Advertisement

ಟಿಇಟಿ ಪರೀಕ್ಷೆ : ಸೋಂಕಿತರಿಗೂ ಪ್ರತ್ಯೇಕ ಅವಕಾಶ

01:24 PM Oct 01, 2020 | sudhir |

ಬಾಗಲಕೋಟೆ: ಕೋವಿಡ್‌-19 ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅ.4ರಂದು ನಡೆಯಲಿರುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಗೆ ಎಲ್ಲ ರೀತಿಯ ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿದ ಟಿಇಟಿ-2019 ಪರೀಕ್ಷೆ ಪೂರ್ವ ಸಿದ್ಧತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಟಿಇಟಿ ಪರೀಕ್ಷೆಗಳು ಎರಡು ಅವಧಿಯಲ್ಲಿ ನಡೆಯಲಿದ್ದು, ಬೆಳಗ್ಗೆ ಪತ್ರಿಕೆ-1ಕ್ಕೆ 8 ಪರೀಕ್ಷಾ ಕೇಂದ್ರಗಳು, ಮಧ್ಯಾಹ್ನ ಅವಧಿಯ ಪತ್ರಿಕೆ-2ಕ್ಕೆ 19 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಬೆಳಗಿನ ಅವಧಿಗೆ ಒಟ್ಟು 2795 ಹಾಗೂ ಮಧ್ಯಾಹ್ನದ ಅವಧಿಗೆ 6364 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಪರೀಕ್ಷೆಯಲ್ಲಿ ಎಸ್‌ಒಪಿ ಪ್ರಕಾರ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳ ಸಹಕಾದೊಂದಿಗೆ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿ, ಪೀಠೊಪಕರಣ ಹಾಗೂ ಶೌಚಾಲಯಕ್ಕೆ ಕಡ್ಡಾಯವಾಗಿ ಪರೀಕ್ಷೆ ಹಿಂದಿನ ದಿನ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 1 ಹೆಚ್ಚುವರಿ ಪರೀಕ್ಷಾ ಕೊಠಡಿ ಕಾಯ್ದಿರಿಸಬೇಕು. ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರೀಕ್ಷೆಗೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗಲು ತಿಳಿಸಿ ಆರೋಗ್ಯ ತಪಾಸಣೆಗೆ ಒಳಪಡಿಸಲು ಸೂಚಿಸಿದರು.

ಇದನ್ನೂ ಓದಿ : ಮೈಸೂರು ಡಿಸಿಯಾಗಿ ವರ್ಗಾವಣೆ ರೋಹಿಣಿ ಸಿಂಧೂರಿಗೆ ನೀಡಿದ ಗಿಫ್ಟ್: ಸಾ.ರಾ.ಮಹೇಶ್ ಆರೋಪ

ಜಿಲ್ಲಾ ಕೋವಿಡ್‌ ಸೆಂಟರ್‌ಗೆ ಸ್ಥಳಾಂತರ: ಕೋವಿಡ್‌ ಪಾಸಿಟಿವ್‌ ಆಗಿರುವ ಅಭ್ಯರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶವಿದ್ದು, ಅಂತಹ ಅಭ್ಯರ್ಥಿಗಳಿದ್ದಲ್ಲಿ ಪ್ರತ್ಯೇಕ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಎಲ್ಲ ರೀತಿಯ ವ್ಯವಸ್ಥೆ ಕ್ರಮ ವಹಿಸಬೇಕು. ಅಭ್ಯರ್ಥಿಯು ತಾಲೂಕು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿದ್ದರೆ ಅವರನ್ನು ಜಿಲ್ಲಾ ಕೋವಿಡ್‌ ಕೇರ್‌ ಸೆಂಟರ್‌ಗೆ ಕರೆತರಲು ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಬೇಕು. ಹೋಂ ಐಸೋಲೇಶನ್‌ನಲ್ಲಿ ಇರುವ ಕೋವಿಡ್‌ ಪಾಸಿಟಿವ್‌ ಅಭ್ಯರ್ಥಿಗಳಿದ್ದಲ್ಲಿ ಅಂತ ಅಭ್ಯರ್ಥಿಗಳ ಆರೋಗ್ಯದಲ್ಲಿ ಸುಸ್ಥಿತಿಯಲ್ಲಿರುವ ಬಗ್ಗೆ ವೈದ್ಯಾಧಿಕಾರಿಗಳಿಂದ ಪ್ರಮಾಣಪತ್ರ ಹಾಗೂ ಅಭ್ಯರ್ಥಿಯ ಪಾಲಕ, ಪೋಷಕರ ಅಪಾಯ ಒಪ್ಪಿಗೆ ಪತ್ರ ಪಡೆದು ಅವಕಾಶ ನೀಡಲು ತಿಳಿಸಿದರು.

Advertisement

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ಮುಖ್ಯ ಅಧೀಕ್ಷಕ, ಸ್ಥಾನಿಕ ಜಾಗೃತ ದಳ ಅಧಿಕಾರಿಗಳನ್ನು ನೇಮಿಸಬೇಕು. ಅಲ್ಲದೇ 5 ಜನ ವೀಕ್ಷಕರನ್ನು ನೇಮಿಸಲಾಗುವುದು. ನೇಮಕಗೊಂಡ ಮಾರ್ಗಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು, ಕುಡಿಯುವ ನೀರು ಮನೆಯಿಂದ ತಾವೇ ತರಲು ತಿಳಿಸಬೇಕು ಎಂದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌. ಎಸ್‌. ಬಿರಾದಾರ, ಪರೀಕ್ಷಾ ನೋಡಲ್‌ ಅಧಿಕಾರಿ ಎ.ಕೆ. ಬಸಣ್ಣವರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next