Advertisement

ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌: ಭಾರತದ ನಂ. 1 ಸ್ಥಾನ ಇನ್ನಷ್ಟು ಭದ್ರ

11:56 PM Oct 22, 2019 | Team Udayavani |

ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿರುವ ಭಾರತ ಒಟ್ಟು ಐದು ಪಂದ್ಯಗಳಲ್ಲಿ ಭರ್ತಿ 240 ಅಂಕ ಕಲೆಹಾಕಿ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಗೊಳಿಸಿದೆ.

Advertisement

ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತ ಒಟ್ಟು 120 ಅಂಕ ಗಳಿಸಿದೆ. ಪ್ರತಿ ಟೆಸ್ಟ್‌ಗೆ 40 ಅಂಕ ನೀಡಲಾಗುತ್ತದೆ. ಎರಡು ಪಂದ್ಯಗಳ ಟೆಸ್ಟ್‌ ಸರಣಿಯಾಗಿದ್ದರೆ ಪ್ರತಿ ಟೆಸ್ಟ್‌ ಗೆ 60 ಅಂಕ ನೀಡಲಾಗುತ್ತದೆ. ಐದು ಪಂದ್ಯಗಳ ಟೆಸ್ಟ್‌ ಸರಣಿಯಾಗಿದ್ದರೆ ಪ್ರತಿ ಟೆಸ್ಟ್‌ಗೆ ತಲಾ 24 ಅಂಕ ನೀಡಲಾಗುತ್ತದೆ ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ.

ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭ ವಾದ ಬಳಿಕ ಭಾರತ ಅದ್ಭುತ ನಿರ್ವಹಣೆ ನೀಡುತ್ತ ಬಂದಿದೆ. ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲೂ ಟೀಮ್‌ ಇಂಡಿಯಾ ವೈಟ್‌ವಾಶ್‌ ಸಾಧನೆ ಮಾಡಿ ಮೆರೆದಿತ್ತು. ಒಟ್ಟಾರೆಯಾಗಿ ಆಡಿದ ಎರಡು ಟೆಸ್ಟ್‌ ಸರಣಿಗಳಲ್ಲಿ (ಒಟ್ಟು 5 ಪಂದ್ಯ) ಭಾರತ ಗರಿಷ್ಠ 240 ಅಂಕಗಳನ್ನು ಕಲೆಹಾಕಿದೆ.

ಭಾರತದ ಸರಣಿಯೊಂದಿಗೆ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಕಾಲಿರಿಸಿತ್ತು. ಆದರೆ ಭಾರತದ ನೆಲದಲ್ಲಿ ಹೀನಾಯ ಸೋಲಿಗೆ ಗುರಿಯಾಗಿದೆ. ಅಂಕ ಖಾತೆ ತೆರೆಯಲಿಲ್ಲ.

ಬಾಂಗ್ಲಾ ವಿರುದ್ಧವೂ ಪ್ರಾಬಲ್ಯ
ಟೆಸ್ಟ್‌ನಲ್ಲಿ ನಂ.1 ತಂಡವಾದ ಭಾರತ ಮುಂದಿನ ಸರಣಿಯನ್ನು ಬಾಂಗ್ಲಾ ವಿರುದ್ಧ ಆಡಲಿದೆ. ತವರಿನಲ್ಲೇ ನಡೆ ಯುವ ಈ ಎರಡು ಪಂದ್ಯಗಳ ಸರಣಿಯನ್ನು ಗೆದ್ದು ಅಂಕಗಳನ್ನು ಇನ್ನಷ್ಟು ಹೆಚ್ಚಿಸುವ ಇರಾದೆಯಲ್ಲಿದೆ. ಈ ಸರಣಿ ನ. 14ರಿಂದ ಆರಂಭವಾಗಲಿದೆ. ಬಾಂಗ್ಲಾ ವಿರುದ್ಧ ಭಾರತ ಪ್ರಾಬಲ್ಯ ಮೆರೆಯುವುದು ಖಚಿತವೆಂದು ಹೇಳಬಹುದು. ಆದರೆ ಟೆಸ್ಟ್‌ ಪಂದ್ಯ ವಾಗಿರುವ ಕಾರಣ ಬಾಂಗ್ಲಾ ತೀವ್ರ ಪೈಪೋಟಿ ನೀಡುವ ನಿರೀಕ್ಷೆಯಿದೆ.

Advertisement

ಶ್ರೀಲಕಾ ಮತ್ತು ನ್ಯೂಜಿಲ್ಯಾಂಡ್‌ 60 ಅಂಕಗಳೊಂದಿಗೆ ಅನಂತರದ ಸ್ಥಾನದಲ್ಲಿವೆ. ಈ ಎರಡು ತಂಡಗಳ ನಡುವಣ ಎರಡು ಪಂದ್ಯಗಳ ಸರಣಿ 1-1 ಅಂತರದಿಂದ ಸಮಬಲದಲ್ಲಿ ಅಂತ್ಯಗೊಂಡಿತ್ತು. ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯ ತಲಾ 56 ಅಂಕ ಗಳಿಸಿವೆ. ಈ 2 ತಂಡಗಳ ನಡುವಣ 5 ಪಂದ್ಯಗಳ ಆ್ಯಶಸ್‌ ಸರಣಿ 2-2 ಅಂತರದಿಂದ ಸಮಬಲದಲ್ಲಿ ಅಂತ್ಯಗೊಂಡಿತ್ತು.

2021ರಲ್ಲಿ ಫೈನಲ್‌
ಲೀಗ್‌ ಹಂತದ ಅಗ್ರ ಎರಡು ತಂಡಗಳು 2021ರ ಜೂನ್‌ನಲ್ಲಿ ಇಂಗ್ಲೆಂಡಿನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಗೆದ್ದ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್ಸ್‌ ಪಟ್ಟ ಪಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next