆಯಲಿರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಠಾಕ್ರೆ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣಗಳು ಪಕ್ಷದ ಹೆಸರು ಮತ್ತು ಅದರ ಚುನಾವಣಾ ಚಿಹ್ನೆ ‘ಬಿಲ್ಲು ಮತ್ತು ಬಾಣ’ವನ್ನು ಬಳಸದಂತೆ ಆಯೋಗ ನಿರ್ಬಂಧಿಸಿದೆ.
ಪಕ್ಷದ ನಿಯಂತ್ರಣಕ್ಕಾಗಿ ಪ್ರತಿಸ್ಪರ್ಧಿ ಬಣಗಳ ಹಕ್ಕುಗಳ ಮೇಲಿನ ಮಧ್ಯಂತರ ಆದೇಶದಲ್ಲಿ, ಆಯೋಗವು ಸೋಮವಾರದೊಳಗೆ ಮೂರು ವಿಭಿನ್ನ ಹೆಸರಿನ ಆಯ್ಕೆಗಳನ್ನು ಮತ್ತು ಆಯಾ ಗುಂಪುಗಳಿಗೆ ಹಂಚಿಕೆಗಾಗಿ ಹಲವು ಉಚಿತ ಚಿಹ್ನೆಗಳನ್ನು ಸೂಚಿಸುವಂತೆ ಕೇಳಿಕೊಂಡಿತ್ತು.
ಇದೇ ವೇಳೆ, ಶಿವಸೇನೆಯ ಹೆಸರು ಮತ್ತು ಬಿಲ್ಲು ಬಾಣವುಳ್ಳ ಚಿಹ್ನೆಯನ್ನು ಸ್ತಂಭನಗೊಳಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ರದ್ದುಪಡಿಸುವಂತೆ ಕೋರಿ ಉದ್ಧವ್ ಠಾಕ್ರೆ ಬಣ ಸೋಮವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.