Advertisement

300 ವಿದ್ಯಾರ್ಥಿಗಳಿಗೆ ಸರಬರಾಜಾಗಿಲ್ಲ ಪಠ್ಯಪುಸ್ತಕ 

03:31 PM Nov 09, 2017 | Team Udayavani |

ಪುತ್ತೂರು: ಮಿಷನ್‌ 95+ ಯೋಜನೆಯನ್ನು ಜಾರಿಗೆ ತಂದದ್ದು ನಾವೇ. ಆದರೆ ಇದರ ಯಶಸ್ಸಿಗೆ ಹಿಂದೆ ಬೀಳಲು ಕೂಡ ನಾವೇ ಕಾರಣವಾದರೆ ಹೇಗೆ?

Advertisement

ಪುತ್ತೂರು ತಾಲೂಕಿನ ಪ್ರಾಥಮಿಕ ಶಾಲೆಯ 300 ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯಪುಸ್ತಕ ಸರಬರಾಜಾಗದ ಹಿನ್ನೆಲೆಯಲ್ಲಿ ಬುಧವಾರ ನಡೆದ ತಾ.ಪಂ. ಮಾಸಿಕ ಕೆಡಿಪಿ ಸಭೆಯಲ್ಲಿ ಈ ಪ್ರಶ್ನೆ ಮೂಡಿಬಂದಿತು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ನಿರ್ಲಕ್ಷ್ಯ ಯಾಕೆ ?
ವಿಷಯ ಪ್ರಸ್ತಾಪಿಸಿದ ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಗೌಡ ಮಾತನಾಡಿ, ರಾಮಕುಂಜ ಶಾಲೆಯಲ್ಲಿ 59 ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯಪುಸ್ತಕ ಸಿಕ್ಕಿಲ್ಲ. ತಾಲೂಕಿನಲ್ಲಿ ಇಂತಹ ಎಷ್ಟು ಮಕ್ಕಳಿಗೆ ಪುಸ್ತಕ ಸಿಕ್ಕಿಲ್ಲ. ಇಲಾಖೆಯ ಇಂತಹ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳನ್ನು ಬಲಿ ನೀಡುವುದು ಯಾಕೆ? ಮಿಷನ್‌ 95+ ಯೋಜನೆಯನ್ನು ಹಮ್ಮಿಕೊಂಡು, ಪಠ್ಯ ಪುಸ್ತಕ ನೀಡದೇ ಇರುವುದು ಸರಿಯಲ್ಲ. ಹೀಗಿರುವಾಗ ಶೇ. 100 ಫಲಿತಾಂಶ ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ, ತಾಲೂಕಿನಲ್ಲಿ 300 ವಿದ್ಯಾರ್ಥಿಗಳಿಗೆ ಪುಸ್ತಕ ಸಿಗಲು ಬಾಕಿ ಇದೆ. ಈ
ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದೀಗ ಪಠ್ಯಪುಸ್ತಕವನ್ನು ಜಿಲ್ಲೆಗೆ ಕಳುಹಿಸಿಕೊಡಲಾಗಿದೆ. ಶೀಘ್ರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುವುದು ಎಂದರು.

ಶಾಲೆ ಆರಂಭವಾಗಿ ಆರು ತಿಂಗಳು ಕಳೆಯಿತು. ಇದಕ್ಕೆ ಮೊದಲು ಜೆರಾಕ್ಸ್‌ ಮಾಡಿಯಾದರೂ ನೀಡಬಹುದಿತ್ತು.
ವಾರದೊಳಗೆ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ತಲುಪಿಸಿ ಎಂದು ಸಭೆಯಲ್ಲಿ ಸೂಚಿಸಲಾಯಿತು.

Advertisement

ಅತಿಥಿ ಶಿಕ್ಷಕರಿಗೆ ವೇತನ ನೀಡಿಲ್ಲ
ಉಪಾಧ್ಯಕ್ಷೆ ರಾಜೇಶ್ವರಿ ಮಾತನಾಡಿ, ಅತಿಥಿ ಶಿಕ್ಷಕರಿಗೆ ವೇತನ ನೀಡಿಲ್ಲ ಎಂಬ ದೂರು ಬಂದಿದೆ. ಯಾವ ಕಾರಣಕ್ಕಾಗಿ ವೇತನ ನೀಡಿಲ್ಲ ಎಂದು ಪ್ರಶ್ನಿಸಿದರು.

