Advertisement

ಹೊಸ ಸೇತುವೆ ಮೇಲೆ ಪರೀಕ್ಷಾರ್ಥ ವಾಹನ ಸಂಚಾರ

03:07 PM Jul 20, 2018 | |

ಹರಿಹರ: ಹರಿಹರ-ಕುಮಾರಪಟ್ಟಣಂ ಮಧ್ಯೆ ತುಂಗಭದ್ರಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ಕೊನೆ ಹಂತದಲ್ಲಿದ್ದು, ಹೊಸ ಸೇತುವೆ ಮೇಲೆ ಪರೀಕ್ಷಾರ್ಥ ವಾಹನ ಸಂಚಾರ ಆರಂಭಿಸಲಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆ ಬಸ್‌ಗಳು ಅಲ್ಲದೆ ಲಾರಿ ಮುಂತಾದ ಭಾರಿ ವಾಹನಗಳು ಕಳೆದೊಂದು ವಾರದಿಂದ ಸೇತುವೆ ಮೇಲೆ ಸಂಚಾರ ಆರಂಭಿಸಿದ್ದು, ಎಂಜಿನಿಯರ್‌ಗಳು ಸೇತುವೆ ಬಳಿ ಹಾಜರಿದ್ದು, ತಾಂತ್ರಿಕತೆಗಳನ್ನು ಪರಿಶೀಲಿಸುತ್ತಿದ್ದಾರೆ.

ಸೇತುವೆಯ ಆರಂಭ ಮತ್ತು ಕೊನೆಯಲ್ಲಿ ಏರಿಗಳ (ಅಬಾರ್ಡ್‌ಮೆಂಟ್‌) ನಿರ್ಮಾಣ ಸಹ ಮುಗಿದಿದ್ದು, ಸೇತುವೆಯಿಂದ ದರ್ಗಾದವರೆಗೆ 200 ಮೀ. ರಸ್ತೆಗೆ ಹಾಗೂ ಲಿಂಕ್‌ ರಸ್ತೆ ಡಾಂಬರೀಕರಣ ಮತ್ತು ಸೇತುವೆ ಇಕ್ಕೆಲಗಳಲ್ಲಿ ಸೈಡ್‌ ವಾಲ್‌ ನಿರ್ಮಾಣ ಬಾಕಿ ಇದ್ದು, ಇನ್ನೆರಡು ತಿಂಗಳಲ್ಲಿ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೆಆರ್‌ ಡಿಸಿಎಲ್‌ ಎಇಇ ವಸಂತ್‌ ಪತ್ರಿಕೆಗೆ ತಿಳಿಸಿದ್ದಾರೆ.

ಆರ್ಥಿಕತೆಗೆ ಚೇತರಿಕೆ: ಹಳೆ ಸೇತುವೆ ಶಿಥಿಲಗೊಂಡು ಭಾರೀ ವಾಹನಗಳು ಬೈಪಾಸ್‌ ರಸ್ತೆ ಮೂಲಕ ಸಾಗುತ್ತಿದ್ದರಿಂದ ಹಿನ್ನೆಡೆ ಅನುಭವಿಸುತ್ತಿದ್ದ ಹರಿಹರದ ಆರ್ಥಿಕತೆ ನೂತನ ಸೇತುವೆಯಿಂದ ಚೇತರಿಸಿಕೊಳ್ಳಲಿದೆ. ಸಾರಿಗೆ ಸಂಸ್ಥೆ ಬಸ್‌ಗಳು ಸೇರಿದಂತೆ ಖಾಸಗೀ ವಾಹನಗಳು 7 ಕಿ.ಮೀ. ಸುತ್ತಿ ಬಳಸಿ ಸಂಚರಿಸುವುದು ತಪ್ಪಿ ಸಮಯ, ಇಂಧನ ಉಳಿತಾಯವಾಗಲಿದೆ. 

ನೂತನ ಸೇತುವೆ ಮೇಲೆ ಸಂಚರಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರು ಹೊಸತನ ಅನುಭವಿಸುತ್ತಿದ್ದಾರೆ. ಮೈದುಂಬಿ ಹರಿಯುವ ನದಿಯನ್ನು ಹೊಸ ಸೇತುವೆ ಮೇಲೆ ವೀಕ್ಷಣೆ ಮಾಡುತ್ತಿರುವ ನಗರದ ಜನತೆಯೂ ಸಂತಸ ಪಡುತ್ತಿದ್ದಾರೆ. 

