ಬೆಂಗಳೂರು: ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಶೇ. 54.74ರಷ್ಟು ಪಠ್ಯಪುಸ್ತಕಗಳನ್ನು ಪೂರೈಸಲಾಗಿದ್ದು, ಇನ್ನುಳಿದ ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ 20 ದಿನಗಳಲ್ಲಿ ಪಠ್ಯ ಪುಸಕ್ತಗಳ ಪೂರೈಕೆ ಕಾರ್ಯ ಪೂರ್ಣವಾಗಲಿದೆ ಎಂದು ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಈ ವಿಚಾರವಾಗಿ ಎ.ಎ.ಸಂಜೀವ್ ನಾರಾಯಣ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾ| ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರಕಾರಿ ವಕೀಲರು, ಪ್ರಮಾಣಪತ್ರ ಸಲ್ಲಿಸಿ, ಪಠ್ಯ ಪುಸ್ತಕ ಮುದ್ರಣ ಕಾರ್ಯ ಸಾಗಿದೆ. ಈಗಾಗಲೇ ಶೇ.54.74ರಷ್ಟು ಪಠ್ಯ ಪುಸ್ತಕಗಳನ್ನು ಶಾಲೆಗಳಿಗೆ ಪೂರೈಸ ಲಾಗಿದೆ. ಶೇ.70.08ರಷ್ಟು ಮುದ್ರಣ ಕಾರ್ಯ ಮುಗಿದಿದೆ. ಇನ್ನು 20 ದಿನಗಳ ಕಾಲಾವಕಾಶ ನೀಡಿದರೆ ಪಠ್ಯಪುಸ್ತಕ ಪೂರೈಕೆ ಕಾರ್ಯ ಸಂಪೂರ್ಣವಾಗಿ ಮುಕ್ತಾಯವಾ ಗಲಿದೆ. ಅದಕ್ಕೆ ನ್ಯಾಯಾಲಯ ಅನುಮತಿ ನೀಡಬೇಕು ಎಂದು ಕೋರಿದರು. ಅದನ್ನು ದಾಖಲಿಸಿಕೊಂಡ ನ್ಯಾಯ ಪೀಠ, 20 ದಿನಗಳಲ್ಲಿ ಪಠ್ಯಪುಸ್ತಕ ಪೂರೈಕೆ ಕಾರ್ಯ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿತು.
ಇದಕ್ಕೂ ಮೊದಲು ಅರ್ಜಿದಾರರ ಪರ ವಕೀಲರ ಹರೀಶ್ ನರಸಪ್ಪ, ವಾದ ಮಂಡಿಸಿ, ಹಿಂದೆ ನ್ಯಾಯಾ ಲಯ ಎಷ್ಟು ವಿದ್ಯಾರ್ಥಿಗಳ ಬಳಿ ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸಲು ಮೊಬೈಲ್ ಹಾಗೂ ಇನ್ನಿತರ ಸಾಧನಗಳಿಲ್ಲ ಎಂಬ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಸರಕಾರ ಆ ಬಗ್ಗೆ ಏನು ಕ್ರಮ ಕೈಗೊಂಡಿದೆ ಎಂಬ ವಿವರ ನೀಡಬೇಕು ಎಂದರು.
ಅದಕ್ಕೆ ಸರಕಾರಿ ವಕೀಲರು, ಈಗಾಗಲೇ 9, 10ನೇ ತರಗತಿ ಆರಂಭವಾಗಿದ್ದು, ಉಳಿದ ತರಗತಿಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹಾಗಾಗಿ ಈ ಹಂತದಲ್ಲಿ ಅದನ್ನು ಪರಿಗಣಿಸುವ ಅಗತ್ಯವಿಲ್ಲ ಎಂದರು.