Advertisement

ಬೂದಿಗೆ ಜೀವ ಬಂದ ಕಥೆ!

10:20 AM Sep 15, 2019 | mahesh |

-ಇಂಗ್ಲೆಂಡ್‌-ಆಸ್ಟ್ರೇಲಿಯ ತಂಡದ ನಡುವಿನ ಆ್ಯಷಸ್‌ ಟೆಸ್ಟ್‌ ಸರಣಿಯ ರೋಚಕ ಚರಿತ್ರೆ

ಕ್ರಿಕೆಟ್‌ ಸಂಸ್ಥೆ ಈ ವರ್ಷದಿಂದ ಟೆಸ್ಟ್‌ ವಿಶ್ವಚಾಂಪಿಯನ್‌ಶಿಪ್‌ ಶುರು ಮಾಡಿದೆ. ಇದಕ್ಕೆ ಕಾರಣ ಟೆಸ್ಟ್‌ ಕ್ರಿಕೆಟ್‌ ತನ್ನ ಜನಪ್ರಿಯತೆ ಕಳೆದುಕೊಂಡು ಪೂರ್ಣ ಕುಸಿದುಹೋಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಜನರೇ ಕಾಣದಂತಾಗುವ ಸ್ಥಿತಿ ಬಂದಿದ್ದು. ಜನರು ಬರುತ್ತಿಲ್ಲವೆಂದು ಶಾಲಾ ಮಕ್ಕಳಿಗೆ ಉಚಿತವಾಗಿ ಟಿಕೆಟ್‌ ಕೊಟ್ಟು ಕೂರಿಸುವ ಹಂತಕ್ಕೆ ಟೆಸ್ಟ್‌ ಬಂದಾಗ ಐಸಿಸಿ ಪರ್ಯಾ ಯೋಚನೆ ಮಾಡಿತು. ವಿಶ್ವದೆಲ್ಲೆಡೆ ಟೆಸ್ಟ್‌ ಕ್ರಿಕೆಟ್‌ ಹೀಗೆ ಕುಸಿದು ಹೋಗಿದ್ದರೂ ಒಂದೇ ಒಂದು ಕಡೆ ಪ್ರೇಕ್ಷಕರು ಸಂಪೂರ್ಣ ಮೈದಾನ ತುಂಬಿಕೊಂಡಿರುತ್ತಾರೆ. ಅದು ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವಿನ ಆ್ಯಷಸ್‌ ಟೆಸ್ಟ್‌ ಸರಣಿ. ಇಲ್ಲಿ ನಿಜಕ್ಕೂ ಜೀವಂತ ಪೈಪೋಟಿ ನಡೆಯುತ್ತದೆ! ಟೆಸ್ಟ್‌ ವಿಶ್ವಚಾಂಪಿಯನ್‌ಶಿಪ್‌ ಶುರುವಾಗುವವರೆಗೆ ಅದನ್ನೇ ವಿಶ್ವಕಪ್‌ ಎಂದು ಹಲವರು ಬಣ್ಣಿಸುತ್ತಿದ್ದರು. ಈಗ ಇಂಗ್ಲೆಂಡ್‌ನ‌ಲ್ಲಿ 5 ಪಂದ್ಯಗಳ ಆ್ಯಷಸ್‌ ನಡೆಯುತ್ತಿದೆ. ಈಗಾಗಲೇ 4 ಟೆಸ್ಟ್‌ ಮುಗಿದು ಆಸ್ಟ್ರೇಲಿಯ 2-1ರಿಂದ ಮುನ್ನಡೆ ಸಾಧಿಸಿದೆ. ಇನ್ನುಳಿದಿರುವುದು 1 ಟೆಸ್ಟ್‌ ಮಾತ್ರ. ಅದರಲ್ಲಿ ಯಾರೇ ಗೆದ್ದರೂ, ಸೋತರೂ, ಡ್ರಾ ಆದರೂ ಟ್ರೋಫಿ ಆಸ್ಟ್ರೇಲಿಯ ಬಳಿಯೇ ಉಳಿಯಲಿದೆ. ಇದಕ್ಕೆ ಕಾರಣ ಹಿಂದಿನ ಸರಣಿಯನ್ನು ಆಸೀಸ್‌ ತಂಡವೇ ಗೆದ್ದಿದ್ದು.

