ದಾವಣಗೆರೆ: ಶೈಕ್ಷಣಿಕ ವರ್ಷ ಪ್ರತೀ ಬಾರಿ ಆರಂಭವಾದಗಲೂ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ ಸಮಸ್ಯೆ ಕಾಡುತ್ತಿದ್ದುದ್ದನ್ನು ತಪ್ಪಿಸಲು ಈ ಬಾರಿ ಶಿಕ್ಷಣ ಇಲಾಖೆ ಹೊಸ ಯೋಜನೆ ರೂಪಿಸಿ, ಅದರಲ್ಲಿ ಯಶಸ್ವಿ ಸಹ ಆಗಿದೆ.
ಈ ಬಾರಿ ನೇರ ಶಾಲೆಗಳಿಂದಲೇ ಮಾಹಿತಿ ಪಡೆದು ಮಕ್ಕಳಿಗೆ ಪಠ್ಯಪುಸ್ತಕ ಹಂಚಿಕೆಗೆ ಆನ್‌ಲೈನ್ ವ್ಯವಸ್ಥೆ ಮಾಡಿದ್ದು, ಇದೀಗ ಶಾಲೆ ಆರಂಭಕ್ಕೆ 15 ದಿನ ಇರುವಾಗಲೇ ಪಠ್ಯಪುಸ್ತಕಗಳು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ತಲುಪಿವೆ. ಶಾಲೆ ಆರಂಭದ ಮೊದಲ ದಿನದಿಂದಲೇ ಪಠ್ಯಪುಸ್ತಕ ವಿತರಣೆಗೆ ಅನುಕೂಲವಾಗುವಂತೆ ಈ ಬಾರಿ ಕ್ರಮ ವಹಿಸಲಾಗಿದೆ. ಶಿಕ್ಷಣ ಇಲಾಖೆ ನೀಡಿದ ಮಾಹಿತಿ ಅನ್ವಯ ಈಗಾಗಲೇ ಶೇ. 80ರಷ್ಟು ಪುಸ್ತಕ ಪೂರೈಕೆ ಆಗಿವೆ.
ವಿದ್ಯಾರ್ಥಿಗಳ ಸಾಧನೆ ತಿಳಿಯಲು ಇದೇ ಮೊದಲ ಬಾರಿಗೆ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದ್ದು, ಇದೇ ಜಾಲತಾಣದ ಮೂಲಕ ವಿದ್ಯಾರ್ಥಿಗಳ ಪುಸ್ತಕ, ಸಮವಸ್ತ್ರ, ಶೂಗಳ ಬೇಡಿಕೆ ಸಹ ಪಡೆಯಲಾಗುತ್ತಿದೆ. ts.karnataka.gov.inನಲ್ಲಿ ಈ ಎಲ್ಲಾ ಮಾಹಿತಿ ನೀಡಲಾಗಿದೆ.
ಮೊದಲೆಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ, ಅಗತ್ಯ ಇರುವ ಪಠ್ಯಪುಸ್ತಕಗಳ ಬೇಡಿಕೆ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನೀಡಬೇಕಿತ್ತು. ಆ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ, ಅಗತ್ಯ ಪುಸ್ತಕ ತರಿಸಿ ಕೊಡುತ್ತಿದ್ದರು. ಪಠ್ಯಪುಸ್ತಕ ಬರುವ ವೇಳೆಗೆ ಕೆಲವೊಮ್ಮೆ ಅರ್ಧ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿ ಪ್ರಕಟವಾಗಿರುತ್ತಿತ್ತು. ಈ ಬಾರಿ ಅಂತಹ ತಪ್ಪು ಆಗಲು ಅವಕಾಶ ಮಾಡಿಕೊಟ್ಟಿಲ್ಲ.
ಜಿಲ್ಲೆಯಲ್ಲಿ ಒಟ್ಟು 806 ಕಿರಿಯ ಪ್ರಾಥಮಿಕ, 1,204 ಹಿರಿಯ ಪ್ರಾಥಮಿಕ ಶಾಲೆ, 518 ಪ್ರೌಢಶಾಲೆ ಸೇರಿ ಒಟ್ಟಾರೆ 2,528 ಶಾಲೆಗಳಿವೆ. ಈ ಪೈಕಿ ಶಾಶ್ವತ ಅನುದಾನರಹಿತ ಶಾಲೆಗಳ ಸಂಖ್ಯೆ 646. ಅನುದಾನಿತ 501 ಶಾಲೆಗಳಿವೆ. ಸರ್ಕಾರಿ ಶಾಲೆಗಳ ಸಂಖ್ಯೆ 1563. ಅಲ್ಲಿಗೆ ಜಿಲ್ಲೆಯ ಒಟ್ಟಾರೆ 2528 ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ ಮಕ್ಕಳಿಗೆ ಪುಸ್ತಕದ ಅವಶ್ಯಕತೆ ಇದೆ. ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಲಾಗುತ್ತದೆ. ಖಾಸಗಿ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು ಹಣ ಕೊಟ್ಟು ಪುಸ್ತಕ ಖರೀದಿಸಬೇಕು.
ಇದೀಗ ಜಿಲ್ಲೆಯ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪುಸ್ತಕದ ದಾಸ್ತಾನು ತಲುಪಿದೆ. ಶಾಲಾ ಮುಖ್ಯೋಪಾಧ್ಯಾಯರಿಗೆ ಪುಸ್ತಕ ರವಾನಿಸುವ ಕಾರ್ಯ ಸಹ ಆರಂಭವಾಗಿದೆ. ಶಾಲೆ ಆರಂಭವಾದ ದಿನದಂದೇ ಮಕ್ಕಳು ತಮ್ಮ ಪಠ್ಯಪುಸ್ತಕ ಪಡೆಯಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೋದಂಡರಾಮ ಪತ್ರಿಕೆಗೆ ತಿಳಿಸಿದ್ದಾರೆ. ಇದೇ ರೀತಿ ಸಮವಸ್ತ್ರ, ಶೂ ವಿತರಣೆ ಸಹ ನಡೆಯಲಿದೆ ಎಂದು ಅವರು ಹೇಳುತ್ತಾರೆ.