Advertisement

ಪ್ರವೇಶ ಪತ್ರದಲ್ಲಿ ಅಶ್ಲೀಲ ಚಿತ್ರ ಸುದ್ದಿ: ಇಲಾಖೆ ಲೋಪವಲ್ಲ ಶಿಕ್ಷಣ ಇಲಾಖೆ ಸ್ಪಷ್ಟನೆ

11:40 PM Nov 08, 2022 | Team Udayavani |

ಬೆಂಗಳೂರು: ಟಿಇಟಿ-2022 ಪ್ರವೇಶ ಪತ್ರದಲ್ಲಿ ಅಶ್ಲೀಲ ಚಿತ್ರ ಸುದ್ದಿ ಪ್ರಕರಣಕ್ಕೆ ಸಂಬಂಧಿಸಿ ಇಲಾಖೆ ಅಥವಾ ಸರಕಾರದಿಂದ ಉಂಟಾಗಿರುವ ಲೋಪವಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

Advertisement

ಪ್ರತಿ ಅಭ್ಯರ್ಥಿಯು ಟಿಇಟಿ-2022 ಪರೀಕ್ಷೆಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವ ಮುನ್ನ ತಾವೇ ತಮ್ಮ ಯೂಸರ್‌ ಐಡಿ ಹಾಗೂ ಪಾಸ್‌ವರ್ಡ್‌ ಸೃಷ್ಟಿಸಿಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ. ಈ ರೀತಿ ಸೃಷ್ಟಿಸಿಕೊಂಡ ಯೂಸರ್‌ ಐಡಿ ಹಾಗೂ ಪಾಸ್‌ವರ್ಡ್‌ ಮಾಹಿತಿ ಸಂಪೂರ್ಣ ಗೌಪ್ಯ ಹಾಗೂ ಅಭ್ಯರ್ಥಿಯ ಖಾಸಗಿ ಮಾಹಿತಿಯಾಗಿರುತ್ತದೆ. ಇವುಗಳನ್ನು ಬಳಸಿ ಲಾಗಿನ್‌ ಆಗುವುದರ ಮೂಲಕ ಅಭ್ಯರ್ಥಿಯು ತನ್ನ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ಪೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ನಿಗದಿತ ಅಂಕಣದಲ್ಲಿ ಅಪ್‌ಲೋಡ್‌ ಮಾಡಿದ ನಂತರ ಅಭ್ಯರ್ಥಿಯು ತಾನು ನೀಡಿರುವ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡು ಅರ್ಜಿ ಸಬ್‌ಮೀಟ್‌ ಮಾಡಿದ ಬಳಿಕವೇ ನಿಗದಿತ ಅರ್ಜಿ ಶುಲ್ಕ ಪಾವತಿಸಿ, ಆನ್‌ಲೈನ್‌ ಅರ್ಜಿಯ ಪ್ರಿಂಟ್‌ ಪಡೆಯುತ್ತಾರೆ ಎಂದು ಇಲಾಖೆ ತಿಳಿಸಿದೆ.

ಅಭ್ಯರ್ಥಿಯು ತನ್ನ ಅರ್ಜಿಸಂಖ್ಯೆ ಹಾಗೂ ಜನ್ಮದಿನಾಂಕ ನಮೂದಿಸಿ ತನ್ನ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತಾರೆ. ಈ ತಂತ್ರಾಂಶವು ಕೆಎಸ್‌ಡಬ್ಲ್ಯೂ ಎಎನ್‌ ಅಂತರ್ಜಾಲ ಸೌಲಭ್ಯ ಹೊಂದಿದ್ದು, ಕರ್ನಾಟಕ ಸರಕಾರದ ಇ-ಆಡಳಿತ ಇಲಾಖೆಯ ಸ್ಟೇಟ್‌ ಡೇಟಾ ಸೆಂಟರ್‌ (ಎಸ್‌ಡಿಸಿ) ನಿಯಂತ್ರಣದ ಸರ್ವರ್‌ನಲ್ಲಿ ಅಳವಡಿಸಲಾಗಿರುತ್ತದೆ. ಹೀಗಾಗಿ ನಮ್ಮ ಕಚೇರಿಯ ತಂತ್ರಾಂಶವು ಸಂಪೂರ್ಣ ಸುರಕ್ಷಿತವಾಗಿದೆ. ಅಭ್ಯರ್ಥಿಯನ್ನು ಹೊರತುಪಡಿಸಿ ಇತರರು ಅನ್‌ಲೈನ್‌ ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ.

ಏನಿದು ಪ್ರಕರಣ ?
ನ.6ರಂದು ನಡೆದ ಟಿಇಟಿ-2022ರ ಪರೀಕ್ಷೆಯು ರಾಜ್ಯದ ಜಿಲ್ಲೆಗಳಲ್ಲಿನ 781 ಕೇಂದ್ರಗಳಲ್ಲಿ ನಡೆದಿದ್ದು, 3,32,913 ಅಭ್ಯರ್ಥಿಗಳು ಹಾಜರಾಗಿದ್ದಾರೆ. ಶಿವಮೊಗ್ಗದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗಿದ್ದ ಚಿಕ್ಕಮಗಳೂರಿನ ಮಹಿಳಾ ಅಭ್ಯರ್ಥಿಯೊಬ್ಬರು ಶಿವಮೊಗ್ಗದ ಸೈಬರ್‌ ಕೇಂದ್ರವೊಂದರಲ್ಲಿ ಹಾಲ್‌ ಟಿಕೆಟ್‌ ಪ್ರವೇಶ ಪತ್ರ ತೆಗೆದಿದ್ದರು. ಅದರಲ್ಲಿ ಅಭ್ಯರ್ಥಿಯ ಫೋಟೊ ಇರುವ ಜಾಗದಲ್ಲಿ ಅಶ್ಲೀಲ ಚಿತ್ರವಿತ್ತು ಎನ್ನಲಾಗಿದೆ. ಇದೀಗ ಈ ಒಂದು ಪ್ರವೇಶ ಪತ್ರದಲ್ಲಿ ಅಶ್ಲೀಲ ಚಿತ್ರ ಅಳವಡಿಕೆಯಾಗಿರುವುದು ಹೇಗೆ ? ಎಂಬ ಬಗ್ಗೆ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next