Advertisement

ವಿಶ್ವ ಕ್ರಿಕೆಟ್‌ನ ಆರಂಭಿಕ ಹಂತದಿಂದ ನಡೆಯುತ್ತಿರುವ ಈ ಆ್ಯಷಸ್‌ ಟೆಸ್ಟ್‌ ಸರಣಿ ಪ್ರತೀ ಬಾರಿಯೂ ಅತ್ಯಂತ ರೋಚಕವಾಗಿರುತ್ತದೆ. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಸಮರ ನಡೆದು ಹಲವಾರು ಕಥೆ, ಉಪಕಥೆಗಳ ಸರಣಿಯನ್ನು ಸೃಷ್ಟಿಸುತ್ತದೆ. ಮೈದಾನಕ್ಕೆ ಹಾಜರಾಗಿ ಈ ಪಂದ್ಯವನ್ನು ನೋಡುವುದೇ ಪ್ರೇಕ್ಷಕರಿಗೆ ಒಂದು ಸಂಭ್ರಮ. ಈ ಪಂದ್ಯ ನೋಡಲು ನಡೆಯುವ ಸಾಹಸಗಳೇ ಒಂದು ರೋಮಾಂಚಕ ಕಥನ! ಬನ್ನಿ ಆ ಕಥೆಯನ್ನು ಕೇಳುವ.

ಬೂದಿ ಜೀವಪಡೆದಿದ್ದು ಹೀಗೆ…
ಕ್ರಿಕೆಟ್‌ ಹುಟ್ಟಿದ್ದು ಇಂಗ್ಲೆಂಡ್‌ನ‌ಲ್ಲಿ. ಬೆಳೆದಿದ್ದು ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯ ನಡುವಿನ ಪಂದ್ಯಗಳ ಮೂಲಕ. ಆರಂಭಿಕ ಹಂತದಲ್ಲಿ ಆಸ್ಟ್ರೇಲಿಯಕ್ಕೆ ಇಂಗ್ಲೆಂಡ್‌ ನೆಲದಲ್ಲಿ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಹಳ ವರ್ಷಗಳಿಂದ ಆಸ್ಟ್ರೇಲಿಯನ್ನರು ಇಂಗ್ಲೆಂಡ್‌ನ‌ಲ್ಲಿ ಇಂಗ್ಲೆಂಡನ್ನು ಮಣಿಸಲೇಬೇಕು ಎಂದು ತೀರ್ಮಾನಿಸಿದ್ದರು. ಅದೂ ಒಂದು ದಿನ ಸಂಭವಿಸಿತು. 1882ನೇ ವರ್ಷ. ಆಸ್ಟ್ರೇಲಿಯ ತಂಡ ಇಂಗ್ಲೆಂಡ್‌ಗೆ ಪ್ರವಾಸ ಹೋಗಿತ್ತು. ಆಗ ನಡೆದಿದ್ದು ಕೇವಲ ಒಂದೇ ಒಂದು ಟೆಸ್ಟ್‌. ದಿ ಓವೆಲ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಮೆರೆದಾಡಿದ್ದು ಬರೀ ಬೌಲರ್‌ಗಳೇ. ಪಂದ್ಯದಲ್ಲಿ ರನ್‌ ದಾಖಲಾಗದಿದ್ದರೂ ರೋಚಕತೆಯ ಶೃಂಗಕ್ಕೆ ಮುಟ್ಟಿತ್ತು.

ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ ಕೇವಲ 63 ರನ್‌ಗೆ ಆಲೌಟಾಯಿತು. ಇದನ್ನು ಬೆನ್ನತ್ತಿ ಹೊರಟ ಇಂಗ್ಲೆಂಡ್‌ ತನ್ನ ಮೊದಲ ಇನಿಂಗ್ಸ್‌ನಲ್ಲಿ 101 ರನ್‌ಗಳಿಂದ ಆಲೌಟಾಗಿ 38 ರನ್‌ ಮುನ್ನಡೆ ಪಡೆಯಿತು. 2ನೇ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಿದ ಆಸ್ಟ್ರೇಲಿಯ ಉತ್ತಮವಾಗಿಯೇ ಆಡಿ 122 ರನ್‌ ಗಳಿಸಿತು. ಅಲ್ಲಿಗೆ ಇಂಗ್ಲೆಂಡ್‌ ಗೆಲ್ಲಲು 85 ರನ್‌ ಬೇಕಿತ್ತು. ಪ್ರೇಕ್ಷಕರು, ಸ್ವತಃ ಆಸ್ಟ್ರೇಲಿಯ ತಂಡಕ್ಕೂ ಇಂಗ್ಲೆಂಡ್‌ ಗೆಲ್ಲುವುದರ ಬಗ್ಗೆ ಸಂಶಯವಿರಲಿಲ್ಲ. ಆದರೆ ಒಬ್ಬಗೆ ವ್ಯಕ್ತಿ ಮಾತ್ರ ಇಂಗ್ಲೆಂಡನ್ನು ಸೋಲಿಸುವ ಉಮೇದಿತ್ತು. ಇಂಗ್ಲೆಂಡಿಗರ ವರ್ತನೆಯಿಂದ ರೊಚ್ಚಿಗೆದ್ದಿದ್ದ ಆತ ನೋಡೇ ಬಿಡುವ ಎಂದು ತೀರ್ಮಾನಿಸಿದ್ದ. ಆತ ಆಸೀಸ್‌ ವೇಗಿ ಫ್ರೆಡ್‌ ಸ್ಪಾಫೋರ್ಥ್.

ಮೊದಲನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಪಡೆದಿದ್ದ ಅವರು 2ನೇ ಇನಿಂಗ್ಸ್‌ನ ಆರಂಭದಿಂದಲೇ ಒಬ್ಬೊಬ್ಬರೇ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿದರು. ಕಡೆಯ ಹಂತದಲ್ಲಂತೂ ಕೇವಲ 2 ರನ್‌ ನೀಡಿ 4 ವಿಕೆಟ್‌ ಕಿತ್ತಿದ್ದರು. ಕಡೆಗೂ ಇಂಗ್ಲೆಂಡ್‌ 77 ರನ್‌ಗೆ ಆಲೌಟಾಯಿತು. ಆಸ್ಟ್ರೇಲಿಯ 7 ರನ್‌ಗಳ ಗೆಲುವು ಪಡೆಯಿತು. ಆಗಲೇ ಹುಟ್ಟಿಕೊಂಡಿದ್ದು ಆ್ಯಷಸ್‌ ಎಂಬ ಪದ. ಹೀಗೆಂದರೆ ಬೂದಿ ಎಂದರ್ಥ. ಈ ಬೂದಿಯೇ ಮುಂದೆ ಎರಡೂ ತಂಡಗಳ ಸಮರದ ಹೆಸರಾಯಿತು. ತಮ್ಮ ದೇಶದ ಸೋಲನ್ನು ಒಪ್ಪಿಕೊಳ್ಳಲು ಇಂಗ್ಲೆಂಡಿಗರು ಸಿದ್ಧವಿರಲಿಲ್ಲ. ಎಲ್ಲರೂ ಹತಾಶ ಸ್ಥಿತಿಯಲ್ಲಿದ್ದರು. ಮಾಧ್ಯಮಗಳೂ ಸಿಟ್ಟಾಗಿದ್ದವು. ಆಗ ಇಂಗ್ಲೆಂಡ್‌ನ‌ ಒಂದು ಪತ್ರಿಕೆ, ದ ನ್ಪೋರ್ಟಿಂಗ್‌ ಟೈಮ್ಸ್‌ನಲ್ಲಿ ರೆಜಿನಾಲ್ಡ್‌ ಶಿರ್ಲೆ ಬ್ರೂಕ್ಸ್‌ ಎಂಬ ಕ್ರೀಡಾಬರಹಗಾರ ಹೀಗೆ ಬರೆದರು…

