Advertisement

ಪಠ್ಯ ಪುಸ್ತಕ ಪರಿಷ್ಕರಣೆ ರದ್ದು, ಸಿಎಂ ರಾಜೀನಾಮೆ ಆಗ್ರಹಿಸಿ ಕಾಂಗ್ರೆಸ್‌ ಧರಣಿ

09:35 PM Jun 09, 2022 | Team Udayavani |

ಬೆಂಗಳೂರು: ನಾಡಿನ ದಾರ್ಶನಿಕರು ಹಾಗೂ ಮಹಾನ್‌ ಚೇತನಗಳಿಗೆ ಅಪಮಾನ ಮಾಡಿ, ಇತಿಹಾಸ ತಿರುಚಿರುವ ಪಠ್ಯ ಪುಸ್ತಕ  ಪರಿಷ್ಕರಣೆಯನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿಧಾನಸೌಧ ಆವರಣದ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ  ಕಾಂಗ್ರೆಸ್‌ ಶಾಸಕರು ಗುರುವಾರ ಧರಣಿ ನಡೆಸಿದರು.

Advertisement

ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವ ವಹಿಸಿದ್ದು, ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಸಹಿತ ಹಲವು ಶಾಸಕರು ಹಾಗೂ ಮುಖಂಡರು ಭಾಗಿಯಾಗಿದ್ದರು.

ಸಿದ್ದರಾಮಯ್ಯ ಮಾತನಾಡಿ, ರೋಹಿತ್‌ ಚಕ್ರತೀರ್ಥ  ಪರಿಷ್ಕರಿಸಿರುವ ಪಠ್ಯಕ್ರಮವನ್ನು ವಿರೋಧಿಸಿ ಸಾಂಕೇತಿಕವಾಗಿ ಇಂದು ಮುಷ್ಕರ ನಡೆಸುತ್ತಿದ್ದೇವೆ.  ಸಮಿತಿಯನ್ನು ವಿಸರ್ಜಿಸಿದ ಮೇಲೆ ಆ ಸಮಿತಿ ಶಿಫಾರಸು ಮಾಡಿದ ಪಠ್ಯವನ್ನು ಪಠ್ಯವನ್ನು ಮಕ್ಕಳಿಗೆ ಬೋಧನೆ ಮಾಡಬಾರದು ಎಂದು ಆಗ್ರಹಿಸಿದರು.

ಶಿಕ್ಷಣ ಸಚಿವ ನಾಗೇಶ್‌ ಅವರು  ಪರಿಷ್ಕೃತ ಪಠ್ಯವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ಹೇಳಿದ್ದರು. ಗಣ್ಯರಿಂದ  ಪ್ರತಿರೋಧ ವ್ಯಕ್ತವಾದ ಮೇಲೆ ಕೆಲವು ವಿಚಾರಗಳನ್ನು ಪುನರ್‌ ಪರಿಶೀಲಿಸುತ್ತೇವೆ, ಇನ್ನೊಂದು ತಿಂಗಳಲ್ಲಿ ಪಠ್ಯಪುಸ್ತಕ ಮುದ್ರಣ ಮಾಡಿ ಮಕ್ಕಳಿಗೆ ನೀಡುತ್ತೇವೆ ಎಂದಿದ್ದಾರೆ.  ಚರಿತ್ರೆ ತಿರುಚಿರುವುದು ಸತ್ಯ ಹಾಗೂ ಆರೆಸ್ಸೆಸ್‌ ನಿರ್ದೇಶನದಂತೆ ಪಠ್ಯ ರಚನೆ ಮಾಡಲಾಗಿದೆ ಎಂಬುದನ್ನು ಇವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಬಹುದು ಎಂದರು.

ಸಿಎಂ ರಾಜೀನಾಮೆ ನೀಡಲಿ :

Advertisement

ಡಿ.ಕೆ.ಶಿವಕುಮಾರ್‌ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಸಮಾಜದ ಶಾಂತಿ ಕೆಡಿಸಿ, ದೇಶ, ವಿದೇಶಗಳಲ್ಲಿ ಕರ್ನಾಟಕದ ಗೌರವ ಹರಾಜು ಹಾಕುತ್ತಿರುವ ಬಸವರಾಜ ಬೊಮ್ಮಾಯಿ ಅವರು ತತ್‌ಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಸವಣ್ಣನವರಿಂದ ಹಿಡಿದು ಅಂಬೇಡ್ಕರ್‌ ವರೆಗೂ, ನಾರಾಯಣ ಗುರುಗಳಿಂದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ಸ್ವಾಮಿ, ಮುರುಘಾ ಮಠದ ಸ್ವಾಮಿಗಳು, ಭಗತ್‌ ಸಿಂಗ್‌ ವರೆಗೂ ಯಾರೊಬ್ಬರನ್ನೂ ಬಿಡದೆ ಈ ಸರಕಾರ ಅವಮಾನಿಸಿದೆ ಎಂದು ದೂರಿದರು.

ಇದು ಜನರ ಸ್ವಾಭಿಮಾನದ ಪ್ರಶ್ನೆ. ಹೀಗಾಗಿ ಮಠ, ಸಂಘಟನೆಗಳು ಸಹಿತ ಎಲ್ಲ ವರ್ಗದ ಜನರೂ ಧ್ವನಿ ಎತ್ತಬೇಕು ಎಂದು ಕರೆ ನೀಡುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next