Advertisement

ಟೆಸ್ಟ್‌ ವಿಶ್ವಕಪ್‌: ಆಸ್ಟ್ರೇಲಿಯ ಕುಸಿತ

02:21 AM Aug 02, 2019 | Sriram |

ಬರ್ಮಿಂಗ್‌ಹ್ಯಾಮ್‌: ಗುರುವಾರ ಇಲ್ಲಿನ ಎಜ್‌ಬಾಸ್ಟನ್‌ ಅಂಗಳದಲ್ಲಿ ಆರಂಭಗೊಂಡ ಆ್ಯಶಸ್‌ ಕಂ ವಿಶ್ವಕಪ್‌ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯ ತೀವ್ರ ಬ್ಯಾಟಿಂಗ್‌ ಕುಸಿತ ಅನುಭವಿಸಿದೆ. 9 ವಿಕೆಟಿಗೆ 210 ರನ್‌ ಗಳಿಸಿ ಅಂತಿಮ ಅವಧಿಯ ಆಟವನ್ನು ಮುಂದುವರಿಸುತ್ತಿದೆ.

Advertisement

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಳ್ಳುವ ಆಸ್ಟ್ರೇಲಿಯ ನಿರ್ಧಾರವನ್ನು ಇಂಗ್ಲೆಂಡ್‌ ಬೌಲರ್‌ಗಳು 4ನೇ ಓವರಿನಿಂದಲೇ ವಿಫ‌ಲಗೊಳಿಸತೊಡಗಿದರು. ಅಪಾಯಕಾರಿ ಓಪನರ್‌ ಡೇವಿಡ್‌ ವಾರ್ನರ್‌ (2) ಮತ್ತು ಕ್ಯಾಮರೂನ್‌ ಬಾನ್‌ಕ್ರಾಫ್ಟ್ (8) ಅವರನ್ನು ಸ್ಟುವರ್ಟ್‌ ಬ್ರಾಡ್‌ ಪೆವಿಲಿಯನ್ನಿಗೆ ಅಟ್ಟಿದರು. ಆಗ ಕಾಂಗರೂ ಸ್ಕೋರ್‌ ಕೇವಲ 17 ರನ್‌ ಆಗಿತ್ತು.

ಮಧ್ಯಮ ಕ್ರಮಾಂಕದ ಮೇಲೆ ಕ್ರಿಸ್‌ ವೋಕ್ಸ್‌ ಘಾತಕವಾಗಿ ಎರಗಿದರು. ಖ್ವಾಜಾ (13), ಹೆಡ್‌ (35) ಮತ್ತು ವೇಡ್‌ (1) ವಿಕೆಟ್‌ಗಳನ್ನು ಹಾರಿಸಿದರು. 115 ರನ್‌ ಆಗುವಷ್ಟರಲ್ಲಿ ಆಸ್ಟ್ರೇಲಿಯದ 5 ವಿಕೆಟ್ ಉರುಳಿತು. ನಾಯಕ ಟಿಮ್‌ ಪೇನ್‌ (5) ಕೂಡ ತಂಡವನ್ನು ರಕ್ಷಿಸಲು ವಿಫ‌ಲರಾದರು. ಸ್ಕೋರ್‌ 112ಕ್ಕೆ ಏರಿದಾಗ ಬ್ರಾಡ್‌ ಕಾಂಗರೂ ಕಪ್ತಾನನನ್ನು ಔಟ್ ಮಾಡಿದರು.

ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ ಮಾತ್ರ ಇಂಗ್ಲೆಂಡ್‌ ಬೌಲಿಂಗ್‌ ದಾಳಿಗೆ ಜಗ್ಗದೆ ಒಂದು ತುದಿಯಲ್ಲಿ ಕ್ರೀಸ್‌ ಆಕ್ರಮಿಸಿಕೊಂಡು ಹೋರಾಟ ಜಾರಿಯಲ್ಲಿರಿಸಿದರು. ಇವರಿಗೆ ಪೀಟರ್‌ ಸಿಡ್ಲ್ ಉತ್ತಮ ಬೆಂಬಲವಿತ್ತರು. ಸಿಡ್ಲ್ ಕ್ರೀಸಿಗಿಳಿದ ಬಳಿಕ ಸ್ಮಿತ್‌ ಹೆಚ್ಚು ರಕ್ಷಣಾತ್ಮಕ ಆಟಕ್ಕಿಳಿದರು. ಸಿಡ್ಲ್ 44 ರನ್‌ ಮಾಡಿದರೆ, ಸ್ಮಿತ್‌ 85 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್‌ ಪರ ಸ್ಟುವರ್ಟ್‌ ಬ್ರಾಡ್‌ 4, ಕ್ರಿಸ್‌ ವೋಕ್ಸ್‌ 3 ವಿಕೆಟ್ ಉರುಳಿಸಿದರು.

Advertisement

ಆಸೀಸ್‌ಗೆ ಸ್ಯಾಂಡ್‌ ಪೇಪರ್‌ ಸ್ವಾಗತ!
ಮೊದಲ ಆಶ್ಯಸ್‌ ಟೆಸ್ಟ್‌ ಪಂದ್ಯದ ವೇಳೆ ಆಂಗ್ಲ ಕ್ರಿಕೆಟ್ ಅಭಿಮಾನಿಗಳು ಸ್ಮಿತ್‌ ಮತ್ತು ವಾರ್ನರ್‌ಗೆ ಸ್ಯಾಂಡ್‌ ಪೇಪರ್‌ ತೋರಿಸಿ ಅವಮಾನಿಸಿದ್ದಾರೆ. ಜತೆಗೆ ‘ಚೆಂಡು ವಿರೂಪಗೊಳಿಸಿದ ಆಟಗಾರರೇ ನಿಮಗೆ ಸ್ವಾಗತ…’ ಎಂಬ ಬ್ಯಾನರ್‌ ಕೂಡ ಪ್ರದರ್ಶಿಸಿದ್ದಾರೆ.

ಆ್ಯಶಸ್‌ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ ಅಭಿಮಾನಿಗಳಲ್ಲಿ ಶಿಸ್ತಿನಿಂದ ವರ್ತಿಸುವಂತೆ ಮನವಿ ಮಾಡಲಾಗಿತ್ತು. ಆದರೆ ತವರಿನ ವೀಕ್ಷಕರು ಇದನ್ನು ಗಾಳಿಗೆ ತೂರಿದ್ದು, ಸರಣಿಯ ಮೊದಲ ದಿನವೇ ಬಿಸಿ ವಾತಾವರಣ ಕಂಡುಬಂದಿದೆ. ಕಳೆದ ವಿಶ್ವಕಪ್‌ ಕೂಟದ ಭಾರತ ವಿರುದ್ಧದ ಪಂದ್ಯದ ವೇಳೆಯೂ ಸ್ಮಿತ್‌ ಮೋಸಗಾರ ಎಂದು ವೀಕ್ಷಕರು ಕೂಗಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next