Advertisement

ಪುಂಡು ಪೋಕರಿಗಳು ಪಠ್ಯ ಪುಸ್ತಕ ರೂಪಿಸುವಂತಾಗಿದೆ: ಬಿ.ಕೆ. ಹರಿಪ್ರಸಾದ್‌ ವಾಗ್ದಾಳಿ

02:34 PM Jun 15, 2022 | Team Udayavani |

ತೀರ್ಥಹಳ್ಳಿ: ಪಠ್ಯ ಪುಸ್ತಕವನ್ನು ಸಮರ್ಥರಾದ ಶಿಕ್ಷಣ ತಜ್ಞರು, ಸಮಾಜಪರ ಚಿಂತಕರು ರೂಪಿಸಬೇಕು. ಪುಂಡು ಪೋಕರಿಗಳೆಲ್ಲ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯಲ್ಲಿ ಸೇರಿಕೊಂಡರೆ ಸಮಾಜದಲ್ಲಿ ಅಶಾಂತಿ ಉಂಟಾಗುವುದು ಸಹಜ, ಪಠ್ಯ ಪುಸ್ತಕ ವಾಪಾಸ್ಸು ಪಡೆಯುವ ತನಕ ಹೋರಾಟ ಮುಂದುವರೆಯಲಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯ ಪುಸ್ತಕಗಳು ಈ ದೇಶದ ನೆಲ ಜಲದ ಮಹಾನ್‌ ಸಾಧಕರ ಜೀವನವನ್ನು ಕಟ್ಟಿಕೊಡುವ ಮೂಲಕ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತವೆ. ಪಠ್ಯ ಪುಸ್ತಕವನ್ನು ಸಮರ್ಥರಾದ ಶಿಕ್ಷಣ ತಜ್ಞರು, ಸಮಾಜಪರ ಚಿಂತಕರು ರೂಪಿಸಬೇಕು. ರೋಹಿತ್‌ ಚಕ್ರತೀರ್ಥ ಯಾವ ಶಿಕ್ಷಣ ತಜ್ಞನೂ ಅಲ್ಲ ಈತ ನಾಗಪುರ ಯೂನಿವರ್ಸಿಟಿ ಕೊಡುಗೆ ಅಷ್ಟೇ. ಅವರಿಗೆ ಯಾವತ್ತೂ ಈ ದೇಶದ ಸಂವಿಧಾನ ಬಹುಸಂಸ್ಕೃತಿಯ, ಜೀವನ ಪದ್ಧತಿಯ ವಿವಿಧತೆಯಲ್ಲಿ ಏಕತೆ ಎಂಬ ತತ್ವದಲ್ಲಿ ನಂಬಿಕೆಯೇ ಇಲ್ಲ. ಅದು ಪದೇ ಪದೇ ಸಾಭೀತಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲೂ ಕೂಡ ಸಮಾಜ ವಿರೋಧಿ ಧೋರಣೆಯನ್ನು ಮುಂದುವರೆಸಲಾಗಿದೆ ಎಂದು ಹರಿಹಾಯ್ದರು.

ಗೃಹಸಚಿವ ಆರಗ ಜ್ಞಾನೇಂದ್ರ ಕುರಿತು ಮಾತನಾಡಿದ ಅವರು ರಾಜ್ಯ ಕಂಡಂತಹ ಅತ್ಯಂತ ದುರ್ಬಲ ಗೃಹಮಂತ್ರಿ ಆರಗ ಜ್ಞಾನೇಂದ್ರ. ಅವರಿಗೆ ನೈತಿಕತೆ ಇದ್ದಿದ್ದರೆ ಅವರ ಸುಪರ್ದಿಯಲ್ಲಿ ಬರುವ ಎಸ್. ಐ ನೇಮಕಾತಿ ಹಗರಣದಲ್ಲಿ ಇಷ್ಟು ಹೊತ್ತಿಗಾಗಲೇ ರಾಜಿನಾಮೆ ನೀಡಬೇಕಿತ್ತು. ಮೈಸೂರು ಅತ್ಯಾಚಾರ ಪ್ರಕರಣ, ಶಿವಮೊಗ್ಗ ಗಲಭೆ, ಪೊಲೀಸ್‌ ಕುರಿತಾದ ಅಗೌರವರ ಹೇಳಿಕೆಯಲ್ಲಿ ಅವರ ದೌರ್ಬಲ್ಯವನ್ನು ಜಗಜ್ಜಾಹೀರು ಮಾಡಿಕೊಂಡಿದ್ದಾರೆ. ಅಲ್ಲದೇ ಕುವೆಂಪು ಇಡೀ ದೇಶದ ಆಸ್ತಿ ವಿಪರ್ಯಾಸ ಎಂದರೆ ಕುವೆಂಪುರನ್ನು ನಿಂದಿಸಿದಾಗ ಅವರ ತಾಲ್ಲೂಕು ಹಾಗೂ ಜಿಲ್ಲೆಯವರಾಗಿ ಖಂಡಿಸಬಹುದಿತ್ತು. ಆದರೆ ಆರಗ ಜ್ಞಾನೇಂದ್ರ ಮೌನವಾಗಿರುವ ಮೂಲಕ ಕುವೆಂಪುಗೆ ಅವಮಾನ ಮಾಡಿದ್ದಾರೆ. ಮಾತ್ರವಲ್ಲದೇ ಪರೋಕ್ಷವಾಗಿ ರೋಹಿತ್‌ ಚಕ್ರತೀರ್ಥನ ಆಲೋಚನೆಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕುಪ್ಪಳ್ಳಿಯಿಂದ ಪಾದಯಾತ್ರೆ !

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಅವರು 70 ವರ್ಷ ಕಾಂಗ್ರೆಸ್‌ ಕಷ್ಟಪಟ್ಟು ಬೆಳೆಸಿದ ದೇಶವನ್ನು ಮೋದಿ ವಿನಾಶದತ್ತ ಕೊಂಡೊಯ್ಯುತ್ತಿದ್ದಾರೆ. ಸದಾಕಾಲ ಧರ್ಮದ ಅಮಲಿಗೆ ಯುವಜನತೆಯನ್ನು ದೂಡುತ್ತಾ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿದ್ದಾರೆ. ಬುಲ್ಡೋಜರ್‌ ಸಂಸ್ಕೃತಿ ದೇಶದ ಎಲ್ಲಾ ಕಡೆ ಕಂಡುಬರುತ್ತಿದೆ. ಈಗ ನೂಪೂರ್‌ ಶರ್ಮಾ, ಜಿಂದಾಲ್‌ ಎಂಬ ಅವಿವೇಕಿಗಳು ಎಬ್ಬಿಸಿದ ರಾದ್ದಾಂತವನ್ನು ಮರೆಮಾಚಲು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣವನ್ನು ಮುನ್ನೆಲೆಗೆ ತಂದು ರಾಹುಲ್‌ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಿ ಪ್ರಚಾರ ಮಾಡಲಾಗುತ್ತಿದೆ. ಕಾಂಗ್ರೆಸ್‌ ಹೋರಾಟದಿಂದ ಎದ್ದು ಬಂದ ಪಕ್ಷ ಓಡಿ ಹೋಗುವ ಪ್ರಶ್ನೆ ಇಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next