ಬೆಳಗಾವಿ: ಪಠ್ಯಪುಸ್ತಕ ಪರಿಷ್ಕಣಾ ಸಮಿತಿಯನ್ನು ಬರ್ಖಾಸ್ತು ಮಾಡಿಲ್ಲ. ವಿಸರ್ಜನೆ ಮಾಡಲಾಗಿದೆ. ಇದನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ಪಷ್ಟ ಹೇಳಿಕೆ ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿಗಳು ಈ ವಿಚಾರವಾಗಿ ಪತ್ರಿಕಾ ಪ್ರಕಟಣೆ ಕೊಟ್ಟಿದ್ದಾರೆ. ಪಠ್ಯ ಪುಸ್ತಕ ರಚನೆ ಮಾಡಲು ಸಮಿತಿ ಆಗಿತ್ತು. ಆ ಸಮಿತಿ ಕೆಲಸ ಆಗಿದೆ ವರದಿ ಸಲ್ಲಿಸಿದ್ದಾರೆ. ಅದು ಸಮಯ ಮುಗಿದ ಮೇಲೆ ವಿಸರ್ಜನೆ ಆಗುತ್ತದೆ. ಹೀಗಾಗಿ ಬರ್ಖಾಸ್ತು ಮಾಡಿಲ್ಲ, ವಿಸರ್ಜನೆ ಆಗಿದೆ. ಸಾಹಿತಿಗಳ ವಿರೋಧ ಹಾಗೂ ಒತ್ತಡ ಕಾರಣ ಎಂಬುದು ಸುಳ್ಳು. ಸಮಯ ಪೂರ್ತಿಯಾಗಿದೆ, ಕೊಟ್ಟಿರುವ ಪಠ್ಯ ಪುಸ್ತಕದಲ್ಲಿ ಯಾರದ್ದಾದರೂ ಅಭ್ಯಂತರ ಇದ್ದರೆ, ಸಮಸ್ಯೆ ಇದ್ದರೆ, ಸಲಹೆ -ಸೂಚನೆ ಇದ್ದರೆ ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದರು.
ನಾವೆಲ್ಲ ಆರೆಸ್ಸೆಸ್ ಮೂಲದವರೇ ಇದ್ದೇವೆ. ಆದರೆ ಸರ್ಕಾರದಲ್ಲಿ ಇದ್ದಾಗ ಸರ್ಕಾರದ ಜವಾಬ್ದಾರಿಗಳನ್ನೆಲ್ಲ ನಿರ್ವಹಿಸುತ್ತೇವೆ. ಎಲ್ಲರನ್ನೂ ಒಂದಾಗಿ ಕರೆದುಕೊಂಡು ದೇಶ ಸೇವೆ ಮಾಡುವುದು ಆರೆಸ್ಸೆಸ್ ಉದ್ದೇಶ. ಸಂಘದಲ್ಲಿದ್ದಾಗ ಅಲ್ಲಿನ ಕೆಲಸ ಮಾಡುತ್ತೇವೆ. ಪಠ್ಯ ಪುಸ್ತಕ ಪರಿಷ್ಕರಣೆಗೂ ಅದಕ್ಕೂ ಗಂಟು ಹಾಕಬಾರದು ಎಂದು ಹೇಳಿದರು.
ಜನರನ್ನು ವಿಶ್ವಾಸ ತೆಗೆದುಕೊಳ್ಳುವ ಕೆಲಸ ಅಗುತ್ತಿದೆ. ಕಾನೂನು ಉಲ್ಲಂಘನೆ ಇನ್ನೊಂದು ಭಾವನೆಗೆ ಪ್ರಚೋದನೆ ಮಾಡುವ ಕೆಲಸ ಆಗುತ್ತಿದ್ದರೆ, ಸಂಬಂಧಿಸಿದ ಪೊಲೀಸರಿಗೆ ದೂರು ನೀಡಲು ಸರ್ಕಾರ ತಿಳಿಸಿದೆ. ಯಾವುದೇ ಕಾರಣಕ್ಕೂ ಸಮಾಜದಲ್ಲಿ ಒಡಕು ಉಂಟು ಮಾಡಲು ನಮ್ಮ ಸರ್ಕಾರದಲ್ಲಿ ಅವಕಾಶ ಇಲ್ಲ. ನಮ್ಮ ಸರ್ಕಾರ ಉತ್ತಮ ಕಾರ್ಯ ಮಾಡುತ್ತಿದೆ ಇಲ್ಲಿ ಯಾವುದೇ ಗೊಂದಲ, ಸಮಸ್ಯೆ ಇಲ್ಲ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಹಿಣೆಗಾರರನ್ನಾಗಿ ಮಾಡುವಂತಿಲ್ಲ. ಅದಕ್ಕಾಗಿ ಒಂದು ಸಮಿತಿ ಮಾಡಿದ್ಸರಿಂದ ಎಲ್ಲ ಸಂಗತಿಗಳು ಸಮಿತಿಗೆ ಸಂಬಂಧಿಸಿದವು. ವ್ಯಕ್ತಿಗತ ಚರ್ಚೆಗಿಂತ ವಿಚಾರ ಆಧಾರಿತ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.