Advertisement

ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ಅತ್ಯಗತ್ಯ: ಚಕ್ರವರ್ತಿ ಸೂಲಿಬೆಲೆ

12:52 PM May 30, 2022 | Team Udayavani |

ಚಿತ್ರದುರ್ಗ: ಅಧಿಕಾರ ದಾಹಕ್ಕಾಗಿ ಜನರನ್ನು ಒಡೆದು ಆಳುವ ಕೆಲವು ರಾಜಕಾರಣಿಗಳು ದ್ರಾವಿಡರು ಭಾರತದ ಮೂಲ ನಿವಾಸಿಗಳು, ಆರ್ಯರು ಹೊರಗಿನಿಂದ ಬಂದವರು ಎನ್ನುತ್ತಾ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಯುವ ಬ್ರಿಗೇಡ್‌ನ‌ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ವೀರಮದಕರಿ ಸೇವಾ ಟ್ರಸ್ಟ್‌ ಆಯೋಜಿಸಿದ್ದ ‘ಸಮರ್ಪಣ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ವೇದ, ಉಪನಿಷತ್ತು ಹಿಂದೂಗಳದ್ದಲ್ಲ ಎಂದು ಹೇಳುತ್ತಿದ್ದಾರೆ. ಇಂತಹ ರಾಜಕಾರಣಿಗಳಿಗೆ ಓದಿಸಲು ಪಠ್ಯಕ್ರಮ ಬೇಕಿದೆ. ಈ ನಿಟ್ಟಿನಲ್ಲಿ ಪಠ್ಯ ಬದಲಾವಣೆ ಆಗಬೇಕು. ಆರ್ಯರು ಭಾರತೀಯರು ಎಂದು ಅನೇಕ ಸಂಶೋಧನೆಗಳು ಸಾಬೀತು ಮಾಡಿವೆ. ಆದರೂ ಕೇವಲ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ ಎಂದು ಕಿಡಿ ಕಾರಿದರು.

ಈ ಹಿಂದೆ ಅರಬ್ಬರ ದಾಳಿಯಲ್ಲಿ ಕಳೆದುಕೊಂಡ ಅನೇಕ ದೇವಾಲಯಗಳನ್ನು ಇಂದು ಮರಳಿ ಪಡೆಯಲಾಗುತ್ತಿದೆ. ಇದರಿಂದಾಗಿ ಶೃಂಗಾರ ಗೌರಿ ಸಿಕ್ಕಿದ್ದಾಳೆ. ಮುಂದಿನ ದಿನಗಳಲ್ಲಿ ಕಾಶ್ಮೀರದ ಶಾರದೆಯೂ ಭಾರತಕ್ಕೆ ಬಂದು ಸೇರಲಿದ್ದಾಳೆ. ಕಾಶಿ ವಿಶ್ವನಾಥ, ಮಥುರಾ ಶ್ರೀಕೃಷ್ಣ ದೇಗುಲ ಮಾತ್ರವಲ್ಲ. ಪಾಕಿಸ್ತಾನದ ಮುಲ್ತಾನ್‌ನಲ್ಲಿರುವ (ಮೂಲಸ್ಥಾನ) ಸೂರ್ಯ ದೇವಾಲಯವನ್ನು ಪಡೆಯಬೇಕಿದೆ ಎಂದರು.

ಮಥುರಾ, ಕಾಶಿ ದೇಗುಲಗಳನ್ನು ಬಿಟ್ಟುಕೊಡುವಂತೆ ಮನವಿ ಮಾಡಿದರೂ ಕೇಳಲಿಲ್ಲ. ಹಾಗಾಗಿ ಹೋರಾಟದ ಮೂಲಕ ಪಡೆಯಬೇಕಾಯಿತು. ರಾಮನ ದೇಗುಲದ ಸ್ಥಳದಲ್ಲಿದ್ದ ಮಸೀದಿಯನ್ನು ಕೆಡವಿ ಈಗ ಭವ್ಯ ಮಂದಿರ ಕಟ್ಟಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಜಗತ್ತಿನ ಪ್ರಖ್ಯಾತ ಸ್ಥಳಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಕಳೆದುಕೊಂಡ ಹಿಂದೂ ಸಮಾಜದ ದೇವಾಲಯಗಳನ್ನು ಮರಳಿ ಪಡೆಯುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.