ಉತ್ತರಿಸಿದ ಬಿಇಒ, ಇತ್ತೀಚೆಗೆ ಡಿಡಿಪಿಐ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಶೀಘ್ರದಲ್ಲಿ ವೇತನ ಪಾವತಿಸುವ ಸಾಧ್ಯತೆ ಇದೆ ಎಂದರು.ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ  ಜಗದೀಶ್‌ ಮಾತನಾಡಿ, ತತ್‌ಕ್ಷಣ ಇದನ್ನು ಫಾಲೋಅಪ್‌ ಮಾಡಿ. ಅತಿಥಿ ಶಿಕ್ಷಕರನ್ನು ದುಡಿಸಿಕೊಂಡು, ವೇತನ ನೀಡಲಿಲ್ಲ ಎಂದು ಆಗುವುದು ಬೇಡ. ಅಲ್ಲದೇ ಅತಿಥಿ ಶಿಕ್ಷಕರು ಅರ್ಧದಲ್ಲಿ ಶಾಲೆಯಿಂದ ಹೋದರೆ, ಪಾಠ ಪ್ರವಚನಕ್ಕೆ ತೊಂದರೆಯಾದೀತು. ಇದಕ್ಕೆ ಅವಕಾಶ ನೀಡಬೇಡಿ ಎಂದು ಕಿವಿಮಾತು ಹೇಳಿದರು.

ಶಾಂತಿನಗರ ಶಾಲಾ ವಿದ್ಯಾರ್ಥಿಯೊಬ್ಬ ಪ್ರಧಾನಿಗೆ ಪತ್ರ ಬರೆದಿದ್ದಾನೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಮುಕುಂದ ಪ್ರಶ್ನಿಸಿದರು. ಉತ್ತರಿಸಿದ ಬಿಇಒ, ಮೂರು ದಿನಕ್ಕೊಮ್ಮೆ ಸಿಆರ್‌ಪಿಯನ್ನು ನಿಯೋಜನೆ ಮಾಡಲಾಗಿದೆ ಎಂದರು.

ಬಜತ್ತೂರು ಕಡಬದಿಂದ ಹೊರಕ್ಕೆ
ಕಡಬ ತಾಲೂಕು ರಚನೆಯ ಬಗ್ಗೆ ಜಿಲ್ಲಾಧಿಕಾರಿಗಳ ಹಂತದಲ್ಲಿ ಕ್ರಮ ಜರಗಿಸಲಾಗುತ್ತಿದೆ. ಬಜತ್ತೂರನ್ನು ಕಡಬದಿಂದ ಹೊರಕ್ಕೆ ಇಡಲಾಗಿದೆ ಎಂದು ತಹಶೀಲ್ದಾರ್‌ ಅನಂತಶಂಕರ ಮಾಹಿತಿ ನೀಡಿದರು.

ಸರಕಾರಿ ಆಸ್ಪತ್ರೆ ಬಗ್ಗೆ ದೂರು
ಸರಕಾರಿ ಆಸ್ಪತ್ರೆಯ ಬಗ್ಗೆ ಪ್ರಶ್ನಿಸಿದ ಅಧ್ಯಕ್ಷೆ ಭವಾನಿ ಚಿದಾನಂದ್‌, ಆಸ್ಪತ್ರೆ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದೆ. ಹಿಂದಿನ ತಿಂಗಳು ಎಷ್ಟು ಹೆರಿಗೆ ಮಾಡಿಸಲಾಗಿದೆ ಎಂದರು ಪ್ರಶ್ನಿಸಿದರು. ಉತ್ತರಿಸಿದ ಆಸ್ಪತ್ರೆ ಆಡಳಿತಾಧಿಕಾರಿ, ಹಿಂದಿನ ತಿಂಗಳು 24 ಗರ್ಭಿಣಿಯರು ಆಸ್ಪತ್ರೆಗೆ ಬಂದಿದ್ದು, 9 ಸಿಜೇರಿಯನ್‌ ಆಗಿದೆ ಎಂದರು. ಹಾಗಾದರೆ ಹೆರಿಗೆಗೆ ಸುಳ್ಯಕ್ಕೆ ಕಳುಹಿಸುವುದು ಯಾಕೆ ಎಂದು ಅಧ್ಯಕ್ಷೆ ಮರು ಪ್ರಶ್ನಿಸಿದರು. ಹೆಚ್ಚಾಗಿ ಪುತ್ತೂರು ಆಸ್ಪತ್ರೆಯಲ್ಲಿ ಸಾಧ್ಯವಾಗದಿದ್ದರೆ ಮಂಗಳೂರಿನ ಲೇಡಿಗೋಷನ್‌ಗೆ ಕಳುಹಿಸಲಾಗುತ್ತಿದೆ. ಬಳಿಕ ಅವರಿಚ್ಛೆಯಂತೆ ತೆರಳುತ್ತಾರೆ ಎಂದರು. ಪ್ರತಿಕ್ರಿಯಿಸಿದ ಅಧ್ಯಕ್ಷೆ, ಸರಕಾರಿ ಆಸ್ಪತ್ರೆಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ದೂರು ಬರುತ್ತಿದೆ. ದೂರು ಬಾರದ ಹಾಗೇ ಕೆಲಸ ಮಾಡಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next