Advertisement

“1882, ಆ.29ರಂದು ದಿ ಓವೆಲ್‌ನಲ್ಲಿ ಮಡಿದ ಇಂಗ್ಲಿಷ್‌ ಕ್ರಿಕೆಟ್‌ನ ಹೃತೂ³ರ್ವಕ ಸ್ಮರಣೆ. ಅಗಲಿಕೆಯಿಂದ ಬೃಹತ್‌ ಪ್ರಮಾಣದಲ್ಲಿ ಸ್ನೇಹಿತರು ಮತ್ತು ಪರಿಚಯಸ್ಥರು ದುಃಖಿತರಾಗಿದ್ದಾರೆ…’

ನಿಮಗೆ ಚಿರಶಾಂತಿ ಸಿಗಲಿ
“ಗಮನಿಸಿ: ದೇಹವನ್ನು ಇಲ್ಲಿ ಸುಡಲಾಗುವುದು. ಬೂದಿಯನ್ನು (ಆ್ಯಷಸ್‌) ಆಸ್ಟ್ರೇಲಿಯಕ್ಕೆ ತೆಗೆದುಕೊಂಡು ಹೋಗಲಾಗುವುದು…’

ಹೀಗೆ ಮಾಡಿದ ಒಂದು ಪದಪ್ರಯೋಗದಿಂದ ಆ್ಯಷಸ್‌ ಪದಬಳಕೆ ಈ ತಂಡಗಳ ನಡುವೆ ಶುರುವಾಯಿತು. ಆಗ ಇಂಗ್ಲೆಂಡ್‌ ಕ್ರಿಕೆಟ್‌ ನಾಯಕ ಇವೊ ಬ್ಲೆ„ 1882-83ರ ಆಸ್ಟ್ರೇಲಿಯ ಪ್ರವಾಸದಲ್ಲಿ ಆ ಕಾಲ್ಪನಿಕ ಬೂದಿಯನ್ನು ಮರಳಿ ತಂದೇ ತರುತ್ತೇನೆ ಎಂದು ಶಪಥ ಮಾಡಿದರು! 3 ಟೆಸ್ಟ್‌ಗಳ ಆ ಪ್ರವಾಸದಲ್ಲಿ 2 ಟೆಸ್ಟ್‌ ಗೆದ್ದು ಇಂಗ್ಲೆಂಡಿಗರು ಸರಣಿ ಜಯಿಸಿದರು. ಆಗ ಆಸ್ಟ್ರೇಲಿಯದ ಕೆಲವು ಮಹಿಳೆಯರು ಬೈಲ್ಸ್‌ ಅನ್ನು ಸುಟ್ಟು ಮಾಡಿದ ಬೂದಿಯನ್ನು ಒಂದು ಸಣ್ಣ ಶೀಷೆಯಲ್ಲಿಟ್ಟು ಬ್ಲೆ„ಗೆ ನೀಡಿದರು. ಮುಂದೆ ಬ್ಲೆ„ ತೀರಿಕೊಂಡಾಗ ಆ ಬೂದಿಯ ಶೀಷೆಯನ್ನು ಅವರ ಪತ್ನಿ ಎಂಸಿಸಿಗೆ ನೀಡಿದರು. ಅನಂತರ ಸಾಂಕೇತಿಕವಾಗಿ ಗೆದ್ದ ತಂಡ ಬೂದಿಯ ಶೀಷೆಯನ್ನು ಹಿಡಿದುಕೊಳ್ಳಲು ಆರಂಭಿಸಿತು. 1998ರಿಂದ ಗೆದ್ದ ತಂಡಕ್ಕೆ ಅಧಿಕೃತ ಬೂದಿಯ ಶೀಷೆಯನ್ನೇ ಟ್ರೋಫಿ ರೂಪದಲ್ಲಿ ಕೊಡಲು ಆರಂಭವಾಯಿತು. ಇದುವರೆಗೆ 70 ಬಾರಿ ಆ್ಯಷಸ್‌ ಸರಣಿ ನಡೆದಿದೆ. ಅದರಲ್ಲಿ ಇಂಗ್ಲೆಂಡ್‌ 32, ಆಸ್ಟ್ರೇಲಿಯ 33 ಬಾರಿ ಜಯಿಸಿದೆ. 5 ಬಾರಿ ಸರಣಿ ಡ್ರಾಗೊಂಡಿದೆ!

 -ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next