Advertisement

ಹೊಸ ಸೇತುವೆಯ ವಿವರ: ಹಳೆ ಸೇತುವೆ 305 ಮೀ. ಉದ್ದವಿದ್ದರೆ ನೂತನ ಸೇತುವೆ ಒಟ್ಟು 295 ಮೀ.ಉದ್ದವಿದೆ. ಹಳೆ‌ ಸೇತುವೆ 5.25 ಮೀ. ಅಗಲವಿದ್ದರೆ, ನೂತನ ಸೇತುವೆ ಅದರ ಎರಡು ಪಟ್ಟು ಅಗಲವಾಗಿದೆ. ಹಳೆ ಸೇತುವೆಗೆ 18.4 ಮೀ. ಅಂತರದಲ್ಲಿ 14 ಕಮಾನುಗಳಿದ್ದರೆ, ಹೊಸ ಸೇತುವೆಗೆ 42 ಮೀ. ಅಂತರದಲ್ಲಿ 7 ಕಮಾನುಗಳಿವೆ. 

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿ.ಪಿ. ಹರೀಶ್‌ ಶಾಸಕರಾಗಿದ್ದಾಗ 2011-12ನೇ ವರ್ಷದ ರಾಜ್ಯ ಬಜೆಟ್‌ನಲ್ಲಿ ಸೇತುವೆ ಕಾಮಗಾರಿಗೆ 19.87 ಕೋಟಿ ರೂ. ಅನುದಾನ ನಿಗ ದಿ ಮಾಡಲಾಗಿತ್ತು. ಈಸ್ಟ್‌ ಕೋಸ್ಟ್‌ ಕನ್ಸ್‌ಟ್ರಕ್ಷನ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ಕಂಪನಿಗೆ ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆ ನೀಡಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ಉಸ್ತುವಾರಿ ವಹಿಸಲಾಗಿತ್ತು. 2013ರ ಡಿಸೆಂಬರ್‌ ಒಳಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಗುತ್ತಿಗೆದಾರರ ಆರ್ಥಿಕ ಸಂಕಷ್ಟದಿಂದಾಗಿ 7 ವರ್ಷಗಳವರೆಗೆ ಮುಂದುವರೆಯಿತು.

 ಹಳೆ ಸೇತುವೆ ಇತಿಹಾಸ: ಸುಮಾರು ಒಂದೂವರೆ ಶತಮಾನದ ಹಿಂದೆ ಬ್ರಿಟಿಷರಿಂದ ನಿರ್ಮಿಸಲ್ಪಟ್ಟಿದ್ದ ಹಳೆ ಸೇತುವೆ ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗಗಳ ಮಹತ್ವದ ಸಂಪರ್ಕ ಕೊಂಡಿಯಾಗಿತ್ತು. ಅಂದಿನ ಉನ್ನತ ತಂತ್ರಜ್ಞಾನ ಬಳಸಿ ನಿರ್ಮಿಸಿದ್ದ 999 ಅಡಿ ಉದ್ದದ ಸೇತುವೆಯ 2 ಕಮಾನುಗಳು 1924 ರಲ್ಲಿ ಪ್ರವಾಹ, ನದಿ ನೀರಿನ ಸೆಳವಿಗೆ ತುತ್ತಾಗಿ ಕುಸಿದಿದ್ದವು. ಬ್ರಿಟಿಷ್‌ ಸರ್ಕಾರ ಅವುಗಳನ್ನು ಪುನರ್‌ನಿರ್ಮಿಸಿತ್ತು. 

ಸ್ವಾತಂತ್ರ್ಯ ನಂತರದಲ್ಲಿ ವಾಹನಗಳ ಹೆಚ್ಚಳ, ಸೂಕ್ತ ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡಿದ್ದ ಸೇತುವೆಯ ಮತ್ತೂಂದು ಕಮಾನು ಸಹ ಬಿರುಕು ಬಿಟ್ಟಿದ್ದರಿಂದ ಕಳೆದ 25 ವರ್ಷಗಳಿಂದ ಸೇತುವೆ ಮೇಲೆ ಭಾರೀ ವಾಹನ ಸಂಚಾರ ನಿಷೇಧಿಸಲಾಗಿತ್ತು. ಅಂದಿನಿಂದಲೂ ನೂತನ ಸೇತುವೆ ನಿರ್ಮಾಣಕ್ಕೆ ಈ ಭಾಗದ ಜನರು, ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದ್ದು ಅದು ಈಗ
ಈಡೇರುತ್ತಿದೆ. 

ನಿತ್ಯ ಅಂದಾಜು 300 ಬಸ್‌ಗಳು ಹರಿಹರ-ರಾಣೆಬೆನ್ನೂರು ಮಧ್ಯೆ ಸಂಚರಿಸುತ್ತಿದ್ದು, ಅಪಾರ ಪ್ರಮಾಣದ ಇಂಧನ ಹಾಗೂ ಸಮಯದ ಉಳಿತಾಯವಾಗುವುದು ನಮಗೆ ಅತೀವ ಸಂತಸ ತಂದಿದೆ. ಪ್ರಯಾಣ ದರ ಇಳಿಕೆ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ.  ಪರಮೇಶ್ವರಪ್ಪ, ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್‌, ಹರಿಹರ. 

Advertisement

Udayavani is now on Telegram. Click here to join our channel and stay updated with the latest news.

Next