Advertisement

ಹುಬ್ಬಳ್ಳಿ: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ಸಾವಿರಕ್ಕೂ ಅಧಿಕ ಪ್ರೌಢಶಾಲಾ ಪಿಸಿಎಂ(ಟಿಜಿಟಿ) ಶಿಕ್ಷಕರಿಗೆ ಕಾರ್ಯಭಾರ ಕಡಿಮೆಯಾಗಿರುವುದರಿಂದ ಇಲಾಖೆಗೆ ಹೊರೆಯಾದಂತಾಗಿದೆ.

Advertisement

ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ 2005, 2007, 2008 ಮತ್ತು 2010ನೇ ಸಾಲಿನಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಜತೆಗೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಗೆ ಗಣಿತ ಮತ್ತು ವಿಜ್ಞಾನ ಬೋಧಿಸಲು ಪ್ರೌಢಶಾಲಾ ಶಿಕ್ಷಕ ವೃಂದದ ಪಿಸಿಎಂ ಕನ್ನಡ ಟಿಜಿಟಿ (ಟ್ರೈನ್‌ ಗ್ರಾಜುವೇಟ್‌ ಟೀಚರ್‌) ಹುದ್ದೆಯನ್ನು ಸೃಜಿಸಿ ಸುಮಾರು ಏಳು ಸಾವಿರ ಶಿಕ್ಷಕರ ನೇಮಕ ಮಾಡಿಕೊಂಡು ಪ್ರೌಢಶಾಲಾ ಶಿಕ್ಷಕರ ವೇತನ ಹಾಗೂ ಸೌಲಭ್ಯ ನೀಡಲಾಗುತ್ತಿದೆ.

2016ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟಿಜಿಟಿ ಶಿಕ್ಷಕರ ಬದಲಿಗೆ ಪದವೀಧರ ಪ್ರಾಥಮಿಕ ಶಿಕ್ಷಕ (ಜಿಪಿಟಿ) ಹುದ್ದೆ ಸೃಜಿಸಿ ಗಣಿತ ಮತ್ತು ವಿಜ್ಞಾನ ಬೋಧನೆಗೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ. ಇದರಿಂದ ಈ ಹಿಂದೆ ನೇಮಕವಾದ ಪೌಢಶಾಲಾ ಶಿಕ್ಷಕರಿಗೆ(ಟಿಜಿಟಿ) ಈ ಶಾಲೆಗಳಲ್ಲಿ ಕಾರ್ಯಭಾರ ಕಡಿಮೆಯಾದಂತಾಗಿದೆ.

ಪ್ರಸ್ತುತ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸು ತ್ತಿರುವ ಟಿಜಿಟಿ ಪ್ರೌಢಶಾಲಾ ಶಿಕ್ಷಕ ಪಿಸಿಎಂ ಹುದ್ದೆಯು ಹೆಚ್ಚುವರಿಯಾಗಿದ್ದು, ಈ ಹುದ್ದೆಯನ್ನು ಸರಕಾರ ಪ್ರೌಢಶಾಲೆಗೆ ಮೂರು ವರ್ಷದಲ್ಲಿ ಮರು ಹೊಂದಾಣಿಕೆ ಮಾಡುವುದಾಗಿ 2019ರಲ್ಲಿ ಆದೇಶ ಹೊರಡಿಸಿತ್ತು. ಕೆಲವು ಶಿಕ್ಷಕರಿಗೆ ಮಾತ್ರ ಪ್ರೌಢಶಾಲೆಗಳಿಗೆ ಮರು ಹೊಂದಾಣಿಕೆ ಮಾಡಲಾಯಿತು. ಅನಂತರದಲ್ಲಿ ಅಲ್ಲಿಂದ ಇಲ್ಲಿವರೆಗೆ ಮರು ಹೊಂದಾಣಿಕೆ ಪ್ರಕ್ರಿಯೆಯೇ ನಡೆದಿಲ್ಲ. ಕೆಲವು ಶಿಕ್ಷಕರು ಪರೀಕ್ಷೆ ಬರೆದು ಭಡ್ತಿ ಪಡೆದರೆ ಇನ್ನೂ ಕೆಲವರು ಮರು ಹೊಂದಾಣಿಕೆಯಲ್ಲಿ ಪ್ರೌಢಶಾಲೆಗೆ ಸೇರಿದ್ದಾರೆ. ಏಳು ಸಾವಿರ ಶಿಕ್ಷಕರಲ್ಲಿ ಈಗ ಸುಮಾರು ಮೂರು ಸಾವಿರ ಶಿಕ್ಷಕರು ಹೆಚ್ಚುವರಿಯಾಗಿ ಉಳಿದಂತಾಗಿದೆ.

ಸರಕಾರ ಪ್ರೌಢಶಾಲಾ ಪಿಸಿಎಂ ಶಿಕ್ಷಕರ ನೇಮಕಾತಿಗೂ ಮುನ್ನ ಈ ಶಿಕ್ಷಕರಿಗೆ ಸರಿಸಮನಾದ ಕಾರ್ಯಭಾರ ಇರುವ ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಹೊಂದಾಣಿಕೆ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಹೊಸ ನೇಮಕಾತಿಗೆ ತಯಾರಿ
ಈ ಮಧ್ಯೆ ಸರಕಾರ ಈಗ ಮತ್ತೆ 2,500 ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಮುಂದಾಗಿದೆ. ಅದರಲ್ಲಿ 826 ಪಿಸಿಎಂ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆದಿದೆ.

ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.
-ಬಿ.ಸಿ. ನಾಗೇಶ, ಶಿಕ್ಷಣ ಸಚಿವ

– ವಿನಾಯಕ ಜಿ. ನಾಯ್ಕ, ತಾಳಮಕ್ಕಿ

Advertisement

Udayavani is now on Telegram. Click here to join our channel and stay updated with the latest news.

Next