ಮಸೀದಿಯ ಜಾಗದಲ್ಲಿ ಶಿವಲಿಂಗ ಪತ್ತೆಯಾದಾಗ ಅದನ್ನು ನೀರಿನ ಕಾರಂಜಿ ಎಂದರು, ಮುಂಜಿ ಮಾಡಿದ ರೀತಿಯಲ್ಲಿದೆ ಎಂದು ಛೇಡಿಸಿದರು. ಆದರೂ ಹಿಂದೂಗಳು ತಾಳ್ಮೆಯಿಂದ ತಮ್ಮ ಸಮಾಜದ ಸ್ವತ್ತನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಮಹಿಳೆಯೊಬ್ಬರು ಕುರಾನ್‌ನಲ್ಲಿನ ಎರಡು ಸಂಗತಿಗಳನ್ನು ಹೇಳಿದ್ದಕ್ಕೆ ಆಕೆಯ ತಲೆ ಕಡಿಯಬೇಕೆಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ, ಇಂತಹ ಮನೋಭಾವ ಹೊಂದಿರುವ ಅನ್ಯ ಧರ್ಮೀಯರು ಹಿಂದೂ ದೇವತೆಗಳನ್ನು ಅಳೆಯುವುದು ಸರಿಯೇ ಎಂದು ಪ್ರಶ್ನಿಸಿದರು.

Advertisement

ಕೋವಿಡ್‌ ಲಸಿಕೆ ಹೊತ್ತ ವಿಮಾನ ಬ್ರೆಜಿಲ್‌ಗೆ ಹಾರಿದಾಗ ಬ್ರೆಜಿಲ್‌ ಪ್ರಧಾನಿ, ಆಂಜನೇಯ ಸಂಜೀವಿನಿ ಬೆಟ್ಟ ಹೊತ್ತು ಬರುವಂತೆ ಭಾಸವಾಗುತ್ತಿದೆ ಎಂದು ಟ್ವೀಟ್‌ ಮಾಡಿದರು. ಆದರೆ ವಿರೋಧ ಪಕ್ಷದವರು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಇಂದು ಶ್ರೀಲಂಕಾ, ಪಾಕಿಸ್ತಾನ, ಚೀನಾ ದೇಶಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಇವುಗಳ ನಡುವೆ ಭಾರತ ಪ್ರಜ್ವಲಿಸುತ್ತಿದೆ. ಇಡೀ ಜಗತ್ತು ಆಸೆಗಣ್ಣಿನಿಂದ ಭಾರತದತ್ತ ನೋಡುತ್ತಿದೆ ಎಂದು ಬಣ್ಣಿಸಿದರು.

ಸೇನೆ ಸೇರೋದು ಹೊಟ್ಟೆ  ಪಾಡಿಗಲ್ಲ

ಒಂದು ಕಾಲದಲ್ಲಿ ಭಾರತದ ಸೈನಿಕರು ಸಾಯಲಿಕ್ಕೆಂದೇ ಸೈನ್ಯ ಸೇರುತ್ತಾರೆ ಎಂಬ ಮನೋಭಾವವಿತ್ತು. ಈಗ ಆ ಕಾಲ ಬಲಾಗಿದ್ದು, ಈಗ ಭಾರತೀಯರು ಸೇನೆ ಸೇರುತ್ತಿರುವುದು ಶತ್ರುಗಳನ್ನು ಕೊಲ್ಲುವುದಕ್ಕೆ ಎಂಬ ಕಾಲ ಬಂದಿದೆ. ಹೊಟ್ಟೆಪಾಡಿಗಾಗಿ ಯಾರೂ ಸೇನೆಗೆ ಸೇರುವುದಿಲ್ಲ. ದೇಶದ ಮೇಲಿನ ಅಭಿಮಾನ ಹಾಗೂ ದೇಶದ ರಕ್ಷಣೆಗೆ ಸೇನೆ ಸೇರುತ್ತಿದ್ದಾರೆ. ಇದಕ್ಕೆ ಇತ್ತೀಚಿನ ದಿನಗಳಲ್ಲಿ ಭಾರತದ ಗಡಿಯಲ್ಲಿ ನಡೆದ ಅನೇಕ ಘಟನೆಗಳೇ ಸಾಕ್ಷಿ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next